AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ನೇಹಾ ಕೊಲೆ ಲವ್ ಜಿಹಾದ್ ಎಂದ ಅಮಿತ್ ಶಾಗೆ ಸಿದ್ದರಾಮಯ್ಯ ತಿರುಗೇಟು

ಕೇಂದ್ರ ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿಯ ನೇಹಾ ಹಿರೇಮಠ್ ಕೊಲೆ ಪ್ರಕರಣವನ್ನು ಲವ್ ಜಿಹಾದ್ ಎಂದಿರುವುದು ಸಿಎಂ ಸಿದ್ದರಾಮಯ್ಯರನ್ನು ಕೆರಳಿಸಿದೆ. ಬಾಗಲಕೋಟೆಯಲ್ಲಿ ಚುನಾವಣೆ ಪ್ರಚಾರದ ವೇಳೆ ಅವರು ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿದರು. ಸಿದ್ದರಾಮಯ್ಯ ಮಾತಿನ ಪೂರ್ಣ ವಿವರಗಳಿಗೆ ಮುಂದೆ ಓದಿ.

ಬಾಗಲಕೋಟೆ: ನೇಹಾ ಕೊಲೆ ಲವ್ ಜಿಹಾದ್ ಎಂದ ಅಮಿತ್ ಶಾಗೆ ಸಿದ್ದರಾಮಯ್ಯ ತಿರುಗೇಟು
ಅಮಿತ್ ಶಾ & ಸಿದ್ದರಾಮಯ್ಯ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: Ganapathi Sharma

Updated on: May 03, 2024 | 1:18 PM

ಬಾಗಲಕೋಟೆ, ಮೇ 3: ಹುಬ್ಬಳ್ಳಿಯ ನೇಹಾ ಹಿರೇಮಠ್ (Neha Murder Case) ಕೊಲೆ ಪ್ರಕರಣವನ್ನು ಲವ್ ಜಿಹಾದ್ (Love Jihad) ಎಂದ ಕೇಂದ್ರ ಗ್ರಹ ಸಚಿವ ಅಮಿತ್ ಶಾಗೆ (Amit Shah) ಸಿಎಂ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಕೇವಲ ರಾಜಕೀಯಕ್ಕೋಸ್ಕರ ಆ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನೇಹಾ ಪ್ರಕರಣದ ತನಿಖೆಯನ್ನು ನಾವು ತಕ್ಷಣವೇ ಸಿಐಡಿಗೆ ಕೊಟ್ಟಿದ್ದೇವೆ. ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿದ್ದೇವೆ. ಆರೋಪಿಗೆ ಕಠಿಣ ಶಿಕ್ಷೆ ಕೊಡಲು ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಈ ಬಗ್ಗೆ ಪಬ್ಲಿಕ್ ಕ್ಲಾಸಿಕ್ಯೂಟರ್ ಜೊತೆ ಕೂಡ ಮಾತನಾಡಿದ್ದೇನೆ ಎಂದು ತಿಳಿಸಿದರು.

ಕಾನೂನು ರೀತಿಯಲ್ಲಿ ಏನೆಲ್ಲ ಕ್ರಮ ಕೈಗೊಳ್ಳಲು ಸಾಧ್ಯವಿದೆಯೋ ಅದನ್ನೆಲ್ಲ ಸರ್ಕಾರ ಮಾಡುತ್ತಿದೆ. ಅವರು ಲವ್ ಜಿಹಾದ್ ಎಂದು ರಾಜಕೀಯಕ್ಕೋಸ್ಕರ ಹೇಳುತ್ತಿದ್ದಾರೆ. ಹಾಗಾದರೆ ಅಮಿತ್ ಶಾ ಕೇಂದ್ರದ ಗೃಹ ಮಂತ್ರಿ ಆಗಿದ್ದುಕೊಂಡು ಮಣಿಪುರದ ಘಟನೆ ಬಗ್ಗೆ ಯಾಕೆ ಒಂದೇ ಒಂದು ಮಾತನಾಡಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮಣಿಪುರದಲ್ಲಿ ಅಷ್ಟೊಂದು ಹಿಂಸಾಚಾರವಾದರೂ ಅಲ್ಲಿದ್ದ ಸರ್ಕಾರವನ್ನೇ ಮುಂದುವರಿಸಿದ್ದರು. ಕೇಂದ್ರದ ಗ್ರಹ ಸಚಿವರಾಗಿದ್ದುಕೊಂಡು ನೀವು (ಅಮಿತ್ ಶಾ) ಏನು ಮಾಡಿದಿರಿ? ಮುಖ್ಯಮಂತ್ರಿಯನ್ನು ಬದಲಾಯಿಸಿದಿರಾ ಅಥವಾ ಸರ್ಕಾರವನ್ನು ವಜಾ ಮಾಡಿದಿರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಏನು ಹೇಳಿದ್ರು ಅಮಿತ್ ಶಾ?

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಅಮಿತ್ ಶಾ, ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣವನ್ನು ವೈಯಕ್ತಿಕ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಪಸಂಖ್ಯಾತರ ದೃಷ್ಟಿಕೋನಕ್ಕಾಗಿ ನೇಹಾ ಕೊಲೆಯನ್ನು ವೈಯಕ್ತಿಕ ಪ್ರಕರಣ ಎಂದು ಕಾಂಗ್ರೆಸ್ ನಾಯಕರು ಹೇಳಿದರು. ಕಾಲೇಜು ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯರಿಗೆ ಭದ್ರತೆ ಒದಗಿಸಬೇಕಲ್ಲವೇ? ಕಾಲೇಜು ಆವರಣದಲ್ಲಿ ನಡೆದ ಕೊಲೆ ಅದು ಹೇಗೆ ಖಾಸಗಿ ವಿಚಾರವಾಗುತ್ತದೆ ಎಂದು ಅಮಿತ್ ಶಾ ಪ್ರಶ್ನಿಸಿದ್ದರು.

ಪ್ರಜ್ವಲ್ ವಿಚಾರ ಗೊತ್ತಿದ್ದೂ ಮೈತ್ರಿ ಮಾಡಿದ ಬಿಜೆಪಿ: ಸಿದ್ದರಾಮಯ್ಯ

ಪ್ರಜ್ವಲ್ ರೇವಣ್ಣ ಬಗ್ಗೆ ಬಿಜೆಪಿಗರು ಬಾಯಿ ಬಿಡದ ವಿಚಾರವಾಗಿ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಬಿಜೆಪಿಗರು ತಪ್ಪು ಮಾಡಿದ್ದಾರೆ. ಯಾಕಂದರೆ, ಅವರಿಗೆ ಮೊದಲೇ ಗೊತ್ತಿತ್ತು. ಬಿಜೆಪಿ ಹಾಗೂ ಜೆಡಿಎಸ್​​​ನವರಿಗೂ ಗೊತ್ತಿತ್ತು. ಪ್ರಜ್ವಲ್ ರೇವಣ್ಣ ವಿಡಿಯೊಗಳು ಇವೆ ಅಂತ ಗೊತ್ತಿತ್ತು. ಆತ ಕೇವಲ ದೌರ್ಜನ್ಯ ಅಲ್ಲ, ಅತ್ಯಾಚಾರ ಎಸಗಿದ್ದಾನೆ. ಯಾವುದೇ ಸಂತ್ರಸ್ತೆ ರೇಪ್ ಆಗಿದೆ ಎಂದು ಸುಳ್ಳು ಹೇಳುತ್ತಾರೆಯೇ? ಹಾಗೆ ಮಾಡಿದರೆ ಅವರ ಜೀವನ ಹಾಳಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ: ಮಾಜಿ ಸಚಿವ ಹೆಚ್​ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ, ಮೈಸೂರಿನಲ್ಲಿಯೂ ಕೇಸ್ ದಾಖಲು

ಮದುವೆಯಾದ ಹೆಣ್ಮಗಳು ರೇಪ್ ಮಾಡಿದ್ದಾರೆ ಎಂದು ಬಹಿರಂಗವಾಗಿ ಹೇಳಬೇಕಾದರೆ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಸಂತ್ರಸ್ತೆ ಹೆಣ್ಮಕ್ಕಳು ಸುಳ್ಳು ಹೇಳಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ