ದಕ್ಷಿಣ ಕನ್ನಡ, ಸೆ.07: ಮನೆ ಮಂದಿಯನ್ನು ಕಟ್ಟಿ ಹಾಕಿ ಖದೀಮರ ಗ್ಯಾಂಗ್ ದರೋಡೆ ಮಾಡಿದ ಘಟನೆ ಜಿಲ್ಲೆಯ ಪುತ್ತೂರು (Puttur) ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಕುದ್ಕಾಡಿ ಎಂಬಲ್ಲಿ ನಡೆದಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ (Ashok Kumar Rai) ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಗುರುಪ್ರಸಾದ್ ರೈ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು. ಮನೆಯಲ್ಲಿ ಗುರುಪ್ರಸಾದ್ ಮತ್ತು ಅವರ ತಾಯಿ ಇದ್ದ ಸಂದರ್ಭದಲ್ಲಿಯೇ ಮನೆಗೆ ನುಗ್ಗಿದ ಖದೀಮರ ಗ್ಯಾಂಗ್, ಗುರುಪ್ರಸಾದ್ ಕುತ್ತಿಗೆಗೆ ಚಾಕು ಹಿಡಿದು ಮನೆ ದರೋಡೆ ಮಾಡಿದ್ದಾರೆ.
ನಸುಕಿನ ಜಾವ 2 ಗಂಟೆ ಸುಮಾರಿಗೆ ಮನೆಯ ಮುಂದಿನ ಬಾಗಿಲು ಮುರಿದು ನುಗ್ಗಿದ ಸುಮಾರು 8 ಜನರಿದ್ದ ದರೋಡೆಕೋರರ ತಂಡ. 40 ಸಾವಿರ ನಗದು ಮತ್ತು ಸುಮಾರು 120 ಗ್ರಾಂ ಚಿನ್ನವನ್ನು ದರೋಡೆ ಮಾಡಿದ್ದಾರೆ. ಇವರು ತುಳು ಮತ್ತು ಕನ್ನಡ ಭಾಷೆ ಮಾತನಾಡುತ್ತಿದ್ದರು ಎಂದು ಗುರುಪ್ರಸಾದ್ ರೈ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ವಿಧಿ ವಿಜ್ಞಾನ, ಬೆರಳಚ್ಚು ಮತ್ತು ಶ್ವಾನದಳ ಭೇಟಿ ನಡೆಸಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹಾಗೂ ಪುತ್ತೂರು ಡಿವೈಎಸ್ಪಿ ಗಾನ.ಪಿ.ಕುಮಾರ್ ಭೇಟಿ ನೀಡಿದ್ದಾರೆ.
ಇದನ್ನೂ ಓದಿ:ದರೋಡೆ, ಕಳ್ಳತನ ಹೆಚ್ಚಳ; ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಗಸ್ತು ಕಾರ್ಯಾಚರಣೆ ಹೆಚ್ಚಿಸಿದ ಪೊಲೀಸರು
ಯಾದಗಿರಿ: ಶಹಾಪುರ ತಾಲೂಕಿನ ದರಿಯಾಪುರ ಗ್ರಾಮದಲ್ಲಿ ಶರಣಪ್ಪ ಎಂಬುವರಿಗೆ ಸೇರಿದ ಲಕ್ಷಾಂತರ ರೂಪಾಯಿ ಮೌಲ್ಯದ ಜೋಡೆತ್ತು ಕಳ್ಳತನವಾಗಿರುವ ಘಟನೆ ನಡೆದಿದೆ. ಈ ಕುರಿತು ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳನ್ನು ಮದ್ಯರಾತ್ರಿ ಬಂದ ಕಳ್ಳರು ಕದ್ದೋಯ್ದಿದ್ದಾರೆ. ರೈತನ ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಈ ಜೋಡೆತ್ತುಗಳ ಕಳ್ಳತನದಿಂದ ರೈತ ಕುಟುಂಬ ಕಂಗಾಲಾಗಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:09 pm, Thu, 7 September 23