ರಾಜ್ಯದಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್ ಆಯಾ ಭಾಗದ ಆಹಾರ ಪದ್ಧತಿಯಂತೆ ಊಟ ನೀಡಲು ಪ್ಲ್ಯಾನ್
ಬಜ್ಪೆ, ಬೆಳ್ತಂಗಡಿ, ಕಿನ್ನಿಗೋಳಿ, ಮೂಡುಬಿದಿರೆ, ಕಡಬ, ಮುಲ್ಕಿ, ಕೋಟೆಕಾರ್, ವಿಟ್ಲ, ಮತ್ತು ಸೋಮೇಶ್ವರದಲ್ಲಿ ಹೊಸ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುವುದು. ಜನರಿಗೆ ಹೆಚ್ಚು ಅನುವಾಗುವ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗುವುದು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ತಿಳಿಸಿದರು.
ಮಂಗಳೂರು, ಸೆ.06: ಬಿಬಿಎಂಪಿ(BBMP) ಹೊರತುಪಡಿಸಿ ರಾಜ್ಯದಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್(Indira Canteen) ಆರಂಭಿಸಲಾಗುವುದು. ಹಾಗೂ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್‌ಗಳಿಗೆ ಹೊಸ ಜಾಗ ಮತ್ತು ನಿರ್ದಿಷ್ಟ ಫುಡ್ ಮೆನುವನ್ನು ಪ್ರಸ್ತಾಪಿಸಲಾಗಿದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್(Minister Rahim Khan) ತಿಳಿಸಿದ್ದಾರೆ. ಬುಧವಾರ ಮಂಗಳೂರಿನ ಡಿಸಿ ಕಚೇರಿಯ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಸಚಿವ ರಹೀಂ ಖಾನ್, ಸರ್ಕಾರದ ನಿರ್ಧಾರದಂತೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಹೊಸ ಮೆನುಗಾಗಿ ಹೊಸ ಟೆಂಡರ್‌ಗಳನ್ನು ನೀಡಲಾಗುವುದು ಎಂದು ಪ್ರಸ್ತಾಪಿಸಿದರು. ಪ್ರಸ್ತುತ, ಬಿಬಿಎಂಪಿ ಹೊರತುಪಡಿಸಿ ರಾಜ್ಯದಲ್ಲಿ 197 ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಹೆಚ್ಚುವರಿಯಾಗಿ, 188 ಹೊಸ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುವುದು ಎಂದರು.
ಬಜ್ಪೆ, ಬೆಳ್ತಂಗಡಿ, ಕಿನ್ನಿಗೋಳಿ, ಮೂಡುಬಿದಿರೆ, ಕಡಬ, ಮುಲ್ಕಿ, ಕೋಟೆಕಾರ್, ವಿಟ್ಲ, ಮತ್ತು ಸೋಮೇಶ್ವರದಲ್ಲಿ ಹೊಸ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುವುದು. ಪ್ರತಿಯೊಂದೂ ವಿವಿಧ ನಗರ ಸ್ಥಳೀಯ ಸಂಸ್ಥೆ ಮಿತಿಗಳ ಅಡಿಯಲ್ಲಿ ಬರುತ್ತದೆ. ಜನರಿಗೆ ಹೆಚ್ಚು ಅನುವಾಗುವ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗುವುದು. ಬಸ್ ನಿಲ್ದಾಣಗಳು, ಮಾರುಕಟ್ಟೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳಂತಹ ಪ್ರಮುಖ ಸ್ಥಳಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ತೆರಯಲಾಗುವುದು. ಅಗತ್ಯ ಸ್ಥಳಗಳಲ್ಲಿ ಸಿಸಿಟಿವಿ ಮಾನಿಟರಿಂಗ್ ವ್ಯವಸ್ಥೆಗಳನ್ನು ನವೀಕರಿಸಲಾಗುವುದು ಮತ್ತು ಆನ್‌ಲೈನ್ ಬಿಲ್ಲಿಂಗ್ ವ್ಯವಸ್ಥೆಯನ್ನು ಪರಿಚಯಿಸಲಾಗುವುದು. ಹಿಂದೆ ರಾಜ್ಯದಲ್ಲಿ ಒಂದೇ ರೀತಿಯ ಆಹಾರದ ಮೆನು ಇತ್ತು. ಆದರೆ ಈಗ ಆಯಾಯ ಜಿಲ್ಲೆಗಳಿಗೆ ಸೂಕ್ತ ಎನಿಸುವ ಸ್ಥಳೀಯ ಆಹಾರ ಮೆನುವಿಗೆ ಆದ್ಯತೆ ನೀಡಲಾಗುವುದು ಎಂದು ಸಚಿವ ರಹೀಂ ಖಾನ್ ಹೇಳಿದರು.
ಇದನ್ನೂ ಓದಿ: ನಂದಿ ಹಿಲ್ಸ್ ನಲ್ಲಿಯೂ ಇಂದಿರಾ ಕ್ಯಾಂಟೀನ್ ಮಾದರಿ ಮಯೂರ್ ಹೋಟೆಲ್ ಆರಂಭ
ಉಳ್ಳಾಲದ ತೊಕ್ಕೊಟ್ಟಿನಲ್ಲಿರುವ ಇಂದಿರಾ ಕ್ಯಾಂಟೀನ್ಗೆ ದಿಢೀರ್ ಭೇಟಿ ನೀಡಿದ್ದೆ. ಆ ವೇಳೆ ಕೆಲವು ನ್ಯೂನ್ಯತೆಗಳು ಬೆಳಕಿಗೆ ಬಂದಿದೆ. ಬಿಲ್ಲಿಂಗ್ ಮೆಶಿನ್ ಇಲ್ಲ, ಸಿಸಿಟಿವಿ ಮತ್ತು ಸ್ವಚ್ಛತೆ ಇಲ್ಲದಿರುವುದು ಕಂಡು ಬಂದಿದೆ. ಹೊಸ ಇಂದಿರಾ ಕ್ಯಾಂಟೀನ್‌ಗಳಿಗೆ ಒಂದು ತಿಂಗಳ ಒಳಗಾಗಿ ಟೆಂಡರ್ ಕರೆಯಲಾಗುವುದು. ಈಗಾಗಲೇ ಅಸ್ಥಿತ್ವದಲ್ಲಿರುವ ಇಂದಿರಾ ಕ್ಯಾಂಟೀನ್ಗೂ ಟೆಂಡರ್ ಕರೆಯಲಾಗುವುದು. ಸರಕಾರದ ಆದೇಶ ಜಾರಿಯಾಗುವ ತನಕ ಹಿಂದಿನಂತೆ ಮುಂದುವರಿಯಲಿದೆ ಎಂದರು.
ಬಡ ಜನರು ಹಸಿವಿಂದ ಇರಬಾರದು ಎಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ ಸರಕಾರ ಸಬ್ಸಿಡಿ ಹಣವನ್ನು ಸಹ ಹೆಚ್ಚಿಸಿದೆ. ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಆಹಾರವನ್ನು ವಿತರಿಸಬೇಕು. ಹಿಂದಿನ ಸರ್ಕಾರದ ಸಮಯದಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆ ಸರಿಯಾಗಿ ಆಗದೆ ಇರುವುದರಿಂದ ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗಿದೆ. ಇವುಗಳ ದುರಸ್ತಿಗೆ ಅಗತ್ಯವಿರುವ ಅನುದಾನವನ್ನು ಒದಗಿಸಲಾಗುವುದು ಎಂದರು.
ಇಬ್ಬರು ಅಧಿಕಾರಿಗಳಿಗೆ ನೋಟಿಸ್
ಪ್ರಗತಿ ಪರಿಶೀಲನಾ ಸಭೆ ವೇಳೆ ಸಮರ್ಪಕ ಮಾಹಿತಿ ನೀಡದ ಮೂಡಬಿದಿರೆಯ ಪುರಸಭೆಯ ಮುಖ್ಯಾಧಿಕಾರಿ ಶಿವನಾಯಕ್ ಮತ್ತು ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಜೂನಿಯರ್ ಇಂಜಿನಿಯರ್ ಮಹಾವೀರ ಎಂಬವರಿಗೆ ಶೋಕಾಸ್ ನೋಟಿಸ್ ನೀಡಲು ಸಚಿವ ರಹೀಂ ಖಾನ್ ಜಿಲ್ಲಾಧಿಕಾರಿಗೆ ಆದೇಶ ನೀಡಿದ ಘಟನೆ ನಡೆಯಿತು.
ಮಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ