AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಬಳ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಅದೊಂದು ಘಟನೆ: ಅಷ್ಟಕ್ಕೂ ನಡೆದಿದ್ದೇನು?

ಮಂಗಳೂರು ಕಂಬಳದಲ್ಲಿ ಹಿರಿಯ ಗೌರವ ಸಲಹೆಗಾರ ಗುಣಪಾಲ ಕಡಂಬರಿಗೆ ಆದ ಅವಮಾನದಿಂದ ಕಂಬಳ ಸಮಿತಿಯೊಳಗಿನ ಭಿನ್ನಾಭಿಪ್ರಾಯ ಬಯಲಾಗಿದೆ. ಸಂಸದ ಕ್ಯಾಪ್ಟನ್‌ ಬ್ರಿಜೇಶ್ ಚೌಟ ನೇತೃತ್ವದ ಕಂಬಳದಲ್ಲಿ ಈ ಘಟನೆ ನಡೆದಿದ್ದು, ಕಂಬಳ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸಮಿತಿ ಅಧ್ಯಕ್ಷರು ವಿವಾದ ಇತ್ಯರ್ಥಕ್ಕೆ ಮುಂದಾಗಿದ್ದಾರೆ.

ಕಂಬಳ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಅದೊಂದು ಘಟನೆ: ಅಷ್ಟಕ್ಕೂ ನಡೆದಿದ್ದೇನು?
ಕಂಬಳ ವಿವಾದ
ಅಶೋಕ್​ ಪೂಜಾರಿ, ಮಂಗಳೂರು
| Edited By: |

Updated on: Jan 02, 2026 | 6:39 PM

Share

ಮಂಗಳೂರು, ಜನವರಿ 02: ತುಳುನಾಡಿನ ಜಾನಪದೀಯ ಕ್ರೀಡೆ ಕಂಬಳ (Kambala). ಕಂಬಳಕ್ಕೆ ಪ್ರೇಕ್ಷಕ ವರ್ಗ ಹೆಚ್ಚಾಗುತ್ತಿದ್ದಂತೆಯೇ ಇದೀಗ ಕಂಬಳ‌ ಸಮಿತಿ ಒಡೆದ ಮನೆಯಾಗಿದೆ. ಕಂಬಳದ ಹಿರಿಯ ಗೌರವ ಸಲಹೆಗಾರ, ಕಂಬಳದ ಭೀಷ್ಮ ಎಂದೇ ಕರೆಯಲ್ಪಡುವ ಗುಣಪಾಲ‌‌ ಕಡಂಬರಿಗೆ (Gunapal Kadamba) ತುಂಬಿದ ಸಭೆಯಲ್ಲೇ ಏಕವಚನ ಪ್ರಯೋಗ ಮಾಡಿದ್ದು, ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್‌ ಬ್ರಿಜೇಶ್ ಚೌಟ ನೇತೃತ್ವದ ಕಂಬಳದಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಕಂಬಳ ವಲಯದಲ್ಲಿ‌ ಬಿರುಗಾಳಿ ಎಬ್ಬಿದೆ.

ಹೌದು, ಸಾಧನೆಗಳ ಮೂಲಕ ಸುದ್ದಿಯಾಗುತ್ತಿದ್ದ ಕಂಬಳದಲ್ಲಿ ಇದೇ ಮೊದಲ ಬಾರಿಗೆ ಭಾರೀ ಭಿನ್ನಾಭಿಪ್ರಾಯ ಸ್ಫೋಟವಾಗಿದೆ. ಕಂಬಳ ಸಮಿತಿಯ ಶೀತಲ ಸಮರ ಇದೀಗ ಬಹಿರಂಗವಾಗಿದ್ದು, ಕಂಬಳ ವಲಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ.

ನಡೆದದ್ದೇನು?

ಸಂಸದ ಕ್ಯಾಪ್ಟನ್‌ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ 9ನೇ ವರ್ಷದ ಮಂಗಳೂರು ಕಂಬಳ ಕಳೆದ ಶನಿವಾರ ಅದ್ಧೂರಿಯಿಂದ ನಡೆಯಿತು. ರಾತ್ರಿ ವೇಳೆ ರೇಸ್ ಎಂಡ್ ಪಾಯಿಂಟ್ ನಲ್ಲಿ ಗುಣಪಾಲ ಕಡಂಬ ಮೈಕ್‌‌ನಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದರು. ರೇಸ್‌ ಆರಂಭದ ಪಾಯಿಂಟ್‌ನಲ್ಲಿ ಯಶವಂತ್ ಎಂಬುವವರು ಮೈಕ್‍‌ನಲ್ಲಿ ಸ್ಪರ್ಧೆಗೆ ಕೋಣಗಳನ್ನು ಬಿಡಲು ಸೂಚಿಸುತ್ತಿದ್ದರು. ಈ ವೇಳೆ ಏಕಾಏಕಿ ಯಶವಂತ್‌ರಿಂದ ಮೈಕ್ ಕಸಿದುಕೊಂಡ ಕಂಬಳ ಸಮಿತಿ ಕಾರ್ಯಕಾರಿಣಿ ಸದಸ್ಯ ಅರುಣ್ ಶೆಟ್ಟಿ ಬಜಪೆ ಎಂಬಾತ ಗುಣಪಾಲ ಕಡಂಬರಿಗೆ ಏಕವಚನದಲ್ಲೇ ಬೈಯುವುದಕ್ಕೆ ಆರಂಭಿಸಿದರು. ಈ ವೇಳೆ ಕಡಂಬರು ಸುಮ್ಮನಿದ್ದು, ಕಂಬಳ ಸುಸೂತ್ರವಾಗಿ ನಡೆಯಲು ಅನುವು ಮಾಡಿಕೊಟ್ಟಿರು. ಆದರೆ ಅರುಣ್ ಶೆಟ್ಟಿ ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಕಂಬಳಕ್ಕೆ ಮತ್ತೆ ಅಡ್ಡಿ, ಪಿಲಿಕುಳದಲ್ಲಿ ಕಂಬಳ ನಡೆಸುವುದಕ್ಕೆ ಪ್ರಾಣಿಪ್ರಿಯರ ವಿರೋಧ: ಕೋರ್ಟ್‌ಗೆ ದೂರು

ಇನ್ನು ವೈರಲ್ ವಿಡಿಯೋಗೆ ಮಾನಹಾನಿಕಾರಕ ಬರಹ ಬರೆದು ಕಂಬಳ ಸಮಿತಿ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಲ್ಲಿಗೆ ಕಡಂಬ ವಿರುದ್ಧ ಲೋಕೇಶ್ ಶೆಟ್ಟಿ ಮತ್ತು ಅರುಣ್ ಶೆಟ್ಟಿಗೆ ಇದ್ದ ತೀವ್ರ ಅಸಮಾಧಾನ ಬಯಲಾಗಿದೆ. 79ರ ಹರೆಯದ ಗುಣಪಾಲ‌‌ ಕಡಂಬ ಕಳೆದ 55 ವರ್ಷಗಳಿಂದ ಕಂಬಳಕ್ಕೆ ಸೇವೆ ಸಲ್ಲಿಸುತ್ತಿದ್ದು, ಹಿರಿಯ ಜೀವಕ್ಕೆ ಮಾಡಿದ ಅವಮಾನಕ್ಕೆ ಕಂಬಳ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕಂಬಳ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಗುಣಪಾಲ ಕಡಂಬ ಅಭಿಮಾನಿಗಳು ಜಿಲ್ಲಾ ಕಂಬಳ ಸಮಿತಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆಯೇ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಪ್ರಕರಣ ತಣಿಸಲು ಮುಂದಾಗಿದ್ದಾರೆ. ಕಂಬಳದಲ್ಲಿ ವಿವಾದಗಳು ಸಾಮಾನ್ಯವಾಗಿದ್ದು, ಈ ಬಾರಿ ಬಹಿರಂಗವಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಗುಣಪಾಲ ಕಡಂಬರಿಗೆ ಆದ ಅವಮಾನದ ಬಗ್ಗೆ ಕಂಬಳ‌ ಸಮಿತಿಯ ಹಿರಿಯರು ಕೂತು ಸಮಾಲೋಚನೆ ನಡೆಸಿ ವಿವಾದ ಬಗೆಹರಿಸುವುದಾಗಿ ಬೆಳಪು ದೇವಿ ಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ತುಳುವನ್ನು 2ನೇ ಅಧಿಕೃತ ಭಾಷೆಯಾಗಿಸಲು ಗಂಭೀರ ಪ್ರಯತ್ನ; ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

ದೇವಿಪ್ರಸಾದ್ ಶೆಟ್ಟಿ ಅಧಿಕಾರಕ್ಕೆ ಬಂದ ಬಳಿಕವೇ ಕಂಬಳದಲ್ಲಿ ಗುಂಪುಗಾರಿಕೆ ಆರಂಭವಾಗಿದೆ ಅನ್ನೋದು ಕಡಂಬ ಅಭಿಮಾನಿಗಳ ಆರೋಪ. ಸಮಿತಿಯ ಅವಧಿ ಮುಕ್ತಾಯವಾದರೂ ಅಧಿಕಾರ ಬಿಟ್ಟುಕೊಡದೇ ಗುಂಪುಗಾರಿಕೆ ಮಾಡಲಾಗುತ್ತಿದೆ ಅಂತಾ ಆರೋಪಿಸಲಾಗಿದೆ. ಅದೇ ಏನೇ ಆದರೂ ಪೇಟಾದ ತೂಗುಕತ್ತಿಯ ನಡುವೆ ಕಂಬಳದೊಳಗೆಯೇ ಅಸಮಾಧಾನ ಭುಗಿಲೆದ್ದಿದ್ದು, ಹಿರಿಯರ ಸ್ವಪ್ರತಿಷ್ಠೆ ಕಂಬಳಕ್ಕೆ ಕುತ್ತು ತರದೇ ಇರಲಿ ಅನ್ನೋದು ಅಸಂಖ್ಯಾತ ಅಭಿಮಾನಿಗಳ‌ ಆಶಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.