ಬಿಸಿಲಿನ ಶಾಖಕ್ಕೆ ಕುಸಿದು ಬಿದ್ದು ಉಡುಪಿಯಲ್ಲಿ ವ್ಯಕ್ತಿ ಮೃತ್ಯು; ಪುತ್ತೂರಿನಲ್ಲಿ ಉತ್ತರ ಪ್ರದೇಶ ಮೂಲದ ಮಹಿಳೆ, ಮಗು ನಾಪತ್ತೆ
ಬಿಸಿಲಿನ ಶಾಖ ತಾಳಲಾರದೆ ವ್ಯಕ್ತಿಯೊಬ್ಬರು ಕುಸಿದುಬಿದ್ದು ಮೃತಪಟ್ಟ ದಾರುಣ ಘಟನೆ ಉಡುಪಿ ನಗರದ ಬಸ್ ನಿಲ್ದಾಣದ ಬಳಿ ಸಂಭವಿಸಿದೆ. ಮತ್ತೊಂದೆಡೆ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಉತ್ತರ ಪ್ರದೇಶ ಮೂಲದ ಮಹಿಳೆ, ಮಗು ನಾಪತ್ತೆಯಾಗಿದ್ದಾರೆ. ಎರಡೂ ಘಟನೆಗಳ ವಿವರ ಇಲ್ಲಿದೆ.
ಮಂಗಳೂರು, ಉಡುಪಿ, ಮೇ 1: ರಾಜ್ಯದಾದ್ಯಂತ ತಾಪಮಾನ ಹೆಚ್ಚಾಗಿದ್ದು (Heatwave) ಜನಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಉಡುಪಿ (Udupi) ನಗರದ ಸಿಟಿ ಬಸ್ ನಿಲ್ದಾಣದ ಬಳಿ ಯುವಕನೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಮೃತರನ್ನು ಬದಿಯಪ್ಪ (37) ಎಂದು ಗುರುತಿಸಲಾಗಿದೆ. ವಿಪರೀತ ಸೆಖೆಯಿಂದ ಬದಿಯಪ್ಪ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಅವರನ್ನು ತಕ್ಷಣವೇ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದಾಗ್ಯೂ, ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಹಲವು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳು, ದಕ್ಷಿಣ ಒಳನಾಡು, ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಹಲವು ಭಾಗಗಳಿಗೆ ಹವಾಮಾನ ಇಲಾಖೆ ನಾಲ್ಕು ದಿನಗಳ ಉಷ್ಣ ಮಾರುತದ ಆರೆಂಜ್ ಅಲರ್ಟ್ ಘೋಷಿಸಿದೆ.
ಪುತ್ತೂರಿನಲ್ಲಿ ಉತ್ತರ ಪ್ರದೇಶ ಮೂಲದ ತಾಯಿ, ಮಗ ನಾಪತ್ತೆ
ಬಾಡಿಗೆ ಮನೆಯಲ್ಲಿ ವಾಸವಿದ್ದ ಉತ್ತರ ಪ್ರದೇಶದ ತಾಯಿ ಮತ್ತು ಮಗು ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೌಕ್ರಾಡಿ ಗ್ರಾಮದ ಕಟ್ಟೆ ಮಜಲು ಎಂಬಲ್ಲಿ ವರದಿಯಾಗಿದೆ. ಉತ್ತರ ಪ್ರದೇಶದ ಮೂಲದ ಮೂಲದ ಸೋನು ಸೋಂಕರ್ ಎಂಬವರ ಪತ್ನಿ ರೀಮಾ ಸೋಂಕರ್ (26) ಮತ್ತು ಮಗು ರಿಯಾ (1) ಕಾಣೆಯಾದವರು.
ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯ ಹಳ್ಳಿಯೊಂದರ ಸೋನು ಸೋಂಕರ್ ಅವರು ಇಂಟೀರಿಯರ್ ಡೆಕೋರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಪತ್ನಿ ಹಾಗೂ ಮಗುವಿನ ಸಮೇತ ಕೌಕ್ರಾಡಿಯಲ್ಲಿ ಕೃಷ್ಣಪ್ಪ ಎಂಬುವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಏಪ್ರಿಲ್ 22 ರಂದು ಸೋನು ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದರು. ಸಂಜೆ ಹಿಂತಿರುಗಿ ಬಂದಾಗ ಪತ್ನಿ ಹಾಗೂ ಮಗು ಕಾಣೆಯಾಗಿದ್ದರು.
ಇದನ್ನೂ ಓದಿ: ಮೋದಿ ಗೆಲ್ಲಿಸುವಂತೆ ಮದುವೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಣ: ವರನ ವಿರುದ್ಧ ದೂರು ದಾಖಲು
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ