ಮಂಗಳೂರಿನಲ್ಲಿ ಎಗ್ಗಿಲ್ಲದೆ ನಡೀತಿದೆ ಅಕ್ರಮ ಮರಳುಗಾರಿಕೆ! ಈ ಹಣದಲ್ಲಿಯೇ ಕಾಂಗ್ರೆಸ್ ಚುನಾವಣೆ ಎಂದು ಶಾಸಕ ಆರೋಪ
ಮಂಗಳೂರಿನಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ನಡೀತಾ ಇದೆ. ಇದಕ್ಕೆ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ ಎನ್ನುವುದು ಓಪನ್ ಸೀಕ್ರೇಟ್ ಆಗಿದೆ. ಅಕ್ರಮ ಮರಳುಗಾರಿಕೆಯವರ ಪುಂಡಾಟಕ್ಕೆ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್ ಸರ್ಕಾರ ಚುನಾವಣಾ ಫಂಡ್ಗಾಗಿ ಮಾಫಿಯಾ ನಡೆಸುತ್ತಿದ್ದಾರೆ ಎಂದು ಬಿಜೆಪಿ ಶಾಸಕ ವೇಧವ್ಯಾಸ ಕಾಮತ್ ಹೊಸ ಬಾಂಬ್ ಹಾಕಿದ್ದಾರೆ.
ದಕ್ಷಿಣ ಕನ್ನಡ, ಮಾ.22: ಕಡಲತಡಿ ಮಂಗಳೂರಿನಲ್ಲಿ(Mangalore) ಎಗ್ಗಿಲ್ಲದೇ ಅಕ್ರಮ ಮರಳುಗಾರಿಕೆ ನಡೀತಾ ಇದೆ. ಪ್ರತಿನಿತ್ಯ ನೂರಾರು ಲೋಡ್ ಮರಳನ್ನು ರಾತ್ರೋರಾತ್ರಿ ಸಾಗಾಟ ಮಾಡಲಾಗುತ್ತಿದೆ. ಇದಕ್ಕೆ ಅಧಿಕಾರಿಗಳು ಕೂಡ ಸಾಥ್ ನೀಡಿದ್ದಾರೆ. ಮರಳು ಮಾಫಿಯಾದಿಂದ ಮಾಮೂಲಿ ಪಡೆದುಕೊಂಡು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಕೆಲ ಅಧಿಕಾರಿಗಳು ಅಕ್ರಮಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಮಾಫಿಯಾದ ಪುಂಡರು ಅತೀ ವೇಗವಾಗಿ ಮರಳುನ್ನು ಸಾಗಿಸುವ ಬರದಲ್ಲಿ ಬೇಕಾಬಿಟ್ಟಿ ಚಾಲನೆ ಮಾಡುತ್ತಿದ್ದಾರೆ. ನಂಬರ್ ಪ್ಲೇಟ್ಗೆ ಗ್ರೀಸ್ ಮತ್ತು ಮಣ್ಣನ್ನು ಮೆತ್ತಿಕೊಂಡು ವೇಗವಾಗಿ ಮನಸೋಯಿಚ್ಚೆ ಚಲಾಯಿಸುತ್ತಿದ್ದಾರೆ.
ಇನ್ನು ಬಿ.ಸಿ.ರೋಡ್ ಟೋಲ್ನ ಕ್ಯಾಮೆರಾ ಕಣ್ತಪ್ಪಿಸಲು ಓನ್ ವೇ ನಲ್ಲಿ ಲಾರಿಗಳನ್ನು ಚಲಾಯಿಸಿಕೊಂಡು ಹೋಗಿ ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ. ಜನರು ಈ ಬಗ್ಗೆ ಜಿಲ್ಲಾಢಳಿತ ಮತ್ತು ಪೊಲೀಸ್ ಇಲಾಖೆ ಗಮನಕ್ಕೆ ಎಷ್ಟು ಬಾರೀ ತಂದರೂ ಕೂಡ ಕ್ಯಾರೆ ಅಂದಿಲ್ಲ. ಕೆಲವರು ಮರಳು ತೆಗೆಯುವ ಲೈವ್ ವೀಡಿಯೋ ಮಾಡಿ ಅಧಿಕಾರಿಗಳಿಗೂ ಕೊಟ್ಟಿದ್ದಾರೆ.
ಮಾಫಿಯಾದ ಹಿಂದೆ ಸರ್ಕಾರ; ಶಾಸಕ ವೇಧವ್ಯಾಸ ಕಾಮತ್ ಆರೋಪ
ಇನ್ನು ಈ ಮರಳು ಮಾಫಿಯಾದ ಹಿಂದೆ ಸರ್ಕಾರವೇ ಇದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇಧವ್ಯಾಸ ಕಾಮತ್ ಆರೋಪ ಮಾಡಿದ್ದಾರೆ. ಈ ಮಾಫಿಯಾದಲ್ಲಿ ಕಾಂಗ್ರೆಸ್ ಜನರಿದ್ದಾರೆ. ಸದ್ಯ ಲೋಕಸಭಾ ಚುನಾವಣೆ ನಡೆಸಲು ಇಲ್ಲಿಂದ ಕೂಡ ಹಣ ಹೋಗುತ್ತಿದೆ ಎಂದು ಆರೋಪಿಸಿದ್ದಾರೆ. ನೇತ್ರಾವತಿ ನದಿ ಒಡಲಿಗೆ ಕನ್ನ ಹಾಕಿ ಮರಳು ತಗೀತಾ ಇರುವುದರಿಂದಲೇ ಮಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಗೂ ಕೃಷಿಗೆ ಸಮಸ್ಯೆ ಕೂಡ ಆಗುತ್ತಿದೆ ಎಂದು ಹೇಳಿದ್ದಾರೆ.
ರಾತ್ರಿ ವೇಳೆ ಅತೀ ವೇಗದಿಂದ ಅಪಘಾತ ಉಂಟು ಮಾಡುವ ಲಾರಿಗಳ ಮೇಲೆ ರಸ್ತೆಯಲ್ಲಿ ಜನರೇ ಆಕ್ರೋಶ ವ್ಯಕ್ತಪಡಿಸುವಂತ ಘಟನೆಗಳು ನಡೆಯುತ್ತಿವೆ. ಸದ್ಯ ಅಕ್ರಮ ಮರಳುಗಾರಿಕೆ ನಿಲ್ಲಿಸಿ ಎನ್ನುವ ಕೂಗು ಭ್ರಷ್ಟ ಅಧಿಕಾರಿಗಳಿಗೆ ಅದ್ಯಾವಾಗ ಕೇಳುತ್ತದೆ ಕಾದು ನೋಡಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:07 pm, Fri, 22 March 24