ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಜಿಲ್ಲೆಯಾದ್ಯಂತ ಜೂ.27ರಂದು ಶಾಲೆಗಳಿಗೆ ರಜೆ ಘೋಷಣೆ

| Updated By: ರಮೇಶ್ ಬಿ. ಜವಳಗೇರಾ

Updated on: Jun 26, 2024 | 7:16 PM

ಕರ್ನಾಟಕದ ಹಲವೆಡೆ ಮುಂಗಾರು ಮಳೆ ಭರ್ಜರಿಯಾಗುತ್ತಿದೆ. ಅದರಲ್ಲೂ ಕರಾವಳಿ ಭಾಗ ಉಡುಪಿ, ದಕ್ಷಿಣ ಕನ್ನಡ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಜಿಲ್ಲೆಯಾದ್ಯಂತ ಜೂ.27ರಂದು ಶಾಲೆಗಳಿಗೆ ರಜೆ ಘೋಷಣೆ
ಪ್ರಾತಿನಿಧಿಕ ಚಿತ್ರ
Follow us on

ಮಂಗಳೂರು, (ಜೂನ್ 26): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ (ಜೂನ್ 27) ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಂಗನವಾಡಿಯಿಂದ ಪ್ರೌಢ ಶಾಲೆವರೆಗೂ ರಜೆ ನೀಡಿ ಜಿಲ್ಲಾಧಿಕಾರಿ ಮುಗಿಲನ್ ಅವರು ಇಂದು (ಜೂನ್ 26) ಆದೇಶ ಹೊರಡಿಸಿದ್ದಾರೆ. ಅಲ್ಲದೇ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದಾರೆ. ನಿನ್ನೆ (ಜೂನ್ 25) ರಾತ್ರಿ ಇಡೀ ಮಳೆ ಸುರಿದಿದೆ. ಇದರಿಂದ ಜಿಲ್ಲೆಯಾದ್ಯಂತ ಭಾರೀ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಇಂದು ರಾತ್ರಿ ನಾಳೆ ದಕ್ಷಿಣ ಕನ್ನಡ ಜಿಲ್ಲೆಲ್ಲಿ ಮತ್ತೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳು, ನಾಳೆ ಶಾಲೆಗಳಿಗೆ ರಜೆ ನೀಡಿದ್ದಾರೆ.

ಭಾರಿ ಮಳೆ ಮುನ್ಸೂಚನೆ

ಐದು ಜಿಲ್ಲೆಗಳಲ್ಲಿ ಮುಂದಿನ 3 ಗಂಟೆ ಭಾರಿ ಮಳೆಯ‌ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಮೈಸೂರು ಮತ್ತು ಹಾವೇರಿ ಜಿಲ್ಲೆಯಲ್ಲಿ ಗಂಟೆಗೆ 50 kmph ವೇಗದ ಗಾಳಿ, ಗುಡುಗು ಸಹಿತ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಸಿಡಿಲು- ಗುಡುಗು ವೇಳೆ ಎಲೆಕ್ಟ್ರಿಕ್ ಉಪಕರಣಗಳನ್ನು ಆಫ್ ಮಾಡುವಂತೆ ಹಾಗೂ ಮಳೆ ಬರುವಾಗ ಶಿಥಿಲ ಕಟ್ಟಡ, ಮರದ ಕೆಳಗಡೆ ನಿಲ್ಲದಂತೆ ಹವಾಮಾನ ಇಲಾಖೆ ಸೂಚನ ನೀಡಿದೆ.

ಉಡುಪಿಯಲ್ಲೂ ಭಾರೀ ಮಳೆ

ದಕ್ಷಿಣ ಕನ್ನಡ ಮಾತ್ರವಲ್ಲದೇ ಕರಾವಳಿ ಭಾಗದ ಮತ್ತೊಂದು ಜಿಲ್ಲೆಯಾಗಿರುವ ಉಡುಪಿಯಲ್ಲೂ ಸಹ ಮುಂಗಾರು ಮಳೆ ಬಿರುಸುಗೊಂಡಿದೆ. ಭಾರೀ ಮಳೆಯಿಂದಾಗಿ ಕಾಪು, ಮಲ್ಪೆ, ಪಡುಕೆರೆ ಕಡಲ ಕಿನಾರೆ ಪ್ರಕ್ಷುಬ್ಧವಾಗಿದೆ. ಇನ್ನು ಮಲ್ಪೆ ಬೀಚ್ ನಲ್ಲಿಯೂ ರಕ್ಕಸ ಗಾತ್ರದ ಅಲೆಗಳು ಅಬ್ಬರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕಡಲಿನ ಹತ್ತಿರ ತೆರಳದಂತೆ ಬೀಚ್‌ ಸಿಬ್ಬಂದಿ ತಡೆಬೇಲಿ ಹಾಕಿದೆ. ಇದರಿಂದ ಮಲ್ಪೆ ಬೀಚ್‌ಗೆ ಆಗಮಿಸಿದ ಪ್ರವಾಸಿಗರಿಗೆ ನಿರಾಸೆಯಾಗಿದೆ.

ಇದನ್ನೂ ಓದಿ: ಮಂಗಳೂರು: ಉಳ್ಳಾಲ ಕುತ್ತಾರು ಮದನಿ ನಗರದಲ್ಲಿ ಮನೆ ಗೋಡೆ ಕುಸಿದು ಬಿದ್ದು ನಾಲ್ವರು ಸಾವು

ಮಲೆನಾಡಿನಲ್ಲೂ ಮುಂಗಾರು ಮಳೆ ಆರ್ಭಟ

ಇನ್ನು ಕೊಡಗು, ಚಿಕ್ಕಮಗಳೂರು, ಕಾರವಾರ ಸೇರಿ ವಿವಿಧೆಡೆ ಮಂಗಳವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದ (Rain News) ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಬೃಹತ್‌ ಮರಗಳು ರಸ್ತೆಗೆ ಉರುಳಿದ್ದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ಇನ್ನು ಕಾರವಾರದಲ್ಲಿ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ.

ಮಲೆನಾಡಿನಲ್ಲಿ ಮಳೆ ಆರ್ಭಟ ಜೋರಾಗಿದೆ. ಕುದುರೆಮುಖ ಸಮೀಪದ ನೆಲ್ಲಿಬೀಡು ಗ್ರಾಮದ ಬಳಿ ಕಳಸ-ಮಂಗಳೂರು ರಾಜ್ಯ ಹೆದ್ದಾರಿಯಲ್ಲಿ ಮರ ಅಡ್ಡಲಾಗಿ ಬಿದ್ದಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ. ಸ್ಥಳೀಯರಿಂದ ಮರ ತೆರವು ಕಾರ್ಯಚರಣೆ ನಡೆಯುತ್ತಿದೆ. ಇನ್ನು ಮೂಡಿಗೆರೆ ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿದಿದ್ದು, ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್, ಬಣಕಲ್, ಕೊಟ್ಟಿಗೆಹಾರ, ಜಾವಳಿ, ಮಲೆಮನೆ, ರಾಣಿಜರಿ, ಸುಂಕಸಾಲೆ, ದೇವರಮನೆ ಸುತ್ತಮುತ್ತ ಬಿರುಸಿನ ಮಳೆಯಾಗಿದೆ. ಕಳೆದೊಂದು ವಾರದಿಂದ ಬಿಡುವು ನೀಡಿದ್ದ ವರುಣದೇವ, ಇಂದು ಬೆಳಗ್ಗೆಯಿಂದ ಮತ್ತೆ ಅಬ್ಬರಿಸುತ್ತಿದ್ದಾನೆ. ಭಾರಿ ಗಾಳಿ-ಮಳೆಗೆ ಚಾರ್ಮಾಡಿಯಲ್ಲಿ ವಾಹನ ಸವಾರರು ಪರದಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ