ಮಂಗಳೂರು, ಮೇ 29: ದಕ್ಷಿಣ ಕನ್ನಡದ ನೆರೆಯ ಜಿಲ್ಲೆ, ಗಡಿನಾಡು ಕಾಸರಗೋಡಿನಲ್ಲಿ (Kasaragod) ಮತ್ತೆ ಲವ್ ಜಿಹಾದ್ (Love Jihad) ಸದ್ದು ಕೇಳಿಬಂದಿದೆ. ಮುಸ್ಲಿಂ ಲೀಗ್ ನಾಯಕರೊಬ್ಬರು ಲವ್ ಜಿಹಾದ್ಗೆ ಬೆಂಬಲ ನೀಡುತ್ತಿದ್ದಾರೆ ಎಂದು ಕಾಸರಗೋಡಿನ ವಿಎಚ್ಪಿ ಸೇರಿ ಹಿಂದೂ ಪರ ಸಂಘಟನೆಗಳು ಅರೋಪಿಸಿವೆ. ಜಿಲ್ಲೆಯ ಬದಿಯಡ್ಕದಲ್ಲಿ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಹಿಂದೂ ಪರ ಸಂಘಟನೆಗಳು ಈ ಆರೋಪ ಮಾಡಿವೆ.
ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಅನ್ಯಮತೀಯ ಯುವಕನ ಜೊತೆ ಠಾಣೆಗೆ ಹಾಜರಾಗಿದ್ದಾರೆ. ಮಿರ್ಶಾದ್ ಎಂಬಾತನ ಜೊತೆ ತೆರಳಿದ ಯುವತಿ ಠಾಣೆಗೆ ಹಾಜರಾಗಿದ್ದಾರೆ. ಈಕೆ ಕಾಸರಗೋಡಿನ ಖಾಸಗಿ ಸಂಸ್ಥೆಯೊಂದರ ಶಿಕ್ಷಕಿಯಾಗಿದ್ದಾರೆ. ಆಕೆಯನ್ನು ಪೊಲೀಸರು ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸದ್ಯ ಆಕೆ ಸ್ವಇಚ್ಛೆಯಂತೆ ಯುವಕನ ಜೊತೆ ತೆರಳಿದ್ದಾರೆ.
ಇದರ ಬೆನ್ನಲ್ಲೇ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಲವ್ ಜಿಹಾದ್ಗೆ ಕೇರಳದ ಮುಸ್ಲಿಂ ಲೀಗ್ ನೇತಾರನೋರ್ವ ಷಡ್ಯಂತ್ರ ರೂಪಿಸಿ ಪ್ರೇಮಾಂಕುರವಾಗುವಂತೆ ಮಾಡಿದ್ದಾರೆ. ಆ ನೆಪದಲ್ಲಿ ಹಿಂದೂ ಯುವತಿಯೊಬ್ಬಳನ್ನು ಇಸ್ಲಾಂಗೆ ಮತಾಂತರಿಸಲು ಭಾರೀ ಸಂಚು ರೂಪಿಸಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ.
ಯುವತಿಯ ತಂದೆಯ ದೂರಿನಂತೆ ಬದಿಯಡ್ಕ ಪೊಲೀಸರು ನಾಪತ್ತೆ ಕೇಸು ದಾಖಲಿಸಿದ್ದರು. ದೂರಿನಲ್ಲಿ ಪೋಷಕರು ಯುವತಿಯ ಅಪಹರಣದ ಅನುಮಾನ ವ್ಯಕ್ತಪಡಿಸಿದ್ದರು.
ಮೇ 23ರಂದು ಮನೆಯಿಂದ ಹೊರಟ ಯುವತಿ ದಿಢೀರ್ ನಾಪತ್ತೆಯಾಗಿದ್ದರು. ಆ ಬಳಿಕ ಬದಿಯಡ್ಕ ರಿಜಿಸ್ಟ್ರಾರ್ ಕಚೇರಿ ಬೋರ್ಡ್‌ನಲ್ಲಿ ಇಬ್ಬರ ಭಾವಚಿತ್ರಗಳ ಸಹಿತ ನೋಟೀಸ್ ಪತ್ತೆಯಾಗಿತ್ತು. ರಿಜಿಸ್ಟರ್ ಕಚೇರಿಯಲ್ಲಿ ಯುವತಿ ಮತ್ತು ಮಿರ್ಶಾದ್ ಮದುವೆಯಾಗಿರುವುದು ತಿಳಿದುಬಂದಿತ್ತು. ಮದುವೆಯಾದ ನಂತರ ಮೇ 27ರಂದು ಬದಿಯಡ್ಕ ಠಾಣೆಗೆ ಜೋಡಿ ಹಾಜರಾಗಿತ್ತು.
ಇದನ್ನೂ ಓದಿ: ಲವ್ ಜಿಹಾದ್ ತಡೆಗೆ ಶ್ರೀರಾಮಸೇನೆಯಿಂದ ರಾಜ್ಯದ 6 ಕಡೆ ಸಹಾಯವಾಣಿ ಆರಂಭಿಸಲು ನಿರ್ಧಾರ
ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ ಲವ್ ಜಿಹಾದ್ ಸಕ್ರಿಯವಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗದ ಯುವತಿಯರಿಗೆ ಆಡಂಬರದ ಬದುಕಿನ ಆಮಿಷ ತೋರಿಸಿ ಲವ್ ಜಿಹಾದ್‌ನ ಜಾಲಕ್ಕೆ ಸಿಲುಕಿಸಲಾಗುತ್ತಿದೆ ಎಂದು ವಿಎಚ್ಪಿ, ಭಜರಂಗದಳ ಹಾಗೂ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿವೆ. ಲವ್ ಜಿಹಾದ್ಗೆ ಬದಿಯಡ್ಕ ಪೊಲೀಸರು ಸಾಥ್ ನೀಡುತ್ತಿದ್ದಾರೆ ಎಂದು ವಿಎಚ್ಪಿ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ