ಮಂಗಳೂರು, ಜನವರಿ 12: ದೇಶದಲ್ಲಿ ಮಾಲ್ಡೀವ್ಸ್ ಬಾಯ್ಕಾಟ್ ಅಭಿಯಾನ ಜೋರಾಗಿದೆ. ಈ ನಡುವೆ ಲಕ್ಷದ್ವೀಪ (Lakshadweep) ಯಾನಕ್ಕೆ ಪ್ರವಾಸಿಗರ ಆಸಕ್ತಿ ಹೆಚ್ಚಾಗಿದೆ. ಆದರೆ ಹೆಚ್ಚಿನ ಜನರಿಗೆ ಕಡಲನಗರಿ ಮಂಗಳೂರಿನಿಂದ (Mangaluru) ಲಕ್ಷದ್ವೀಪಕ್ಕೆ ಕನೆಕ್ಟ್ ಆಗುವುದು ಸುಲಭ ಮತ್ತು ಲಕ್ಷದ್ವೀಪಕ್ಕೆ ಮಂಗಳೂರೇ ಆಸರೆ ಎಂಬ ವಿಚಾರ ತಿಳಿದಿಲ್ಲ. ಕೇರಳದ ಬಂದರು ಬಿಟ್ಟರೆ ಲಕ್ಷದ್ವೀಪಕ್ಕೆ ಮಂಗಳೂರೇ ಆಸರೆಯಾಗಿದ್ದು ಇಲ್ಲಿಂದ ಸರಕು ಸಾಗಾಟದ ಹಡಗು ನಿತ್ಯ ಸಂಚಾರ ನಡೆಸುತ್ತಿದೆ.
ಮಾಲ್ಡೀವ್ಸ್ ವರ್ಸಸ್ ಲಕ್ಷದ್ವೀಪ ಅಭಿಯಾನ ತೀವ್ರಸ್ವರೂಪ ಪಡೆಯುತ್ತಿದೆ. ಮಾಲ್ಡೀವ್ಸ್ ಗಿಂತ ನಮ್ಮ ಲಕ್ಷದ್ವೀಪ ಕಡಿಮೆಯೇನಿಲ್ಲ ಎಂಬ ಚರ್ಚೆ ಜೋರಾಗಿದೆ. ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ತೆರಳಿದ ಬಳಿಕ ಪ್ರವಾಸಿಗರು ಲಕ್ಷದ್ವೀಪಕ್ಕೆ ಹೋಗುವುದಕ್ಕೆ ಹಾತೊರೆಯುತ್ತಿದ್ದಾರೆ. ಆದ್ರೆ ಸದ್ಯ ಕೇರಳದ ಕೊಚ್ಚಿ ಹೊರತುಪಡಿಸಿ ಬೇರೆ ಎಲ್ಲಿಂದಲೂ ಲಕ್ಷದ್ವೀಪಕ್ಕೆ ಹೋಗುವ ಅವಕಾಶವಿಲ್ಲ. ಹೀಗಾಗಿ ಈ ಹಿಂದೆ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೋಗುತ್ತಿದ್ದ ಪ್ರವಾಸಿ ಹಡಗನ್ನು ಮತ್ತೆ ಪ್ರಾರಂಭಿಸುವಂತೆ ಒತ್ತಾಯ ಕೇಳಿಬಂದಿದೆ. ಇದೀಗ ಲಕ್ಷದ್ವೀಪ ವರ್ಸಸ್ ಮಾಲ್ಡೀವ್ಸ್ ಅಭಿಯಾನದ ಮಧ್ಯೆ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತೆರಳುವ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.
ಕೇರಳದ ಕೊಚ್ಚಿ, ಬೇಪೂರ್ ಬಂದರು ಬಿಟ್ಟರೆ ಲಕ್ಷದ್ವೀಪಕ್ಕೆ ಮಂಗಳೂರೇ ಆಸರೆ. ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಪ್ರವಾಸಿ ಹಡಗು ಕಾರಣಾಂತರಗಳಿಂದ ಸ್ಥಗಿತವಾದ್ರೂ ಸಹ ಎರಡು ದಶಕಕ್ಕೂ ಹೆಚ್ಚು ಸಮಯದಿಂದ ಸರಕು ಸಾಗಾಟದ ಹಡಗು ತೆರಳುತ್ತಿದೆ. ದಿನಬಳಕೆಯ ವಸ್ತುಗಳು ಮಂಗಳೂರಿನ ಹಳೆ ಬಂದರಿನಿಂದಲೇ ರವಾನೆಯಾಗುತ್ತಿದೆ. ಅಕ್ಕಿ, ಹಣ್ಣು,ತರಕಾರಿ ಸೇರಿದಂತೆ ಕಟ್ಟಡ ನಿರ್ಮಾಣ ವಸ್ತುಗಳಾದ ಜಲ್ಲಿ, ಸ್ಟೀಲ್ ಎಲ್ಲವನ್ನೂ ಮಂಗಳೂರಿನಿಂದ ಮಿನಿ ಶಿಪ್‌ಗಳ ಮೂಲಕ ಕಳುಹಿಸಿಕೊಡಲಾಗುತ್ತದೆ. ಪ್ರತಿನಿತ್ಯ ಈ ಶಿಪ್‌ಗಳು ಹೋಗುತ್ತಿದ್ದು ಸುಮಾರು 18ರಿಂದ 20 ಗಂಟೆಗಳಲ್ಲಿ ಲಕ್ಷದ್ವೀಪಕ್ಕೆ ತಲುಪುತ್ತವೆ. ಹೀಗಾಗಿ ಮುಂದೆ ಪ್ರವಾಸಿ ಹಡಗನ್ನು ಪುನಃ ಪ್ರಾರಂಭಿಸಿ ಇಲ್ಲಿನ ಬಂದರನ್ನು ಅಭಿವೃದ್ದಿಪಡಿಸಿ ಲಕ್ಷದ್ವೀಪಕ್ಕೆ ಹೋಗುವ ಕೇಂದ್ರವಾಗಿ ಮಾಡಬಹುದು ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ.
ಇದನ್ನೂ ಓದಿ: ಮತ್ತೆ ಲಕ್ಷದ್ವೀಪಕ್ಕೆ ಮಂಗಳೂರಿನಿಂದ ಪ್ರವಾಸಿ ಹಡಗು ಪ್ರಾರಂಭಿಸುವಂತೆ ಒತ್ತಾಯ
ಲಕ್ಷದ್ವೀಪಕ್ಕೆ ಕೇರಳದಿಂದ ಪ್ರವಾಸಿ ಹಡಗು ಹೋಗುವುದಾದರೆ ಕರ್ನಾಟಕದ ಮಂಗಳೂರಿನಿಂದ ಯಾಕೆ ಸಾಧ್ಯವಿಲ್ಲ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಪ್ರವಾಸೋದ್ಯಮ ದೃಷ್ಟಿಯಿಂದ ಇದು ಆದಾಯ ತರುವ ಯೋಜನೆಯಾಗಿದ್ದು ಸರ್ಕಾರ ಈ ಬಗ್ಗೆ ಗಂಭೀರವಾಗಿ ಯೋಚಿಸಿ ಒಂದು ನಿರ್ಧಾರ ಕೈಗೊಳ್ಳಬೇಕಾದ ಅಗತ್ಯವಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:46 am, Fri, 12 January 24