ಪ್ರಯಾಣಿಕನನ್ನು ಒದ್ದು ರಸ್ತೆಗೆ ತಳ್ಳಿದ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್: ವಿಡಿಯೋ ವೈರಲ್
ಪ್ರಯಾಣಿಕ ಬಸ್ ಇಳಿಯಲು ಒಪ್ಪದೇ ಇದ್ದಾಗ ಕಾಲಿನಿಂದ ಕಂಡಕ್ಟರ್ ಒದ್ದಿದ್ದಾನೆ. ಪರಿಣಾಮ ಪ್ರಯಾಣಿಕ ರಸ್ತೆಗೆ ಬಿದಿದ್ದಾನೆ. ಬಳಿಕ ಆತನನ್ನ ಅಲ್ಲೇ ಬಿಟ್ಟು ಬಸ್ ಮುಂದಕ್ಕೆ ಚಲಿಸಿದೆ.
ಮಂಗಳೂರು: ಕೆಎಸ್ ಆರ್ಟಿಸಿ ಬಸ್ ನಿರ್ವಾಹಕ ಪ್ರಯಾಣಿಕನನ್ನು ಒದ್ದು ರಸ್ತೆಗೆ ತಳ್ಳಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ಘಟನೆ ನಡೆದಿದ್ದು, ಸಾಮಾಜಿಕ ತಾಣಗಳಲ್ಲಿ ಕಂಡಕ್ಟರ್ ಅಮಾನವೀಯ ವರ್ತನೆ ವೈರಲ್ ಆಗಿದೆ. ಪ್ರಯಾಣಿಕ ಕಡಿದು ಬಸ್ ಹತ್ತಿದಾಗಲೇ ಕಂಡಕ್ಟರ್ ತಡೆದಿದ್ದಾನೆ. ಪ್ರಯಾಣಿಕನ ಕೊಡೆ ಕಿತ್ತೆಸೆದು ಬಸ್ ಒಳಗಡೆಯೇ ಕೈಯಿಂದ ಹಲ್ಲೆ ಮಾಡಲಾಗಿದೆ. ಪ್ರಯಾಣಿಕ ಬಸ್ ಇಳಿಯಲು ಒಪ್ಪದೇ ಇದ್ದಾಗ ಕಾಲಿನಿಂದ ಕಂಡಕ್ಟರ್ ಒದ್ದಿದ್ದಾನೆ. ಪರಿಣಾಮ ಪ್ರಯಾಣಿಕ ರಸ್ತೆಗೆ ಬಿದಿದ್ದಾನೆ. ಬಳಿಕ ಆತನನ್ನ ಅಲ್ಲೇ ಬಿಟ್ಟು ಬಸ್ ಮುಂದಕ್ಕೆ ಚಲಿಸಿದೆ. ಸಾಮಾಜಿಕ ತಾಣಗಳಲ್ಲಿ ಸದ್ಯ ಈ ವಿಡಿಯೋ ಫುಲ್ ವೈರಲ್ ಆಗಿದ್ದು, ನಿರ್ವಾಹಕನ ದುರ್ವರ್ತನೆ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಪ್ರಯಾಣಿಕನ ಜೊತೆ ಅನುಚಿತ ವರ್ತನೆ ತೋರಿದ ವ್ಯಕ್ತಿಯನ್ನು ಕೆಎ 21 ಎಫ್ 0002 ಬಸ್ ನಂಬರ್‌ನ ನಿರ್ವಾಹಕ ಸುಬ್ಬರಾಜ್ ರೈ ಎಂದು ಗುರುತಿಸಲಾಗಿದೆ. ಪ್ರಯಾಣಿಕ ಮೇಲ್ನೋಟಕ್ಕೆ ಪಾನಮತ್ತನಂತೆ ಕಂಡು ಬಂದಿದ್ದು, ಬಸ್ ಹತ್ತುವಾಗಲೇ ನಿರ್ವಾಹಕ ತಡೆದು ಆತನ ಕೊಡೆಯನ್ನು ರಸ್ತೆಗೆಸೆದಿದ್ದಾನೆ. ಬಳಿಕ ಬಸ್ಸಿನಿಂದ ಕೆಳಗಿಳಿಯುವಂತೆ ನಿರ್ವಾಹಕ ಪ್ರಯಾಣಿಕನಿಗೆ ಸೂಚಿಸಿದ್ದು, ಈ ವೇಳೆ ಕೈಯಿಂದ ಹಲ್ಲೆ ಮಾಡಿದ್ದಾನೆ. ಕೊನೆಗೆ ಪ್ರಯಾಣಿಕ ಕೇಳದಿದ್ದಾಗ ಕಾಲಿನಿಂದ ಒದ್ದು, ರಸ್ತೆಗೆ ತಳ್ಳಿದ್ದಾನೆ. ರಸ್ತೆಯಲ್ಲಿ ಬಿದ್ದ ಪ್ರಯಾಣಿಕನನ್ನು ಅಲ್ಲಿಯೇ ಬಿಟ್ಟು ಬಸ್ ಸಂಚರಿಸಿದೆ.
ನಿರ್ವಾಹಕನ ಅಮಾನತ್ತಿಗೆ ಆಗ್ರಹ:
ಬಸ್ಸಿನಲ್ಲಿರುವ ವ್ಯಕ್ತಿ ಯಾವುದೇ ಸ್ಥಿತಿಯಲ್ಲಿದ್ದರೂ ಕಾನೂನು ಕೈಗೆತ್ತಿಕೊಳ್ಳುವ ಯಾವುದೇ ಅಧಿಕಾರ ನಿರ್ವಾಹಕರಿಗಿರುವುದಿಲ್ಲ. ಇಲ್ಲಿ ನಿರ್ವಾಹಕ ಮಾಡಿರುವುದು ತಪ್ಪು ಎಂದು ಕಾಣುತ್ತಿದ್ದು, ಹೀಗಾಗಿ ಕೂಡಲೇ ಸೇವೆಯಿಂದ ಅಮಾನತು ಮಾಡಲಾಗುವುದು ಎಂದು ಪುತ್ತೂರು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಮಾಧ್ಯಮ ಒಂದಕ್ಕೆ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:21 am, Thu, 8 September 22