ಬ್ಯಾಂಕ್ ದರೋಡೆ ತನಿಖೆ ವೇಳೆ ನಕಲಿ ನಂಬರ್ ವಾಹನಗಳ ಹಾವಳಿ ಬಯಲಿಗೆ: ರಾಜ್ಯದೆಲ್ಲೆಡೆ ಇವುಗಳದ್ದೇ ಕಾರುಬಾರು
ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆಯ ತನಿಖೆಯಿಂದ ವಾಹನಗಳ ಫೇಕ್ ನಂಬರ್ ಪ್ಲೇಟ್ ಜಾಲವೂ ಬಯಲಿಗೆ ಬಂದಿದೆ. ಕರ್ನಾಟಕದಲ್ಲಿ ಸಾವಿರಾರು ನಕಲಿ ನಂಬರ್ ಪ್ಲೇಟ್ ವಾಹನಗಳು ಓಡಾಡುತ್ತಿವೆ ಎಂಬ ಆಘಾತಕಾರಿ ಅಂಶವೂ ಬೆಳಕಿಗೆ ಬಂದಿದೆ. ವಾಹನಗಳ ನಂಬರ್ ನಕಲಿಯಾಗಿದ್ದು ಫಾಸ್ಟ್ ಟ್ಯಾಗ್ ಇನ್ನೊಂದು ವಾಹನದ ನಂಬರ್ನಲ್ಲಿರುವುದು ಗೊತ್ತಾಗಿದೆ. ವಿವರಗಳಿಗೆ ಮುಂದೆ ಓದಿ.
ಮಂಗಳೂರು, ಜನವರಿ 21: ಉಳ್ಳಾಲ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ ಕರ್ನಾಟಕದಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಮೂವರು ಆರೋಪಿಗಳನ್ನು ಬಂಧಿಸಿರುವ ಮಂಗಳೂರು ಪೊಲೀಸರು ಚಿನ್ನಾಭರಣಗಳನ್ನೂ ವಶಪಡಿಸಿಕೊಂಡಿದ್ದಾರೆ. ಈ ನಡುವೆ, ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ರಾಜ್ಯಾದ್ಯಂತ ಸಾವಿರಾರು ವಾಹನಗಳು ನಕಲಿ ನಂಬರ್ ಪ್ಲೇಟ್ ಅಳವಡಿಸಿ ಓಡಾಡುತ್ತಿವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಬ್ಯಾಂಕ್ ದರೋಡೆ ಮಾಡಿದ ದರೋಡೆಕೋರರು ಫಿಯೆಟ್ ಕಾರಿನಲ್ಲಿ ತಲಪಾಡಿ ಟೋಲ್ ಮೂಲಕ ತೆರಳಿದ್ದಾರೆ ಎಂಬುದು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇನ್ನೊಂದು ಕಾರ್ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್ ಗೇಟ್ನಿಂದ ಪಾಸಾಗಿದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದರು. ಆಗ ಸಿಕ್ಕಿದ್ದೇ, ನಕಲಿ ನಂಬರ್ ಪ್ಲೇಟ್ನ ಹತ್ತಾರು ವಾಹನಗಳು ಟೋಲ್ ಗೇಟ್ ಮೂಲಕ ಪಾಸಾಗಿವೆ ಎಂಬ ಸ್ಫೋಟಕ ಮಾಹಿತಿ.
ವಾಹನದ ನಂಬರೇ ಬೇರೆ, ಫಾಸ್ಟ್ಟ್ಯಾಗ್ ರೀಡ್ ಮಾಡೋ ನಂಬರೇ ಬೇರೆ!
ಬ್ರಹ್ಮರಕೂಟ್ಲು ಟೋಲ್ ಗೇಟ್ನಲ್ಲಿ ಬ್ಯಾಂಕ್ ದರೋಡೆಕೋರರು ಪಾಸಾಗಿದ್ದಾರೆಂಬ ಶಂಕೆಯಿಂದ ಪರಿಶೀಲಿಸಿದ್ದರೂ, ಅವರು ಸರ್ವಿಸ್ ರಸ್ತೆಯ ಮೂಲಕ ತೆರಳಿದ್ದಾರೆ ಎಂಬುದು ಬಳಿಕ ಗೊತ್ತಾಗಿದೆ. ಆದರೆ, ಆ ಟೋಲ್ ಗೇಟ್ನ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕಾರು, ಟೆಂಪೋ ಟ್ರಾವೆಲ್ಲರ್, ಲಾರಿ ಸೇರಿದಂತೆ ಹತ್ತಾರು ವಾಹನಗಳು ಫೇಕ್ ನಂಬರ್ ಪ್ಲೇಟ್ ಅಳವಡಿಸಿರುವುದು ಬೆಳಕಿಗೆ ಬಂದಿದೆ. ಅಂದರೆ ವಾಹನದಲ್ಲಿ ಇರುವ ನಂಬರೇ ಬೇರೆ, ಫಾಸ್ಟ್ ಟ್ಯಾಗ್ ರೀಡ್ ಮಾಡುವ ನಂಬರೇ ಬೇರೆ!
ಈ ನಕಲಿ ನಂಬರ್ ಪ್ಲೇಟನ್ನು ಟೋಲ್ ಗೇಟ್ನವರು ಪರಿಶೀಲಿಸುವುದಿಲ್ಲ. ಯಾಕೆಂದರೆ, ಫಾಸ್ಟ್ ಟ್ಯಾಗ್ನಿಂದ ಹಣ ಪಾವತಿಯಾಗಿ ಗೇಟ್ ಓಪನ್ ಆಗುತ್ತದೆ, ವಾಹನ ಮುಂದೆ ಹೋಗುತ್ತದೆ. ಆ ಸಂದರ್ಭ ವಾಹನದ ನಂಬರ್ ಹಾಗೂ ಫಾಸ್ಟ್ ಟ್ಯಾಗ್ನಲ್ಲಿ ಬಂದ ನಂಬರನ್ನು ಟೋಲ್ ಸಿಬ್ಬಂದಿ ಟ್ಯಾಲಿ ಮಾಡುವುದಿಲ್ಲ. ಅಷ್ಟೊಂದು ಸಮಯಾವಕಾಶವೂ ಅವರಿಗೆ ಇರುವುದಿಲ್ಲ. ಆದರೆ ಪೊಲೀಸರು ಕಳೆದ ಮೂರು ದಿನದ ಸಿಸಿ ಕ್ಯಾಮರಾ ದೃಶ್ಯವನ್ನು ಪರಿಶೀಲಿಸಿದಾಗ ಇದೊಂದೇ ಟೋಲ್ಗೇಟ್ನಲ್ಲೇ ಹತ್ತಕ್ಕೂ ಅಧಿಕ ನಕಲಿ ನಂಬರ್ ಪ್ಲೇಟ್ ಇರುವ ವಾಹನಗಳು ಸಂಚರಿಸಿರುವುದು ಪತ್ತೆಯಾಗಿದೆ.
ನಕಲಿ ನಂಬರ್ ಪ್ಲೇಟ್ ವಾಹನಗಳ ತನಿಖೆಗೆ ಮುಂದಾದ ಪೊಲೀಸರು
ಈ ರೀತಿ ನಕಲಿ ನಂಬರ್ ಪ್ಲೇಟ್ ಯಾಕಾಗಿ ಅಳವಡಿಸಿದ್ದಾರೆ ಎಂಬ ಸಂದೇಹ ಇದೀಗ ಬಲವಾಗಿದೆ. ಕೆಲವರು ಎರಡೆರಡು ವಾಹನಗಳಿಗೂ ಒಂದೇ ಫಾಸ್ಟ್ ಟ್ಯಾಗ್ ಬಳಕೆ ಮಾಡುವವರೂ ಇದ್ದಾರೆ. ಆದರೂ ಈ ರೀತಿ ನಕಲಿ ನಂಬರ್ ಪ್ಲೇಟ್ ಅಳವಡಿಸಿರುವ ವಾಹನಗಳ ತಪಾಸಣೆ ನಡೆಸಲೂ ಇದೀಗ ಪೊಲೀಸ್ ಇಲಾಖೆ ಮುಂದಾಗಿದೆ.
ಇದನ್ನೂ ಓದಿ: ಮಂಗಳೂರಿನ ಕೋಟೆಕಾರು ಬ್ಯಾಂಕ್ ದರೋಡೆ: ಮೂವರು ಆರೋಪಿಗಳ ಬಂಧನ
ಯಾವ ಕಾರಣಕ್ಕಾಗಿ ವಾಹನದಲ್ಲೊಂದು, ಫಾಸ್ಟ್ ಟ್ಯಾಗ್ನಲ್ಲೊಂದು ವಾಹನದ ನಂಬರ್ ಅಳವಡಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಒಟ್ಟಿನಲ್ಲಿ, ಕೋಟೆಕಾರು ಬ್ಯಾಂಕ್ ದರೋಡೆಕೋರರ ತನಿಖೆಯಿಂದ ಮತ್ತೊಂದು ಅಕ್ರಮ ಬೆಳಕಿಗೆ ಬಂದಂತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:02 am, Tue, 21 January 25