ಕರಾವಳಿ ಬಿಜೆಪಿ ಶಾಸಕರಿಗೆ ಸರ್ಕಾರ ಅನುದಾನವನ್ನೇ ನೀಡಿಲ್ಲ: ಶಾಸಕ ವೇದವ್ಯಾಸ ಕಾಮತ್ ಆರೋಪ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 03, 2023 | 5:39 PM

ಮಂಗಳೂರಿನಲ್ಲಿ ಪ್ರತಿಕಾಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಆರೋಪಿಸಿರುವ ಶಾಸಕ ವೇದವ್ಯಾಸ ಕಾಮತ್​, ಕರಾವಳಿ ಬಿಜೆಪಿ ಶಾಸಕರಿಗೆ ಸರ್ಕಾರ ಅನುದಾನವನ್ನೇ ನೀಡಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಒಂದು ರೂಪಾಯಿ ಅನುದಾನವೂ ಕೊಟ್ಟಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕರಾವಳಿ ಬಿಜೆಪಿ ಶಾಸಕರಿಗೆ ಸರ್ಕಾರ ಅನುದಾನವನ್ನೇ ನೀಡಿಲ್ಲ: ಶಾಸಕ ವೇದವ್ಯಾಸ ಕಾಮತ್ ಆರೋಪ
ದಕ್ಷಿಣ ಶಾಸಕ ವೇದವ್ಯಾಸ ಕಾಮತ್
Follow us on

ಮಂಗಳೂರು, ನವೆಂಬರ್​​​​​ 03: ಕರಾವಳಿ ಬಿಜೆಪಿ ಶಾಸಕರಿಗೆ ಸರ್ಕಾರ ಅನುದಾನವನ್ನೇ ನೀಡಿಲ್ಲ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ (Veda Vyas Kamath) ಆರೋಪಿಸಿದ್ದಾರೆ. ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ಒಂದು ರೂಪಾಯಿ ಅನುದಾನವೂ ಕೊಟ್ಟಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆ ನೀಡುತ್ತಿದ್ದಾರೆ. ಸರ್ಕಾರ ಒಂದು ರೂಪಾಯಿ ಅನುದಾನವನ್ನ ಕೊಡುವುದು ಬೇಡ ಎಂದು ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರ ಅನುದಾನ ನೀಡದಿದ್ದರೆ ಹೋರಾಟ

ಬಸವರಜ ಬೊಮ್ಮಾಯಿ ಅವಧಿಯಲ್ಲಿ ಮಂಜೂರಾದ ಕಾಮಗಾರಿಗೆ ಹಣ ಕೊಡಿ. ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಅರ್ಧಕ್ಕೆ ನಿಂತು ಹೋಗಿದೆ. ಕಾಮಗಾರಿಯ ಹಣ ಬಿಡುಗಡೆಗೆ ಗುತ್ತಿಗೆದಾರರು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಕೋಟಿಗಟ್ಟಲೇ ಹಣ ಹಾಕಿ ಕಾಮಗಾರಿ ಮಾಡಿದ್ದೇವೆ. ಹಣ ಬಾರದೆ ಕಾಮಗಾರಿ ಮುಂದುವರಿಸೋದು ಹೇಗೆ ಅಂತಿದ್ದಾರೆ ಎಂದರು.

ಇದನ್ನೂ ಓದಿ: ಇಷ್ಟು ವರ್ಷವಾದ್ರೂ ಕರ್ನಾಟಕ ಕನ್ನಡ ಮಯವಾಗಿಲ್ಲ; ಅಸಮಾಧಾನ ಹೊರಹಾಕಿದ ಸಿಎಂ

ಕಾಮಗಾರಿ ಅರ್ಧಕ್ಕೆ ನಿಂತಿರುವುದಕ್ಕೆ ಜನರಿಗೆ ಸಮಸ್ಯೆ ಆಗುತ್ತಿದೆ. ಅನುದಾನ ನೀಡುವಂತೆ ಮುಂದಿನ ವಾರ ಮತ್ತೆ ಮನವಿ ಮಾಡುತ್ತೇನೆ. ರಾಜ್ಯ ಸರ್ಕಾರ ಅನುದಾನ ನೀಡದಿದ್ದರೆ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

ಮಳೆ ಹಾನಿಯ 15 ಕೋಟಿ ರೂ. ಹಣ ಅರ್ಧಕ್ಕೆ ನಿಂತಿದೆ. ಕರಾವಳಿಯ ಬಿಜೆಪಿ ಶಾಸಕರು ತೊಂದರೆಗೆ ಒಳಗಾಗಿದ್ದಾರೆ. ಅಭಿವೃದ್ಧಿ ಮಾಡಲು ಸರ್ಕಾರ ಹಣ ಕೊಡುತ್ತಿಲ್ಲ. ನಾವೇ ತಂದಂತಹ ಯೋಜನೆಯ ಹಣ ಬರುವುದು ನಿಂತಿದೆ. ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬೇಡಿ. ಜನರು ನಿತ್ಯ ಬೆಳಗ್ಗೆ ಮನೆಯ ಬಳಿ ಬಂದು ನಿಲ್ಲುತ್ತಾರೆ. ಹೊಸ ಯೋಜನೆ ನೀಡಲು ಸಾಧ್ಯ ಇಲ್ಲ‌ ಅಂದರು ಪರವಾಗಿಲ್ಲ. ಆದರೆ ಆದೇಶ ಆದ ಕಾಮಗಾರಿಗಳ ಹಣ ನೀಡಿ ಎಂದಿದ್ದಾರೆ.

ಇದನ್ನೂ ಓದಿ: ದಸರಾ ಕಲಾವಿದರ ಚೆಕ್‌ ಬೌನ್ಸ್‌: ಕಾಂಗ್ರೆಸ್​ಗೆ ಇನ್ನೂ ಬುದ್ಧಿ ಬಂದಿಲ್ಲ ಎಂದ ಬಿಜೆಪಿ​

ನಮ್ಮ ಸರ್ಕಾರದ ಅವಧಿಯಲ್ಲಿ ಅಮೃತ ಯೋಜನೆ ಅಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರ್ಕಾರ ವತಿಯಿಂದ ಹಲವು ಅನುದಾನಗಳನ್ನು ತರಲಾಗಿತ್ತು. ಈ ಬಗ್ಗೆ ಇಲಾಖೆಗೆ ಹಾಗೂ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 6 ತಿಂಗಳಾದರೂ ಕಾಮಗಾರಿಗೆ ಅಗತ್ಯವಿರುವ ಅನುದಾನಕ್ಕೆ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆತ್ತಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.