ರಸ್ತೆ, ಚರಂಡಿ ಅಭಿವೃದ್ಧಿ ವಿಷಯ ಬಿಡಿ, ಲವ್ ಜಿಹಾದ್ ಕಡೆ ಗಮನ ಕೊಡಿ: ಬಿಜೆಪಿ ರಾಜ್ಯಾಧ್ಯಕ್ಷರ ಬಾಯಲ್ಲಿ ಇದೆಂತಾ ಮಾತು..!

| Updated By: ರಮೇಶ್ ಬಿ. ಜವಳಗೇರಾ

Updated on: Jan 03, 2023 | 3:20 PM

ರಸ್ತೆ, ಚರಂಡಿ ಸಮಸ್ಯೆಯಲ್ಲ. ಲವ್ ಜಿಹಾದ್ ಕಡೆ ಗಮನ ಕೊಡಿ ಎಂದು ತಮ್ಮ ಕಾರ್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕಟೀಲ್ ಕರೆ ಕೊಟ್ಟಿದ್ದು, ಈ ಹೇಳಿಕೆ ಈಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ರಸ್ತೆ, ಚರಂಡಿ ಅಭಿವೃದ್ಧಿ ವಿಷಯ ಬಿಡಿ, ಲವ್ ಜಿಹಾದ್ ಕಡೆ ಗಮನ ಕೊಡಿ: ಬಿಜೆಪಿ ರಾಜ್ಯಾಧ್ಯಕ್ಷರ ಬಾಯಲ್ಲಿ ಇದೆಂತಾ ಮಾತು..!
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​
Follow us on

ಮಂಗಳೂರು: ಲವ್ ಜಿಹಾದ್ ವಿಷಯದ ಮೇಲೆ ಕೇಂದ್ರೀಕರಿಸಬೇಕೇ ಹೊರತು ರಸ್ತೆ ಮತ್ತು ಚರಂಡಿ ಸಮಸ್ಯೆಗಳ ಬಗ್ಗೆ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Naleen Kumar Kateel)​ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಮಂಗಳೂರಿನಲ್ಲಿ ಸೋಮವಾರ(ಜನವರಿ 02) ‘ಬೂತ್ ವಿಜಯ ಅಭಿಯಾನ’ದಲ್ಲಿ (BJP Booth Vijaya Abhiyana) ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕಟೀಲ್ , ರಸ್ತೆ, ಚರಂಡಿ ಅಭಿವೃದ್ಧಿ ಕುರಿತು ಬಿಟ್ಟು, ಲವ್ ಜಿಹಾದ್ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುದರ ಕುರಿತು ಜನರು ಚರ್ಚೆಯಲ್ಲಿ ತೊಡಗುವಂತೆ ಮಾಡಿ ಬಿಜೆಪಿ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.

ಇದನ್ನೂ ಓದಿ: Love Jihad Helpline: ಲವ್ ಜಿಹಾದ್ ವಿರುದ್ಧ ಜಾಗೃತಿ: ಒಂದು ಹೆಜ್ಜೆ ಮುಂದಿಟ್ಟ ಹಿಂದೂ ಸಂಘಟನೆಗಳು, ಹೆಲ್ಪ್‌ಲೈನ್ ಆರಂಭ

ರಸ್ತೆಗಳು ಮತ್ತು ಚರಂಡಿಯಂತಹ ಸಣ್ಣ ಸಮಸ್ಯೆಗಳ ಬಗ್ಗೆ ಮಾತನಾಡಬೇಡಿ. ವಿಧಾನಸೌಧದೊಳಗೆ ವೇದವ್ಯಾಸರು ಕೈ ಎತ್ತಲಿಲ್ಲ ಎಂದು ಚರ್ಚೆ ಮಾಡಬೇಡಿ. ನಳಿನ್ ಕುಮಾರ್ ಅವರಿಗೆ ವಿಷಯ ಎತ್ತುವ ಹಕ್ಕು ಇಲ್ಲ ಎಂದು ಹೇಳಬೇಡಿ. ನಳಿನ್ ಕುಮಾರ್ ಕಟೀಲ್ ಅವರ ಹಕ್ಕುಗಳಿಂದ ನೀವು ಚಿನ್ನವನ್ನು ಪಡೆಯುವುದಿಲ್ಲ. ನೀವು ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿದ್ದರೆ ಮತ್ತು ನೀವು ಲವ್ ಜಿಹಾದ್ ನಿಲ್ಲಿಸಲು ಬಯಸಿದರೆ, ನಮಗೆ ಭಾರತೀಯ ಜನತಾ ಪಕ್ಷ ಬೇಕು. ಲವ್ ಜಿಹಾದ್ ತೊಲಗಲು ಬಿಜೆಪಿ ಬೇಕು ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಲವ್ ಜಿಹಾದ್’ ಹೆಚ್ಚಾಗಲಿದೆ. ಗೋಹತ್ಯೆ ಮತ್ತು ಧಾರ್ಮಿಕ ಮತಾಂತರದ ವಿರುದ್ಧದ ಕಾನೂನುಗಳನ್ನು ಹಿಂಪಡೆಯುತ್ತಾರೆ. ಜನರು ಈಗ ‘ನವ ಕರ್ನಾಟಕ’ ಬೇಕೇ ಅಥವಾ ‘ಭಯೋತ್ಪಾದನೆಯ ನಾಡು ಬೇಕೇ ಎಂಬುದನ್ನು ನಿರ್ಧರಿಸಬೇಕಿದೆ. ಕಾಂಗ್ರೆಸ್ ಭಯೋತ್ಪಾದಕರ ಪಕ್ಷ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ ಭಯೋತ್ಪಾದಕರಿಗೆ ಫೀಲ್ಡ್ ಡೇ ಆಗುತ್ತದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು..

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (ಕೆಎಫ್‌ಡಿ)ಯನ್ನು ನಿಷೇಧಿಸುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಿಟ್ಟ ನಿರ್ಧಾರ ಕೈಗೊಂಡರು. ಈ ಸಂಘಟನೆಗಳನ್ನು ನಿಷೇಧಿಸದಿದ್ದರೆ ಮೋನಪ್ಪ ಭಂಡಾರಿ ಮತ್ತು ಹರಿಕೃಷ್ಣ ಬಂಟ್ವಾಳ್ (ಬಿಜೆಪಿ ನಾಯಕರು) ಇಷ್ಟೊತ್ತಿಗಾಗಲೇ ಸತ್ತಿರುತ್ತಿದ್ದರು ಎಂದರು.

ಮುಂದಿನ‌ ಚುನಾವಣೆಯೊಳಗೆ ಸಿದ್ಧರಾಮಯ್ಯ ಜೈಲು ಪಾಲು

ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್‌ನ ಹಿರಿಯ ನಾಯಕ ಸಿದ್ದರಾಮಯ್ಯ ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಪಾಲಾಗಲಿದ್ದಾರೆ “ಈಗಷ್ಟೇ ಮುಗಿದ ಚಳಿಗಾಲದ ಅಧಿವೇಶನದಲ್ಲಿ ನೀವು (ಕಾಂಗ್ರೆಸ್) ‘ಶೇಕಡಾ 40 ಕಮಿಷನ್’ ಮತ್ತು ‘ಪೇ ಸಿಎಂ’ ವಿಷಯವನ್ನು ಏಕೆ ಪ್ರಸ್ತಾಪಿಸಲಿಲ್ಲ. ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ ಜೈಲಿನಲ್ಲಿರುವ ಕಾರಣ ನೀವು ಆ ವಿಚಾರದ ಕುರಿತು ದನಿ ಎತ್ತಲಿಲ್ಲ. ಸಿದ್ದರಾಮಯ್ಯ ಲೋಕಾಯುಕ್ತವನ್ನು ಮುಚ್ಚಿದರು. ಆದರೆ, ನಾವು ಅದನ್ನು ಬಲಪಡಿಸಿದ್ದೇವೆ. ಭ್ರಷ್ಟಾಚಾರ ಪ್ರಕರಣಗಳ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸುವಂತೆ ನಾವು ಕೇಳಿದ್ದೆವು. ಆದರೆ, ಅವರು ಮಾಡಲಿಲ್ಲ. ಕಾಂಗ್ರೆಸ್ ಪಕ್ಷವೇ ಭ್ರಷ್ಟ ಪಕ್ಷ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅತ್ಯಂತ ಭ್ರಷ್ಟರು ಎಂದು ಕಿಡಿಕಾರಿದರು.

ಈ ಬಾರಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲಿದೆ

ಈ ಬಾರಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲಿದೆ. ರಾಮನಗರ, ಹಾಸನ ಮತ್ತು ಮಂಡ್ಯ ಜಿಲ್ಲೆಗಳಾದ ಒಕ್ಕಲಿಗ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಅಮಿತ್ ಶಾ ಪ್ರವಾಸಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಎಂಟು ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಗೆಲುವು ನಮ್ಮ ಸಂಘಟನೆಯ ಬಲದ ಮೇಲೆ ಇರಬೇಕು. ಭಾರತವು ಸಾಂಸ್ಕೃತಿಕವಾಗಿ ಪರಿವರ್ತನೆ ಹೊಂದಬೇಕು ಮತ್ತು ಅದಕ್ಕಾಗಿ ನಾವು ಬೂತ್‌ ಮಟ್ಟಗಳಲ್ಲಿ ಗೆಲ್ಲಬೇಕು ಎಂದು ಹೇಳಿದರು.

ಇನ್ನಷ್ಟು ದಕ್ಷಿಣ ಕನ್ನಡ ಜಿಲ್ಲಾ ಸದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ