ಮೋದಿ ಗೆಲ್ಲಿಸುವಂತೆ ಮದುವೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಣ: ವರನ ವಿರುದ್ಧ ದೂರು ದಾಖಲು
ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ "ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದೇ ನಮಗೆ ನೀವು ನೀಡುವ ಉಡುಗೊರೆ" ಅಂತ ಮುದ್ರಿಸಿದಕ್ಕೆ ವರನ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು, ಏಪ್ರಿಲ್ 30: ಮದುವೆ ಆಮಂತ್ರಣ ಪತ್ರಿಕೆಯಲ್ಲಿ (Marriage Investigation Card) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಮತ ಹಾಕುವಂತೆ ಸಂದೇಶ ಮುದ್ರಿಸಿದ್ದ ವರನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ (Uppinangady Police Station) ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡ (Dakshin Kannada) ಜಿಲ್ಲೆಯ ಕಡಬ ತಾಲೂಕಿನ ಆಲಂತಾಯ ನಿವಾಸಿ ಶಿವಪ್ರಸಾದ್ ಎಂಬುವರ ಮದುವೆ ಏ.18 ನಡೆದಿದೆ. ಮದುವೆ ಆಮಂತ್ರಣ ಪತ್ರಿಕೆಗಳು ಮಾರ್ಚ್ 1 ರಂದು ಮುದ್ರಿತವಾಗಿದ್ದವು. ಆಮಂತ್ರಣ ಪತ್ರಿಕೆಯಲ್ಲಿ “ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದೇ ನಮಗೆ ನೀವು ನೀಡುವ ಉಡುಗೊರೆ” ಅಂತ ಮುದ್ರಿಸಿ ಹಂಚಿದ್ದರು.
ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಅಂತ ವರನ ವಿರುದ್ಧ ಏ.17ರಂದು ಚುನಾವಣಾ ನೋಡಲ್ ಅಧಿಕಾರಿಗಳಿಗೆ ದೂರು ಬಂದಿದೆ. ಬಳಿಕ ಚುನಾವಣಾ ಅಧಿಕಾರಿಗಳು ನ್ಯಾಯಾಲಯಕ್ಕೆ ಈ ಬಗ್ಗೆ ವರದಿ ಸಲ್ಲಿಸಿ ವರನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.
ಇದನ್ನೂ ಓದಿ: ‘ಉಡುಗೊರೆ ಬೇಡ, ಮೋದಿಗೆ ಮತ ಹಾಕಿ’ ಆಮಂತ್ರಣ ಪತ್ರಿಕೆಯಲ್ಲಿ ವರನ ತಂದೆಯಿಂದ ವಿಶೇಷ ಮನವಿ
ಕಿಡಿಕಾರಿದ ಬಿಜೆಪಿ
“ಕೈಲಾಗದವನು ಮೈ ಪರಚಿಕೊಂಡ ಎನ್ನುವಂತೆ ಕರ್ನಾಟಕ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಂಡು ದಬ್ಬಾಳಿಕೆ ನಡೆಸುತ್ತಿದೆ. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೋದಿಯವರ ಭಾವಚಿತ್ರ ಪ್ರಕಟಿಸಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಕೋರಿದ್ದಾರೆ. ಆದರೆ, ಸಿದ್ದರಾಮಯ್ಯ ಸರ್ಕಾರ ಇದರ ಮೇಲೂ ಕಳ್ಳಗಣ್ಣು ಬಿಟ್ಟು ವರನ ಮೇಲೆ ದೂರು ದಾಖಲಿಸಿದೆ. ರಾಜ್ಯದಲ್ಲಿ ಪ್ರಧಾನಿ ಮೋದಿಯವರಿಗೆ ಸಿಗುತ್ತಿರುವ ವ್ಯಾಪಕ ಬೆಂಬಲ ನೋಡಿ ಕಾಂಗ್ರೆಸ್ಸಿಗರ ಕೈಯಲ್ಲಿ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದೆ ಹೇಡಿ ಸರ್ಕಾರ!” ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ