ಜೆಸಿಬಿ ಹರಿದು ಮೂವರು ಕಾರ್ಮಿಕರ ಸಾವು ಪ್ರಕರಣಕ್ಕೆ ಟ್ವಿಸ್ಟ್; ಕೃತ್ಯಕ್ಕೆ ಮರಳು ಮಾಫಿಯಾ ಲಿಂಕ್
ನಿನ್ನೆ(ಜೂ.14) ಜೆಸಿಬಿ(JCB) ಹರಿದು ಜಮೀನಿನಲ್ಲಿ ಮಲಗಿದ್ದ ಮೂವರು ಸಾವನ್ನಪ್ಪಿರುವ ಘಟನೆ ಜಲ್ಲೆಯ ದೇವದುರ್ಗ(Devadurga) ತಾಲೂಕಿನ ನಿಲವಂಜಿ ಗ್ರಾಮದ ಬಳಿ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ದೊರೆತಿದ್ದು, ಈ ಕೃತ್ಯಕ್ಕೆ ಕಾರಣವಾದ ಜೆಸಿಬಿಗೆ ಸ್ಯಾಂಡ್ ಮಾಫಿಯಾ ಲಿಂಕ್ಯಿದೆ ಎಂಬ ಆರೋಪ ಕೇಳಿಬಂದಿದೆ.
ರಾಯಚೂರು: ನಿನ್ನೆ(ಜೂ.14) ಜೆಸಿಬಿ(JCB) ಹರಿದು ಜಮೀನಿನಲ್ಲಿ ಮಲಗಿದ್ದ ಮೂವರು ಸಾವನ್ನಪ್ಪಿರುವ ಘಟನೆ ಜಲ್ಲೆಯ ದೇವದುರ್ಗ (Devadurga) ತಾಲೂಕಿನ ನಿಲವಂಜಿ ಗ್ರಾಮದ ಬಳಿ ನಡೆದಿತ್ತು. ಛತ್ತೀಸ್ಗಢ ಮೂಲದವರಾದ ವಿಷ್ಣು(26), ಶಿವರಾಮ್(28), ಬಲರಾಮ್(30) ಸಾವನ್ನಪ್ಪಿದ್ದರು. ಜಮೀನಿನಲ್ಲಿ ಬೋರ್‌ವೆಲ್ ಕೊರೆದು, ಕಾಲು ದಾರಿಯಲ್ಲಿಯೇ ರಾತ್ರಿ ಮೂವರು ಮಲಗಿದ್ದರು. ಈ ವೇಳೆ ಕಾಲುದಾರಿಯಲ್ಲಿ ಬಂದ ಜೆಸಿಬಿ, ಮೂವರು ಮೇಲೂ ಹರಿದು ಸ್ಥಳದಲ್ಲೇ ಧಾರುಣ ಅಂತ್ಯ ಕಂಡಿದ್ದರು. ಇದೀಗ ಈ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ದೊರೆತಿದೆ. ಈ ಕೃತ್ಯಕ್ಕೆ ಕಾರಣವಾದ ಜೆಸಿಬಿಗೆ ಸ್ಯಾಂಡ್ ಮಾಫಿಯಾ ಲಿಂಕ್ ಆರೋಪವಿದೆ ಎಂದು ಇದೀಗ ವ್ಯಕ್ತವಾಗಿದೆ.
ರಾತ್ರಿಯಿಂದ ಬೆಳಗಿನ ಜಾವದವರೆಗೂ ತಹಶೀಲ್ದಾರ್ ಆ್ಯಂಡ್ ಟೀಂ ಮರಳು ಅಡ್ಡೆಗಳಿಂದ ಹಣ ವಸೂಲಿ ಆರೋಪ
ದೇವದುರ್ಗ ತಹಶಿಲ್ದಾರ್ ಕೆ.ವೈ ಬಿದರಿ ವಿರುದ್ಧ ಮರಳು ಅಡ್ಡೆಗಳಿಂದ ಹಣ ವಸೂಲಿ ಆರೋಪ ಕೇಳಿಬಂದಿದೆ. ಹೌದು ತಹಶಿಲ್ದಾರ್ ಮರಳು ಅಡ್ಡೆಗಳ ಮೇಲೆ ದಾಳಿಗೆ ಹೋದಾಗ ಈ ಘಟನೆ ನಡೆದಿದೆ ಎಂದು ಗಂಭೀರ ಆರೋಪಿಸಲಾಗಿದೆ. ಇದೇ ಜೂನ್ 13 ರಂದು ದೇವದುರ್ಗ ತಾಲ್ಲೂಕಿನ ನಿಲವಂಜಿ ಸುತ್ತಲಿನ ಅಡ್ಡೆಗಳ ದಾಳಿಗೆ ತಹಶಿಲ್ದಾರ್ ತೆರಳಿದ್ದರು. ಈ ವೇಳೆ ಎರಡು ಪಾಯಿಂಟ್ಗಳಾದ ಹೇರುಂಡಿ ಅಡ್ಡೆಯಲ್ಲಿ ಹೊನ್ನಪ್ಪ ಎನ್ನುವವರಿಂದ 15 ಸಾವಿರ, ನವಿಲುಗುಡ್ಡದಲ್ಲಿ ಶಂಭು ಅವರಿಂದ 15 ಸಾವಿರ ವಸೂಲಿ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ:ಕಾರು-ಬೈಕ್ಗಳ ಮಧ್ಯೆ ಭೀಕರ ಅಪಘಾತ, ಮೂವರು ಸಾವು: ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ
ಲೈಟ್ ಆಫ್ ಮಾಡಿ ಜೆಸಿಬಿ ಮೂಲಕ ಚಾಲಕ ಬಸವರಾಜ್ ತಪ್ಪಿಸಿಕೊಳ್ಳಲು ಯತ್ನ
ಹೌದು ತಹಶೀಲ್ದಾರ್ ಮೂರನೇ ಅಡ್ಡೆ ನಿಲವಂಜಿ ಗ್ರಾಮದ ಬಳಿ ರೇಡ್ಗೆ ಹೋದಾಗ ಲೈಟ್ ಆಫ್ ಮಾಡಿ ಜೆಸಿಬಿ ಮೂಲಕ ಚಾಲಕ ಬಸವರಾಜ್ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆಗ ಮಾರ್ಗ ಮಧ್ಯದ ಹೊಲದಲ್ಲಿ ಮಲಗಿದ್ದ ಮೂವರ ಮೇಲೆ ಜೆಸಿಬಿ ಹರಿದು ಕಾರ್ಮಿಕರ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ತಹಶಿಲ್ದಾರ್ ಬಿದರಿ, ಆರ್ ಐ ಭೀಮನಗೌಡ ಸೇರಿ ಹಲವರು ಅಧಿಕಾರಿಗಳ ವಿರುದ್ಧ ಸ್ಥಳೀಯರು ಕಿಡಿಕಾರುತ್ತಿದ್ದಾರೆ. ‘ದಾಳಿಗೆ ಹೋಗಿದ್ರೆ, ಅಕ್ರಮ ತಡೆಯಲು ಹೋಗಿದ್ರೆ, ಪೊಲೀಸ್ ಸಿಬ್ಬಂದಿ ಜೊತೆ ಹೋಗಬೇಕಿತ್ತು. ಆದ್ರೆ, ಅಡ್ಡೆಗಳ ಮೇಲೆ ದಾಳಿ ನಡೆಸಿ ಹಣ ವಸೂಲಿಗೆ ಹೋಗಿದ್ದಾರೆ ಎಂದು ಗಂಭೀರ ಆರೋಪ ಹೊರಸಿದ್ದಾರೆ.
ತಮ್ಮ ವಿರುದ್ಧದ ಆರೋಪಕ್ಕೆ ತಹಶೀಲ್ದಾರ್ ಪ್ರತಿಕ್ರಿಯೆ
ಇನ್ನು ತಮ್ಮ ವಿರುದ್ದ ಕೇಳಿಬಂದಿರುವ ಆರೋಪಕ್ಕೆ ತಹಶೀಲ್ದಾರ್ ಪ್ರತಿಕ್ರಿಯೆ ನೀಡಿದ್ದು, ‘ಘಟನೆ ನಡೆದ ದಿನ ನಾನು ಒಂದು ಕಡೆ ಮಾತ್ರ ದಾಳಿಗೆ ಹೋಗಿದ್ದೆ. ಆದ್ರೆ, ನಿಲವಂಜಿ ಗ್ರಾಮಕ್ಕೆ ಹೋಗಿರ್ಲಿಲ್ಲ ಎಂದಿದ್ದಾರೆ. ತಹಶೀಲ್ದಾರ್ ಕೆ.ವೈ ಬಿದರಿ ಅವರ ಹೇಳಿಕೆ ಹಲವಾರು ಅನುಮಾನ ಹುಟ್ಟುಹಾಕಿದೆ. ಇನ್ನು ಈ ಕುರಿತು ರಾಯಚೂರು ಎಸ್ಪಿ ನಿಖಿಲ್.ಬಿ ಮಾತನಾಡಿ ‘ಈ ಸಂಬಂಧ ಯಾವುದೇ ಮಾಹಿತಿ ಸಿಕ್ಕಿಲ್ಲ. ತನಿಖೆ ವೇಳೆ ಈ ಬಗ್ಗೆ ಮಾಹಿತಿ ಸಿಗುತ್ತಾ ಅನ್ನೋದನ್ನ ನೋಡ್ತೇವೆ. ಆ ಬಗ್ಗೆ ಮಾಹಿತಿ ಸಿಕ್ಕರೆ, ಖಂಡಿತ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ