ಮಂಗಳೂರು ವಿವಿ ಗಣೇಶೋತ್ಸವ ವಿವಾದ: ಸ್ಪೀಕರ್ ಯುಟಿ ಖಾದರ್ ಹೇಳಿದ್ದೇನು?
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಣಪತಿ ಕೂರಿಸುವ ವಿಚಾರವಾಗಿ ಆರಂಭವಾದ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಯುಟಿ ಖಾದರ್, ವಿದ್ಯಾರ್ಥಿಗಳು 30 ವರ್ಷದಿಂದ ಹಾಸ್ಟೆಲ್ನಲ್ಲಿ ಗಣೇಶೋತ್ಸವ ಮಾಡುತ್ತಿದ್ದಾರೆ. ಎರಡು ಮೂರು ವರ್ಷದಿಂದ ಯುನಿವರ್ಸಿಟಿಯಿಂದ ಹಣ ನೀಡುತ್ತಿರುವುದು ನಿಯಮ ಪ್ರಕಾರ ಇದೆಯಾ ಎಂದು ನೋಡಬೇಕು. ಇಲ್ಲವಾದರೆ ಸರ್ಕಾರದ ಗಮನಕ್ಕೆ ತರುವಂತೆ ಸೂಚಿಸಿದರು.

ಮಂಗಳೂರು, ಸೆ.8: ವಿಶ್ವವಿದ್ಯಾನಿಲಯದಲ್ಲಿ (Mangaluru University) ಉಂಟಾದ ಗಣೇಶೋತ್ಸವದ (Ganesh Chaturthi) ವಿವಾದ ಕುರಿತು ಮಾತನಾಡಿದ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ (U.T.Khader), ಎರಡು ಮೂರು ವರ್ಷದಿಂದ ಯುನಿವರ್ಸಿಟಿಯಿಂದ ಹಣ ನೀಡುತ್ತಿರುವುದು ನಿಯಮ ಪ್ರಕಾರ ಇದೆಯಾ ಎಂದು ನೋಡಬೇಕು. ಇಲ್ಲವಾದರೆ ಸರ್ಕಾರದ ಗಮನಕ್ಕೆ ತರುವಂತೆ ಸೂಚಿಸಿದರು.
ವಿದ್ಯಾರ್ಥಿಗಳು 30 ವರ್ಷದಿಂದ ಹಾಸ್ಟೆಲ್ ನಲ್ಲಿ ಗಣೇಶೋತ್ಸವ ಮಾಡುತ್ತಿದ್ದಾರೆ. ಎಲ್ಲಾ ಜಾತಿ, ವರ್ಗದವರು ಒಟ್ಟು ಸೇರಿ ಅಧ್ಯಾಪಕರು ಪ್ರೋತ್ಸಾಹ ನೀಡಿ ಮಾಡುತ್ತಿದ್ದಾರೆ. ಎರಡು ಮೂರು ವರ್ಷದಿಂದ ಯುನಿವರ್ಸಿಟಿಯಿಂದ ಹಣ ನೀಡುತ್ತಿರುವುದು ನಿಯಮ ಪ್ರಕಾರ ಇದೆಯಾ ಎಂದು ನೋಡಬೇಕು ಎಂದರು.
ವಿಶ್ವವಿದ್ಯಾಲಯದ ಆವರಣದಲ್ಲಿ ಗುಣಮಟ್ಟದ ಶಿಕ್ಷಣದ ಬಗ್ಗೆ ಹೆಚ್ಚು ಚರ್ಚೆ ಆಗಬೇಕು. ಗಣೇಶೋತ್ಸವ ವಿಚಾರದಲ್ಲಿ ಉಪಕುಲಪತಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ. ಕುಲಪತಿಗಳು ವಿಶ್ವವಿದ್ಯಾನಿಲಯದ ನಿಯಮಗಳಿಗೆ ಅನುಸಾರವಾಗಿ ಮಾಡಬೇಕು. ಇದರಲ್ಲಿ ಹೊರಗಿನವರು ಯಾರು ಭಾಗಿಯಾಗಬಾರದು. ನಿಯಮಬಾಹಿರವಾಗಿದ್ದರೆ ಉಪಕುಲಪತಿಗಳು ಸರ್ಕಾರಕ್ಕೆ ತಿಳಿಸಬೇಕು ಎಂದು ಖಾದರ್ ಸೂಚಿಸಿದರು.
ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ: ಉಡುಪಿ ಕೃಷ್ಣಮಠಕ್ಕೆ ಮಧ್ಯರಾತ್ರಿ ಭೇಟಿ ನೀಡಿ ಕೃಷ್ಣನ ದರ್ಶನ ಪಡೆದ ವಿಧಾನ ಸಭಾಧ್ಯಕ್ಷ ಯುಟಿ ಖಾದರ್
ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಅದರದ್ದೇ ಆದ ಇತಿಹಾಸವಿದೆ. ಮೊದಲು ವಿಶ್ವವಿದ್ಯಾನಿಲಯ ಎ ಗ್ರೇಡ್ ಹೊಂದಿತ್ತು. ಆದರೆ ಎರಡು ವರ್ಷಗಳಿಂದ ಬಿ ಗ್ರೇಡ್ಗೆ ಇಳಿದಿದೆ. ಕಳೆದ ವರ್ಷ ಪರೀಕ್ಷೆ ಬರೆದ ವಿದ್ಯಾರ್ಥಿಗಳ ರಿಸಲ್ಟ್ ಇನ್ನು ಬಂದಿಲ್ಲ ಎಂದರು.
ನಿವೃತ್ತಿಯಾದ ಅಧ್ಯಾಪಕರ ಪಿಂಚಣಿ ನೀಡಲು ಹಣವಿಲ್ಲ. ಪಿಂಚಣಿ ಹಣವನ್ನು ಕಾಂಟ್ರಾಕ್ಟರ್ಗೆ ಬಿಲ್ಡಿಂಗ್ ಕಟ್ಟಲು ಕೊಟ್ಟಿದ್ದಾರೆ. ಆದರೆ, ದುಡ್ಡು ಹಿಡಿದುಕೊಂಡು ಕಾಂಟ್ರಾಕ್ಟರ್ ಓಡಿ ಹೋಗಿದ್ದಾನೆ. ನಿವೃತ್ತಿಯಾದವರು ಪಿಂಚಣಿ ಹಣಕ್ಕಾಗಿ ಕಾಯುತ್ತಿದ್ದಾರೆ. ಈ ಬಗ್ಗೆ ಯಾಕೆ ಯಾವ ಪ್ರತಿನಿಧಿಯು ಮಾತಾಡಲ್ಲ ಎಂದು ಖಾದರ್ ಪ್ರಶ್ನಿಸಿದರು.
ಟೀಚಿಂಗ್ ಮಾಡಿದ ಸಿಬ್ಬಂದಿಗೆ ಸಂಬಳ ನೀಡದೆ ಮೂರು ತಿಂಗಳಾಗಿವೆ. ಎ ಗ್ರೇಡ್ ನಿಂದ ಬಿ ಗ್ರೇಡ್ಗೆ ಬಂದಾಗಲು ಯಾವ ಜನಪ್ರತಿನಿಯು ಮಾತಾಡಲ್ಲ. ಸಂವಿಧಾನ ಬದ್ಧವಾಗಿ ನಿಯಮಕ್ಕೆ ಅನುಗುಣವಾಗಿ ಗಣೇಶೋತ್ಸವಕ್ಕೆ ಅನುದಾನ ಕೊಡಲು ಅವಕಾಶವಿದ್ದರೆ ಕೊಡಬಹುದು. ಇಲ್ಲದಿದ್ದರೆ ಅಡಿಟ್ ಅಬ್ಜೆಕ್ಷನ್ ಆಗುತ್ತದೆ. ಈ ಹಿಂದೆ ಹಣ ನೀಡಿದ ಕಾರಣಕ್ಕೆ ಅಡಿಟ್ ಜನರಲ್ ಅಡಿಟ್ ಅಬ್ಜೆಕ್ಷನ್ ಮಾಡಿದ್ದಾರೆ ಎಂದರು.
ಅನಗತ್ಯವಾಗಿ ಈ ವಿಚಾರದಲ್ಲಿ ಎಲ್ಲರೂ ಹಸ್ತಕ್ಷೇಪ ಮಾಡುವುದು ಬೇಡ. ವಿದ್ಯಾರ್ಥಿಗಳು, ಸಿಬ್ಬಂದಿ, ಆಡಳಿತ ಮಂಡಳಿ ಸೇರಿಕೊಂಡು ಮಾಡಲಿ. ಆದರೆ ಹೊರಗಿನವರು ಯಾಕೆ ಇದರಲ್ಲಿ ಭಾಗಿ ಆಗುವುದು? ಹೊರಗಿನವರು ಹೋಗಿ ಯಾಕೆ ರಾಜಕೀಯ ಮಾಡಬೇಕು? ಹೊರಗಿನವರಿಗೆ ಅಲ್ಲೇನು ಕೆಲಸವಿದೆ? ಗಣೇಶೋತ್ಸವದ ಬಗ್ಗೆ ಯುನಿವರ್ಸಿಟಿಗೆ ಸಂಬಂಧಿಸಿದವರು ತೀರ್ಮಾನ ಮಾಡುತ್ತಾರೆ ಎಂದರು.
ಇದನ್ನೂ ಓದಿ: ಧರ್ಮ ಸಾಮರಸ್ಯ ಮೆರೆದ ಸ್ವೀಕರ್ ಖಾದರ್; ನಾಗಾರಾಧನೆಗೆ ಕೇಳಿದ್ದಕ್ಕಿಂತ ಹೆಚ್ಚು ಜಮೀನು ದಾನ
ಯುಜಿಸಿ ರೂಲ್ಸ್ ಪ್ರಕಾರ ಮಾಡಲು ಯಾರು ಬೇಡ ಹೇಳುವುದಿಲ್ಲ. ಕಳೆದ ಬಾರಿಯ ಉಪಕುಲಪತಿಗಳು ಎಷ್ಟು ಖಾಸಗಿ ಸಂಸ್ಥೆಗಳಿಗೆ ಯುನಿವರ್ಸಿಟಿ ಹಣ ನೀಡಿದ್ದಾರೆ? ಯೂನಿವರ್ಸಿಟಿ ಎ ಗ್ರೇಡ್ ನಿಂದ ಬಿ ಗ್ರೇಡ್ಗೆ ಹೋದಾಗಲೇ ಎಚ್ಚೆತ್ತುಕೊಳ್ಳಬೇಕಿತ್ತು. ಈ ಬಗ್ಗೆ ಯಾವ ಸಿಂಡಿಕೇಟ್ ಸಭೆಯಲ್ಲಿಯೂ ಇದರ ಬಗ್ಗೆ ಮಾತಾಡಲ್ಲ ಎಂದು ಹೇಳಿದರು.
ನನಗೆ ಯುನಿವರ್ಸಿಟಿಯ ಮಾಹಿತಿ ತುಂಬಾ ಇದೆ. 10 ನೇ ತರಗತಿ ಕಲಿತ ಸಿಬ್ಬಂದಿಗೆ 40 ಸಾವಿರ ಸಂಬಳ ಕೊಡುತ್ತಿದ್ದಾರೆ. ಪದವಿ ಕಲಿತ ಸಿಬ್ಬಂದಿಗೆ 20 ಸಾವಿರ ಸಂಬಳ ನೀಡುತ್ತಿದ್ದಾರೆ. ಇದರ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಒತ್ತು ಕೊಡಬೇಕು. ನಾನು ಸ್ಪೀಕರ್ ಆಗಿರುವ ಕಾರಣ ಇದರ ಬಗ್ಗೆ ಜಾಸ್ತಿ ಚರ್ಚೆ ಮಾಡಲ್ಲ. ನಾನೆಲ್ಲಿ ಮಾತನಾಡಬೇಕು ಅಲ್ಲಿ ಮಾತನಾಡಿದ್ದೇನೆ ಎಂದರು.
ಇದು ಕೊಡಗು ಮಂಗಳೂರಿಗೆ ಸೇರಿದ ವಿಶ್ವವಿದ್ಯಾಲಯ. ಎಲ್ಲರಿಗೂ ಇದರ ಬಗ್ಗೆ ಜವಬ್ದಾರಿ ಇದೆ. ಶಿಕ್ಷಣದ ಗುಣಮಟ್ಟ ಚರ್ಚೆ ಮಾಡುವುದು ಬಿಟ್ಟು ಬೇರೆಲ್ಲಾ ಚರ್ಚೆ ಮಾಡುತ್ತಿದ್ದೇವೆ ಎಂದು ಖಾದರ್ ಅಸಮಾಧಾನ ಹೊರಹಾಕಿದರು.
ಒಂದಿಬ್ಬರು ಹೇಳುವ ಹೇಳಿಕೆಗೆ ಮಹತ್ವ ಕೊಡಬೇಕಿಲ್ಲ: ಖಾದರ್
ಧರ್ಮಗಳ ಬಗ್ಗೆ ಅವಹೇಳನ ವಿಚಾರವಾಗಿ ಮಾತನಾಡಿದ ಖಾದರ್, ಎಲ್ಲಾ ಧರ್ಮಕ್ಕೂ ಅದರದ್ದೇ ಆದ ಮಹತ್ವವಿದೆ ಗೌರವವಿದೆ. ಎಲ್ಲಾ ಧರ್ಮವೂ ಪ್ರೀತಿ ವಿಶ್ವಾಸ ಸಹೋದರತೆಯನ್ನು ತಿಳಿಸುತ್ತದೆ. ಇದನ್ನು ಹೊರತುಪಡಿಸಿ ದ್ವೇಷವನ್ನು ಎಲ್ಲಿಯೂ ತಿಳಿಸುವುದಿಲ್ಲ. ಎಲ್ಲಾ ಧರ್ಮಗಳು ಸಮಾಜವನ್ನು ಒಗ್ಗಟ್ಟು ಮಾಡುವ ಸಂದೇಶ ಕೊಡುತ್ತದೆ. ಬಿಕ್ಕಟ್ಟು ಮಾಡುವ ಸಂದೇಶ ಯಾವ ಧರ್ಮವೂ ನೀಡಲ್ಲ. ಮಾನವೀಯತೆ, ಕರುಣೆ, ಪ್ರೀತಿ ವಿಶ್ವಾಸ, ಸಹೋದರತೆ, ಕ್ಷಮೆ ಇದಕ್ಕೆ ಸೀಮಿತವಾಗಿರಬೇಕು ಎಂದರು.
ನೆಮ್ಮದಿಯ ಜೀವನ ನಡೆಸುವ ಅವಕಾಶ ಎಲ್ಲಾ ಧರ್ಮ ಕೊಡುತ್ತದೆ. ಯಾರು ಏನು ಹೇಳಿಕೆ ನೀಡಿದ್ದಾರೆಂದು ಗೊತ್ತಿಲ್ಲ. ನಾವು ನಮ್ಮ ನಮ್ಮ ಧರ್ಮವನ್ನು ಅಚ್ಚುಕಟ್ಟಾಗಿ ಆಚರಿಸಿ ಇನ್ನಿತರ ಧರ್ಮವನ್ನು ಗೌರವಿಸಬೇಕು. ಸರ್ವ ಜನರ ಪ್ರೀತಿಗೆ ಪಾತ್ರರಾಗಿ ದೇವರ ಪ್ರೀತಿಗೆ ಪಾತ್ರರಾಗಬೇಕು. ಒಂದಿಬ್ಬರು ಹೇಳುವ ಹೇಳಿಕೆಗೆ ಮಹತ್ವ ಕೊಡಬೇಕಿಲ್ಲ. ಒಗ್ಗಟ್ಟಿನ ಸಮಾಜ ನಿರ್ಮಾಣ ಆಗಬೇಕು. ಧರ್ಮದ ವಿಚಾರದಲ್ಲಿ ದ್ವೇಷ, ನೋವುಂಟು ಮಾಡಬಾರದು. ಪ್ರೀತಿ ಸಹೋದರತೆಯನ್ನು ಬೆಳೆಸಬೇಕು ಎಂದರು.
ಮಂಗಳೂರು ಪೊಲೀಸ್ ಆಯುಕ್ತರ ವರ್ಗಾವಣೆ ವಿಚಾರವಾಗಿ ಮಾತನಾಡಿದ ಖಾದರ್, ಇಲ್ಲಿ ವ್ಯಕ್ತಿ ಮುಖ್ಯ ಅಲ್ಲ, ಸರ್ಕಾರ ಮುಖ್ಯ. ಒಂದೊಂದು ಸರ್ಕಾರ ಇದ್ದಾಗ ಒಂದೊಂದು ಅಧಿಕಾರಿ ಇರುತ್ತಾರೆ, ಇದೇ ಅಧಿಕಾರಿ ಹಿಂದಿನ ಸರ್ಕಾರ ಇದ್ದಾಗ ಇದ್ದರು ಅಲ್ವಾ? ಅವಾಗ ಏನಾಗಿತ್ತು? ರೇಡ್ ಆಗಿತ್ತಾ? ಅಧಿಕಾರಿ ನಮಗೆ ಮುಖ್ಯ ಅಲ್ಲ ಸರ್ಕಾರ ಮುಖ್ಯ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:54 pm, Fri, 8 September 23