ಕರಾವಳಿಯಲ್ಲಿ ಶುರುವಾಯ್ತು ಹೊಸ ವಿವಾದ; ದೇಗುಲದ ಆಭರಣ ಹೆಸರಲ್ಲಿ ಹೈಡ್ರಾಮಾ, ಆಡಳಿತ ಮಂಡಳಿ-ಬಾಳ್ತಿಲ ವಂಶಸ್ಥರ ನಡುವೆ ಕದನ
ದೇವಸ್ಥಾನಗಳ ವಿಚಾರದಲ್ಲಿ ಸರ್ಕಾರ ಆಗಾಗ ಎಡವಟ್ಟು ಮಾಡುತ್ತಲೇ ಇದೆ. ಮೈಸೂರಿನಲ್ಲಿ ದೇವಾಸ್ಥಾನ ನೆಲಸಮ ಮಾಡಿದ ಬಳಿಕ ಸರ್ಕಾರದ ವಿರುದ್ಧ ಜನ ಕಿಡಿಕಾರಿದ್ರು. ಇದೀಗ ಕರಾವಳಿಯ ದೈವಸ್ಥಾನಗಳ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪ ಆರೋಪ ಕೇಳಿಬಂದಿದೆ. ಹಾಗಾದ್ರೆ ಏನಿದು ಹೊಸ ವಿವಾದ?
ಮಂಗಳೂರು: ಕಳೆದ ತಿಂಗಳು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹರದನಹಳ್ಳಿಯ ಮಹದೇವಮ್ಮ ದೇವಾಲಯ ತೆರವು ಮಾಡ್ತಿದ್ದಂತೆ ಸರ್ಕಾರದ ವಿರುದ್ಧ ಆಕ್ರೋಶದ ಕಿಚ್ಚು ಹೊತ್ತಿಕೊಂಡಿತ್ತು. ರಾಜ್ಯದ ಮೂಲೆ ಮೂಲೆಯಲ್ಲೂ ಬೆಂಕಿ ಹೊತ್ತಿಕೊಂಡಿತ್ತು. ಇದೀಗ, ಸರ್ಕಾರ ನೇರವಾಗಿ ಕರಾವಳಿ ಭಾಗದ ದೈವಸ್ಥಾನಗಳ ಅನಾದಿ ಕಾಲದ ಆಚರಣೆ ಮತ್ತು ಪದ್ದತಿಗಳ ಮೇಲೆ ಸವಾರಿ ಮಾಡಲು ಹೊರಟಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.
ಬಾಳ್ತಿಲ ಬೀಡು, ಆಡಳಿತ ಸಮಿತಿ ನಡುವೆ ಸಮರ? ಕೆಲ ದಿನಗಳ ಹಿಂದೆ ಮಾಜಿ ಸಚಿವ ರಮಾನಾಥ್ ರೈ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ರು. ದೈವಸ್ಥಾನಗಳನ್ನ ಧಾರ್ಮಿಕ ಪರಿಷತ್ ನಿಯಂತ್ರಿಸ್ತಿದೆ. ಅವುಗಳ ಆಚರಣಾ ಕ್ರಮಗಳನ್ನು ಬದಲಿಸಿ ಸರ್ಕಾರ ಹಸ್ತಕ್ಷೇಪ ಮಾಡ್ತಿದೆ ಅಂತ ಆರೋಪಿಸಿದ್ರು. ಇದೀಗ ರಮಾನಾಥ್ ರೈ ಹೇಳಿದಂತೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನಲ್ಲಿ ಹೊಸ ಚರ್ಚೆ ಶುರುವಾಗಿದೆ. ಯಾಕಂದ್ರೆ, ಕಾಂಪ್ರಬೈಲು ಶ್ರೀ ಉಳ್ಳಾಲ್ತ ದೇಗುಲ ಮತ್ತು ಅಜ್ಜರ ದೈವಗಳ ಭಂಡಾರಕ್ಕೆ ಸಂಬಂಧಿಸಿದಂತೆ ಬಾಳ್ತಿಲ ಬೀಡು ಮತ್ತು ದೈವಸ್ಥಾನದ ಆಡಳಿತ ಸಮಿತಿ ನಡುವೆ ಭಿನ್ನಾಭಿಪ್ರಾಯ ಮೂಡಿದೆ.
ಅಂದ್ಹಾಗೆ, ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರೋ ಈ ದೈವಸ್ಥಾನದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸೂಚನೆಯಂತೆ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಆದ್ರೆ ಈ ಆಡಳಿತ ಮಂಡಳಿ ರಾಜ್ಯ ಧಾರ್ಮಿಕ ಪರಿಷತ್ ಸೂಚನೆಯಂತೆ ದೈವಸ್ಥಾನದ ಹಲವು ವರ್ಷಗಳ ಸಂಪ್ರದಾಯವನ್ನೇ ಮುರಿದಿದೆ ಎಂಬ ಆರೋಪ ಕೇಳಿ ಬಂದಿದೆ. ಅಂದ್ರೆ, ದೈವಸ್ಥಾನಗಳ ಆಭರಣ, ಪರಿಕರಗಳನ್ನು ಇಡುವ ಜಾಗ ಬದಲಿಸಿದೆಯಂತೆ.
ಇನ್ನು, ಮೊನ್ನೆ ನವರಾತ್ರಿ ಆಚರಣೆ ವೇಳೆ ವಾಡಿಕೆಯಂತೆ ಬಾಳ್ತಿಲ ಬೀಡು ಭಂಡಾರ ಮನೆಯಿಂದ ದೇವರಿಗೆ ಬಳಸೋ ಆಭರಣಗಳು ದೈವಸ್ಥಾನಕ್ಕೆ ತರಲಾಗಿತ್ತು. ಪೂಜೆ ಮುಗಿದ ಬಳಿಕ ಆ ವಸ್ತುಗಳು ಮತ್ತೆ ಬಾಳ್ತಿಲ ಬೀಡಿನ ಭಂಡಾರದ ಮನೆ ಸೇರಬೇಕಿತ್ತು. ಆದ್ರೆ ಈ ಬಾರಿ ಆಭರಣದ ವಸ್ತುಗಳನ್ನ ವಾಪಸ್ ಕೊಡಲ್ಲ ಅಂತ ಹೊಸ ಆಡಳಿತ ಮಂಡಳಿ ತಗಾದೆ ತೆಗೆದಿದೆ. ಅಲ್ದೆ, ಕರಾವಳಿಯ ಪ್ರಭಾವಿ ಹಿಂದೂ ಮುಖಂಡ ಆರ್.ಎಸ್.ಎಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ಕೂಡ ಆಭರಣ ವಾಪಸ್ ಕೊಡಲು ಆಗಲ್ಲ ಅಂತಾ ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ಬಾಳ್ತಿಲ ವಂಶಸ್ಥರು ಹೈ ಕೋರ್ಟ್ ಆದೇಶದ ಪ್ರತಿ ತೋರಿಸಿ ಭಂಡಾರ ವಾಪಾಸ್ ಕೊಡುವಂತೆ ಕೇಳಿದ್ರೂ ಏನೋ ಪ್ರಯೋಜನ ಆಗಿಲ್ಲ. ಜಿಲ್ಲಾಧಿಕಾರಿಯೇ ಆಭರಣ ಕೊಡಿ ಅಂದ್ರೂ ಹೊಸ ಆಡಳಿತ ಮಂಡಳಿ ಕೇಳ್ತಿಲ್ಲ.
ಸದ್ಯ, ದೈವಸ್ಥಾನದ ಭಂಡಾರ ವಿವಾದ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇತ್ತ ಕಲ್ಲಡ್ಕ ಭಟ್ ದೈವಸ್ಥಾನದ ಆಡಳಿತ ಮಂಡಳಿ ಪರವಾಗಿ ಬ್ಯಾಟ್ ಬೀಸಿದ್ರೆ, ಅತ್ತ ರಮಾನಾಥ್ ರೈ ಬಾಳ್ತಿಲ ಬೀಡು ವಂಶಸ್ಥರ ಪರ ನಿಂತಿದ್ದಾರೆ. ಹೀಗಾಗಿ ಈ ಸಂಘರ್ಷ ಎಲ್ಲಿಗೆ ಬಂದು ನಿಲ್ಲುತ್ತೋ ಕಾದು ನೋಡಬೇಕು.
-ಪೃಥ್ವಿರಾಜ್ ಬೊಮ್ಮನಕೆರೆ