ಮಂಗಳೂರು: KSRTC ಬಸ್​ನಲ್ಲಿ ಕೋಳಿ ಮಾಂಸ ಜಗಳ; ಠಾಣೆಗೆ ಬಸ್​ ತೆಗೆದುಕೊಂಡು ಹೋದ ಚಾಲಕ

ಕೂಲಿ ಕಾರ್ಮಿಕರೊಬ್ಬರು ಕೋಳಿ ಮಾಂಸದೊಂದಿಗೆ ಬಸ್ ಹತ್ತಿದ್ದನ್ನು ಆಕ್ಷೇಪಿಸಿದ ಕೆಎಸ್​ಆರ್​ಟಿಸಿ ಬಸ್ ಕಂಡಕ್ಟರ್, ಪ್ರಯಾಣಿಕನನ್ನು ಇಳಿಯುವಂತೆ ಒತ್ತಾಯಿಸಿದ್ದಾರೆ. ಇದನ್ನು ನಿರಾಕರಿಸಿದ್ದಕ್ಕೆ ಚಾಲಕ ಮತ್ತು ಕಂಡೆಕ್ಟರ್ ಬಸ್​ ಅನ್ನು ಪ್ರಯಾಣಿಕರ ಸಹಿತ ನೇರವಾಗಿ ಪೊಲೀಸ್ ಠಾಣೆಗೆ ಕೊಂಡೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.

ಮಂಗಳೂರು: KSRTC ಬಸ್​ನಲ್ಲಿ ಕೋಳಿ ಮಾಂಸ ಜಗಳ; ಠಾಣೆಗೆ ಬಸ್​ ತೆಗೆದುಕೊಂಡು ಹೋದ ಚಾಲಕ
ಕೋಳಿ ಮಾಂಸದೊಂದಿಗೆ ಬಸ್ ಹತ್ತಿದ್ದಕ್ಕೆ ಕಾರ್ಮಿಕನನ್ನು ಠಾಣೆಗೆ ಕರೆದೊಯ್ದ KSRTC ಬಸ್ ಚಾಲಕ, ಕಂಡಕ್ಟರ್
Follow us
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: Rakesh Nayak Manchi

Updated on: Oct 16, 2023 | 10:07 PM

ಮಂಗಳೂರು, ಅ.16: ಪ್ರಯಾಣಿಕನೊಬ್ಬ ಚೀಲದಲ್ಲಿ ಕೋಳಿ ಮಾಂಸ ಹಿಡಿದುಕೊಂಡು ಕೆಎಸ್​ಆರ್​ಟಿಸಿ (KSRTC) ಬಸ್ ಹತ್ತಿದ ಕಾರಣಕ್ಕಾಗಿ ಆತನಿಗೆ ನಿರ್ವಾಹಕ ಅವ್ಯಾಚ್ಚ ಶಬ್ದದಿಂದ ಬೈದಿದ್ದಲ್ಲದೆ, ನೇರವಾಗಿ ಪ್ರಯಾಣಿಕರನ್ನು ಕೂರಿಸಿಕೊಂಡು ಬಸ್​ ಅನ್ನು ಪೋಲಿಸ್ ಠಾಣೆಗೆ ಕರೆದೊಯ್ದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.

ಸುರೇಶ್ ಎಂಬವರು ತುಂಬೆಯಲ್ಲಿ ಸ್ಟೇಟ್ ಬ್ಯಾಂಕ್ ಪುತ್ತೂರು ಕೆಎಸ್​ಆರ್​ಟಿಸಿ ಬಸ್ ಹತ್ತಿದ್ದಾರೆ. ಬಸ್ ನಿರ್ವಾಹಕ ಟಿಕೆಟ್ ನೀಡಲು ಬಂದಾಗ ಈತನ ಕೈಯಲ್ಲಿ ಚೀಲವೊಂದ್ದಿದ್ದು, ಇದರ ಬಗ್ಗೆ ವಿಚಾರಿಸಿದ್ದಾರೆ. ಪ್ರಯಾಣಿಕ ಕೋಳಿ ಮಾಂಸ ಎಂದು ತಿಳಿಸಿದಾಗ ಬಸ್​ನಿಂದ ಇಳಿಯುವಂತೆ ಒತ್ತಾಯಿಸಿದ್ದಾರೆ. ಕೋಳಿ ಮಾಂಸ ಬಸ್​ನಲ್ಲಿ ತರಲು ಅವಕಾಶವಿಲ್ಲ ಎಂಬ ವಾದ ನಿರ್ವಾಹಕನದ್ದಾಗಿದೆ. ಆದರೆ ಕೂಲಿ ಕಾರ್ಮಿಕನಿಗೆ ಇದರ ಅರಿವಿಲ್ಲದೆ ಬಸ್​ನಿಂದ ಇಳಿಯಲು ಒಪ್ಪಲಿಲ್ಲ.

ಹೀಗಾಗಿ ಇವರಿಬ್ಬರ ನಡುವೆ ವಾಗ್ವಾದ ನಡೆದಿದೆ. ನಿರ್ವಾಹಕ ಪ್ರಯಾಣಿಕನಿಗೆ ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಹೇಳಲಾಗಿದೆ. ಅಲ್ಲದೆ, ಬಸ್​ನಿಂದ ಇಳಿಯದ ಕಾರಣಕ್ಕಾಗಿ ಚಾಲಕ ಪ್ರಯಾಣಿಕರು ತುಂಬಿದ್ದ ಬಸ್ಸನ್ನು ನೇರವಾಗಿ ಪೋಲೀಸ್ ಠಾಣೆಗೆ ತಂದು ಪ್ರಯಾಣಿಕನನ್ನು ಎಳೆದು ಇಳಿಸಿ ಹೋಗಿದ್ದಾರೆ.

ಇದನ್ನೂ ಓದಿ: ಮಂಗಳೂರು ದಸರಾ ಪ್ರಯುಕ್ತ ಕೆಎಸ್​ಆರ್​ಟಿಸಿಯಿಂದ ವಿಶೇಷ ಪ್ಯಾಕೇಜ್

ಈ ವೇಳೆ ಠಾಣೆಯಲ್ಲಿದ್ದ ಎಸ್​ಐ ರಾಮಕೃಷ್ಣ ಅವರು ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಬುದ್ದಿ ಮಾತು ಹೇಳಿದ್ದಾರೆ. ಕೂಲಿ ಕಾರ್ಮಿಕರು ಬಸ್​ನಲ್ಲಿ ಮಾಂಸ, ಮೀನು ಕೊಂಡೊಯ್ಯಲು ಅವಕಾಶ ವಿಲ್ಲ ಎಂದಾದರೆ ಮತ್ತೆ ಹೇಗೆ ಕೊಂಡುಹೋಗುವುದು ಎಂಬ ಪ್ರಶ್ನೆಯನ್ನು ಸುರೇಶ್ ಮಾಡಿದ್ದಾರೆ.

ಕಾರು, ರಿಕ್ಷಾ ಬಾಡಿಗೆ ಮಾಡಿಕೊಂಡು ಒಂದು ಕೆಜಿ ಕೋಳಿ ಕೊಂಡುಹೋಗಬೇಕಾ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಬಡವರು ಕೋಳಿ ಮಾಂಸ ಕೊಂಡುಹೋದರೆ ಅವರನ್ನು ಪೋಲೀಸ್ ಠಾಣೆಗೆ ಕರೆದುಕೊಂಡು ಹೋಗುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಅಲ್ಲದೆ, ನಿರ್ವಾಹಕ ಚಾಲಕರ ಇಂತಹ ನಡೆಯ ಬಗ್ಗೆ ಅಕ್ರೋಶ ವ್ಯಕ್ತವಾಗಿದೆ.

ಕೋಳಿ, ಮೀನು ತರುವಂತಿಲ್ಲ

ಜೀವ ಇರುವ ಕೋಳಿ, ಮೀನುಗಳನ್ನು ತರಬಹುದು, ಮಾಂಸ ಇತರರಿಗೆ ವಾಸನೆ ಬರುತ್ತದೆ. ಇದರಿಂದಾಗಿ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಹೀಗಾಗಿ ಬಸ್​ನಲ್ಲಿ ಕೋಳಿ, ಮೀನು ಮಾಂಸ ತರುವಂತಿಲ್ಲ ಎಂದು ನಿಗಮ ಅದೇಶ ಮಾಡಿದೆ ಎಂದು ಕೆಎಸ್​ಆರ್​ಟಿಸಿ ಬಂಟ್ವಾಳ ವಿಭಾಗದ ವಿಭಾಗೀಯ ಅಧಿಕಾರಿ ಶ್ರೀಶ ಭಟ್ ಅವರು ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ