ಮಂಗಳೂರು ದಸರಾ ಪ್ರಯುಕ್ತ ಕೆಎಸ್​ಆರ್​ಟಿಸಿಯಿಂದ ವಿಶೇಷ ಪ್ಯಾಕೇಜ್

| Updated By: ಆಯೇಷಾ ಬಾನು

Updated on: Oct 16, 2023 | 3:54 PM

ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ‘ಮಂಗಳೂರು ದಸರಾ ದರ್ಶನ’ ವಿಶೇಷ ಪ್ಯಾಕೇಜ್ ಟೂರ್‌ಗಳು ಆರಂಭಗೊಂಡಿವೆ. ಭಾನುವಾರ ವಿವಿಧ ದೇವಸ್ಥಾನಗಳಿಗೆ ಒಂಬತ್ತು ಬಸ್‌ಗಳನ್ನು ನಿಯೋಜಿಸಲಾಗಿದೆ. ವಿವಿಧ ದೇವಸ್ಥಾನಗಳಿಗೆ ಪ್ರಯಾಣಿಕರು ಹೋಗಿ ಬರಲು ಒಂಬತ್ತು ಬಸ್‌ಗಳನ್ನು ಮೀಸಲಿಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಕ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.

ಮಂಗಳೂರು ದಸರಾ ಪ್ರಯುಕ್ತ ಕೆಎಸ್​ಆರ್​ಟಿಸಿಯಿಂದ ವಿಶೇಷ ಪ್ಯಾಕೇಜ್
KSRTC
Follow us on

ಮಂಗಳೂರು,ಅ.16: ಮಂಗಳೂರಿನಲ್ಲಿ ದಸರಾ ಉತ್ಸವ ಆರಂಭವಾಗಿದೆ (Mangaluru Darasa). ಮೈಸೂರು ದಸರಾದಂತೆಯೇ ಮಂಗಳೂರು ದಸರಾಗೂ ವಿಶೇಷ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ‘ಮಂಗಳೂರು ದಸರಾ ದರ್ಶನ’ ವಿಶೇಷ ಪ್ಯಾಕೇಜ್ ಟೂರ್‌ಗಳು ಆರಂಭಗೊಂಡಿವೆ. ಭಾನುವಾರ ವಿವಿಧ ದೇವಸ್ಥಾನಗಳಿಗೆ ಒಂಬತ್ತು ಬಸ್‌ಗಳನ್ನು ನಿಯೋಜಿಸಲಾಗಿದೆ. ಹಿಂದಿನ ದಸರಾ ಸಮಯದಲ್ಲಿ ವಿಶೇಷ ಪ್ಯಾಕೇಜ್​ಗೆ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆ ಈ ವರ್ಷ ಕೂಡ ವಿಶೇಷ ಪ್ಯಾಕೇಜ್ ಪರಿಚಯಿಸಲಾಗಿದೆ.

ವಿವಿಧ ದೇವಸ್ಥಾನಗಳಿಗೆ ಪ್ರಯಾಣಿಕರು ಹೋಗಿ ಬರಲು ಒಂಬತ್ತು ಬಸ್‌ಗಳನ್ನು ಮೀಸಲಿಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಕ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ. ಕೊಲ್ಲೂರು ದೇವಾಲಯಕ್ಕೆ ಹೋಗುವ ಪ್ರವಾಸಿಗರಿಗೆಂದೇ ನಿರ್ದಿಷ್ಟವಾಗಿ ನಾಲ್ಕು ಬಸ್ಸುಗಳನ್ನು ಮೀಸಲಿಡಲಾಗಿದೆ. ಹೆಚ್ಚುವರಿಯಾಗಿ, ಎರಡು ಬಸ್‌ಗಳನ್ನು ಮಡಿಕೇರಿ ಪ್ಯಾಕೇಜ್‌ಗೆ ನೀಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಮೊದಲ ದಿನ ಮೂರು ಬಸ್‌ಗಳು ಮಾತ್ರ ಬುಕ್ ಆಗಿದ್ದವು, ಈ ವರ್ಷ ಉತ್ತಮ ಆರಂಭವಾಗಿದ್ದು ಪ್ರತಿದಿನ ಸರಾಸರಿ 6-7 ಬಸ್‌ಗಳು ಬುಕ್ ಆಗುತ್ತಿವೆ. ವಾರಾಂತ್ಯದಲ್ಲಿ ಅಥವಾ ಅಕ್ಟೋಬರ್ 21 ರ ನಂತರ ಜನದಟ್ಟಣೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಕಳೆದ ವರ್ಷದಲ್ಲಿ, ನಾವು ದಿನಕ್ಕೆ ಗರಿಷ್ಠ 22 ಬಸ್‌ಗಳನ್ನು ನಿರ್ವಹಿಸಿದ್ದೇವೆ ಎಂದು ರಾಜೇಶ್ ಶೆಟ್ಟಿ ಹೇಳಿದರು.

ಕೊಲ್ಲೂರು ಮತ್ತು ನಗರ ಮಾರ್ಗಗಳಿಗೆ ಹೆಚ್ಚಿನ ಬೇಡಿಕೆಯಿದೆ. ದಸರಾ ಹಬ್ಬದ ಐದನೇ ದಿನ ಅಥವಾ ದಸರಾ ನಂತರ ನಗರಕ್ಕೆ ಭೇಟಿ ನೀಡಿ ಸುತ್ತಾಡುವವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ವಿಶೇಷ ಪ್ಯಾಕೇಜ್​ನಲ್ಲಿ ಮಂಗಳಾದೇವಿ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಸಸಿಹಿತ್ಲು ಭಗವತಿ ದೇವಸ್ಥಾನ, ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನ, ಉರ್ವ ಮಾರಿಯಮ್ಮ ದೇವಸ್ಥಾನ ಮತ್ತು ಕುದ್ರೋಳಿ ಮಾರಿಯಮ್ಮ ದೇವಸ್ಥಾನಗಳನ್ನು ಒಳಗೊಂಡಿರುತ್ತವೆ.

ಇದನ್ನೂ ಓದಿ: ನಂಜುಡೇಶ್ವರನಿಗೆ ತುಲಾಭಾರ ಸೇವೆ: ತಮ್ಮ ಆರೋಗ್ಯಕ್ಕಾಗಿ ಕುಟುಂಬದ ಸದಸ್ಯರೊಬ್ಬರು ಹೊತ್ತಿದ್ದ ಹರಕೆ ತೀರಿಸಿದ ಕುಮಾರಸ್ವಾಮಿ

ಮಂಗಳೂರಿನಿಂದ ಮಡಿಕೇರಿ ಪ್ಯಾಕೇಜ್​ನಲ್ಲಿ ರಾಜಾ ಸೀಟ್, ಅಬ್ಬೆ ಫಾಲ್ಸ್, ನಿಸರ್ಗಧಾಮ, ಗೋಲ್ಡನ್ ಟೆಂಪಲ್ ಮತ್ತು ಹಾರಂಗಿ ಅಣೆಕಟ್ಟುಗಳನ್ನು ಒಳಗೊಂಡಿದೆ. ಇದರಿಲ್ಲಿ ಕರ್ನಾಟಕ ಸಾರಿಗೆ ಬಸ್‌ನಲ್ಲಿ ವಯಸ್ಕರಿಗೆ 500 ರೂ. ಮತ್ತು ಮಕ್ಕಳಿಗೆ 400 ರೂ. ನಿಗದಿಪಡಿಸಲಾಗಿದೆ.

ಮಂಗಳೂರು- ಕೊಲ್ಲೂರು ಪ್ಯಾಕೇಜ್‌ನಲ್ಲಿ ಮಂಗಳೂರು ಬಸ್‌ ನಿಲ್ದಾಣದಿಂದ ಮಾರಣಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಉಡುಪಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನವಾಗಿ ವಾಪಸ್‌ ಮಂಗಳೂರು ಬಸ್‌ ನಿಲ್ದಾಣಕ್ಕೆ ಅವಕಾಶ ಮಾಡಲಾಗಿದೆ. ಕರ್ನಾಟಕ ಸಾರಿಗೆ ಬಸ್‌ಗೆ ವಯಸ್ಕರಿಗೆ 500 ರೂ. ಮತ್ತು ಮಕ್ಕಳಿಗೆ 400 ರೂ. ನಿಗದಿಪಡಿಸಲಾಗಿದೆ.

ಕೆಎಸ್‌ಆರ್‌ಟಿಸಿ ಪ್ರತಿ ಪ್ರವಾಸಕ್ಕೆ ಒಬ್ಬ ಕೋ ಆರ್ಡಿನೇಟರ್ ಅನ್ನು ನೇಮಿಸಿದೆ. ಅವರು ಪ್ರಯಾಣದ ಸಮಯದಲ್ಲಿ ಪ್ರಯಾಣಿಕರೊಂದಿಗೆ ಹೋಗುತ್ತಾರೆ. ಪ್ರವಾಸದಲ್ಲಿ ಉದ್ಭವಿಸಬಹುದಾದ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಪ್ರವಾಸಿಗರ ಕ್ಷೇಮಕ್ಕಾಗಿ ಇವರು ಜೊತೆ ಇರುತ್ತಾರೆ ಎಂದು ರಾಜೇಶ್ ಶೆಟ್ಟಿ ತಿಳಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ