ಮಂಗಳೂರು: ರಾಜಧಾನಿ ಮಳೆಯಿಂದ ಬೇಸತ್ತಿದ್ದರೆ, ಇತ್ತ ರಾಜ್ಯ ಕರಾವಳಿಯಲ್ಲಿ ಬಿಸಿಲ ಝಳ ಹೆಚ್ಚಾಗಿದೆ. ಅದರಂತೆ ಬಿಸಿಲಿನ ತಾಪಕ್ಕೆ ಜಲಮೂಲಗಳು ಬತ್ತಿ ಹೋಗುತ್ತಿದ್ದು, ಜಿಲ್ಲೆಯ ಜೀವ ನದಿ ನೇತ್ರಾವತಿಯು ತನ್ನ ಹರಿವನ್ನ ನಿಲ್ಲಿಸಿದ್ದಾಳೆ. ಮಳೆ ಬಾರದಿರುವ ಕಾರಣ ನೇತ್ರಾವತಿ ನದಿ(Netravathi River) ಬತ್ತಿರುವ ಕಾರಣ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ಸದ್ಯ ಎರಡು ದಿನಕ್ಕೊಮ್ಮೆ ತುಂಬೆ ಡ್ಯಾಂನಿಂದ ನೀರು ಮಂಗಳೂರು ನಗರಕ್ಕೆ ಪೂರೈಕೆ ಮಾಡಲಾಗುತ್ತಿದೆ. ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿಯೂ ನೀರಿನ ಸಮಸ್ಯೆ ಎದುರಾಗಿದ್ದು, ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಕಟ್ಟಡ ಕಾಮಗಾರಿಗಳಿಗೆ ನೀರು ಬಳಸದಂತೆ ಜಿಲ್ಲಾಡಳಿತದ ಈಗಾಗಲೇ ಸೂಚನೆ ನೀಡಿದೆ.
ಬತ್ತಿದ ನೇತ್ರಾವತಿ ನದಿಯಲ್ಲಿ ಸೀತಾದೇವಿಯ ಪಾದ ದರ್ಶನ!
ಇನ್ನು ನದಿಯಲ್ಲಿ ನೀರು ಬತ್ತಿದ್ದು, ಆಳ ಪ್ರದೇಶದಲ್ಲಿ ಮಾತ್ರ ನೀರು ಕಂಡು ಬರುತ್ತಿದೆ. ಈ ಕಾರಣ ನೇತ್ರಾವತಿ ನದಿಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಬಂಡೆಕಲ್ಲುಗಳೆ ಗೋಚರವಾಗುತ್ತಿದೆ. ಹೌದು ಅಚ್ಚರಿಯೆಂಬಂತೆ ಬತ್ತಿದ ನೇತ್ರಾವತಿ ನದಿಯಲ್ಲಿ ಸೀತಾದೇವಿಯ ಪಾದ ದರ್ಶನವಾಗಿದೆ. ಜೊತೆಗೆ ನದಿಯಲ್ಲಿ ಧಾರ್ಮಿಕ ನಂಬಿಕೆಯುಳ್ಳ ರಚನೆಗಳು ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನದಿಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ:ಮೈಲಿಗಲ್ಲು: ಜಲ ಜೀವನ್ ಮಿಷನ್ ಯೋಜನೆ ಮೂಲಕ 12 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಸರಬರಾಜು
ನದಿ ನೀರು ಸಂಪೂರ್ಣ ಬತ್ತಿರುವ ಕಾರಣ ನದಿಯಲ್ಲಿರುವ ವಿಶೇಷಗಳು ಗೋಚರ
ಹೌದು ನದಿ ನೀರು ಬತ್ತಿದ್ದರಿಂದ ನದಿಯಲ್ಲಿರುವ ವಿಶೇಷಗಳು ಗೋಚರವಾಗಿದ್ದು, ಕಲ್ಲಿನಲ್ಲಿ ಕೆತ್ತಲ್ಪಟ್ಟಿರುವ ಶಿವಲಿಂಗ, ಹೂವು, ಜಡೆ, ಬಟ್ಟಲು, ನಂದಿ, ಪಾದಗಳು ಗೋಚರಿಸಿದ್ದು, ಸೀತಾ ದೇವಿಯದ್ದೇ ಪಾದ ಎಂಬ ಪೂಜನೀಯ ಭಾವವನ್ನ ಸ್ಥಳೀಯರು ಹೊಂದಿದ್ದಾರೆ. ಇನ್ನು ಗೋಚರವಾಗುತ್ತಿರುವ ಕೌತುಕಗಳು, ಧಾರ್ಮಿಕ ನಂಬಿಕೆಯಳ್ಳ ರಚನೆಯನ್ನು ನೋಡಲು ಜನರು ಕುತೂಹಲದಿಂದ ಆಗಮಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಹೆಚ್ಚಿದ ನೀರಿನ ಅಭಾವ
ಅಂಕೋಲಾ: ಬೇಸಿಗೆಯ ಹಿನ್ನೆಲೆ ಅಂಕೋಲಾದ ಗಂಗಾವಳಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಕೆಲವೇ ದಿನಗಳಲ್ಲಿ ಕಾರವಾರಕ್ಕೆ ಸರಬರಾಜಾಗುವ ನೀರಿನ ಪ್ರಮಾಣವು ಕಡಿಮೆಯಾಗಲಿದೆ. ಹೌದು ಬೇಸಿಗೆಯ ರಣ ಬಿಸಿಲಿಗೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ನೀರಿನ ಅಭಾವ ಉಂಟಾಗಿದ್ದು, ಬಾವಿ ಕೆರೆ ಸೇರಿದಂತೆ ಸರಕಾರದ ಬೋರ್ವೆಲ್ಗಳಲ್ಲೂ ಕೂಡ ನೀರಿನ ಪ್ರಮಾನ ಗಣನೀಯವಾಗಿ ಇಳಿಕೆಯಾಗಿದೆ. ಈ ಕಾರಣಕ್ಕೆ ಈಗಾಗಲೇ ಕಾರವಾರ ಸೇರಿದಂತೆ ಕರಾವಳಿ ತಾಲೂಕುಗಳ ನೂರಕ್ಕು ಹೆಚ್ಚು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸುವ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ:ಚಿಕ್ಕಮಗಳೂರು: ಈಜಲು ತುಂಗಾ ನದಿಗೆ ಇಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು
ಗಂಗಾವಳಿ ನದಿಯಲ್ಲಿ ಕಡಿಮೆಯಾದ ನೀರಿನ ಹರಿವು
ಅಂಕೋಲಾ ತಾಲೂಕಿನ ಹೊನ್ನಳ್ಳಿಯಲ್ಲಿರುವ ಗಂಗಾವಳಿ ನದಿಯಿಂದ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ, ಕೆಲವು ದಿನಗಳಿಂದ ಗಂಗಾವಳಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದರಿಂದ ಮುಂದಿನ ದಿನಗಳಲ್ಲಿ ನೀರಿನ ಪೂರೈಕೆ ಪ್ರಮಾಣ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಜಲಮಂಡಳಿ ತಿಳಿಸಿದೆ. ಇನ್ನು ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಮೋಟಾರ್ಗಳಲ್ಲಿ ನೀರೆತ್ತುವ ಅವಧಿಯನ್ನ 24 ಗಂಟೆಗಳಿಂದ 20 ಗಂಟೆಗಳಿಗೆ ಇಳಿಸಲಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ