ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣ: ಹಲವು ಹೊಸ ವಿಚಾರ ಬಹಿರಂಗಪಡಿಸಿದ ಪೊಲೀಸ್ ಕಮಿಷನರ್ ಶಶಿಕುಮಾರ್
ಈ ಪ್ರಕರಣಕ್ಕೆ ಸಂಬಂಧಿಸಿದ್ದು ಎಂದು ಬಿಂಬಿಸುತ್ತಿರುವ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ವಿಡಿಯೊ ಆಧಾರ ರಹಿತವಾದುದು. ಎಂದು ಪೊಲೀಸರು ಹೇಳಿದ್ದಾರೆ.
ಮಂಗಳೂರು: ಆಟೊದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಮದ್ಯದಂಗಡಿ ಬಳಿ ಇಬ್ಬರು ಓಡಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇವರಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಸೆರೆಯಾಗಿರುವ ದೃಶ್ಯದಲ್ಲಿ ಶಾರಿಕ್ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ್ದು ಎಂದು ಬಿಂಬಿಸುತ್ತಿರುವ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ವಿಡಿಯೊ ಆಧಾರ ರಹಿತವಾದುದು. ಸಿಸಿಟಿವಿ ದೃಶ್ಯದಲ್ಲಿರುವವರು ರೈಲ್ವೆ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಕುಕ್ಕರ್ ಬಾಂಬ್ ಸ್ಫೋಟಿಸಿದ್ದ ಆಟೊದ ಚಾಲಕ ಪುರುಷೋತ್ತಮ್ ಅವರ ಆರೋಗ್ಯ ಈಗ ಸುಧಾರಿಸಿದೆ. ಶಾರಿಕ್ ಸಂಚರಿಸಿದ್ದ ಮಾರ್ಗಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದರು. ಕಂಕನಾಡಿಯಲ್ಲಿ ಶಾರಿಕ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಆಗಮಿಸಿದ್ದ ಅವರು, ಆರೋಗ್ಯದ ಸ್ಥಿತಿಗತಿ ವಿಚಾರಿಸಿದರು.
ಇಂಗ್ಲಿಷ್ನಲ್ಲಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ದೇಶದ ಸುರಕ್ಷೆಗೆ ಸಂಬಂಧಿಸಿದ ಪ್ರಕರಣ: ಸಿಎಂ
ಚಿತ್ರದುರ್ಗ: ಮಂಗಳೂರು ಆಟೊದಲ್ಲಿ ಸ್ಫೋಟಿಸಿದ ಕುಕ್ಕರ್ ಬಾಂಬ್ ಸ್ಫೋಟಿಸಿದ ಪ್ರಕರಣ ಕುರಿತು ಚಿತ್ರದುರ್ಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು. ‘ದೇಶದ ಸುರಕ್ಷೆಗೆ ಸಂಬಂಧಿಸಿದ ಪ್ರಕರಣ ಇದು. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುತ್ತಿದ್ದೇವೆ. ಘಟನೆ ನಡೆದ 24 ಗಂಟೆಯೊಳಗೆ ಆರೋಪಿಯ ಮಾಹಿತಿ ಪತ್ತೆ ಮಾಡಿದ್ದೇವೆ’ ಎಂದು ಅವರು ತಿಳಿಸಿದರು.
ಭಾರಿ ಸಾಮರ್ಥ್ಯದ ಕುಕ್ಕರ್ ಬಾಂಬ್
ಮಂಗಳೂರಿನಲ್ಲಿ ದೊಡ್ಡ ಅನಾಹುತವೊಂದು ಸ್ವಲ್ಪದರಲ್ಲಿ ತಪ್ಪಿ ಹೋಗಿದೆ ಎಂದು ಪೊಲೀಸ್ ಅಧಿಕಾರಿಗಳು ‘ಟಿವಿ9’ಗೆ ತಿಳಿಸಿದ್ದಾರೆ. ಶಾರಿಕ್ ತಂದಿದ್ದ ಕುಕ್ಕರ್ ಬಾಂಬ್ನಲ್ಲಿ ಸ್ಫೋಟಕದ ಜೆಲ್ ತುಂಬಿತ್ತು. ಅದಕ್ಕೆ ಬಸ್ ಅನ್ನೇ ಸ್ಫೋಟಿಸುವಷ್ಟು ಶಕ್ತಿಯಿತ್ತು. ಅದರ ಜೊತೆಗೊಂದು ಡಿಟೋನೇಟರ್, ಪ್ಲಸ್ ಮತ್ತು ಮೈನಸ್ ಕನೆಕ್ಟಿಂಗ್ ಯೂನಿಟ್ ಸಹ ಇತ್ತು. ಪ್ಲಸ್ ಮತ್ತು ಮೈನಸ್ ಕನೆಕ್ಷನ್ ವೇಳೆ ಯಾವುದೋ ಘಟಕದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಡಿಟೋನೇಟರ್‌ಗೆ ಪವರ್ ಕನೆಕ್ಷನ್ ತಪ್ಪಿಹೋಗಿದೆ. ಈ ವೇಳೆ ಕೇವಲ ಜೆಲ್ಗೆ ಮಾತ್ರವೇ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಕಾಣಿಸಿಕೊಂಡಿದೆ. ಡಿಟೊನೇಟರ್ ಮತ್ತು ಜೆಲ್ ಎರಡಕ್ಕೂ ಏಕಕಾಲಕ್ಕೆ ಬೆಂಕಿ ಹೊತ್ತಿಕೊಂಡಿದ್ದರೆ ಸರಿಪಡಿಸಲಾಗದಷ್ಟು ಅನಾಹುತ ಸಂಭವಿಸುತ್ತಿತ್ತು. ಆಟೊ ಸಂಪೂರ್ಣವಾಗಿ ಪುಡಿಯಾಗುತ್ತಿತ್ತು. ಸುತ್ತಮುತ್ತಲಿನ ವಾಹನಗಳೂ ಜಖಂ ಆಗಿ ಸಾವುನೋವಿನ ಸಂಖ್ಯೆಯೂ ಹೆಚ್ಚಾಗುತ್ತಿತ್ತು. ಈ ಅಂಶಗಳು ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ನೀಡಿರುವ ಪ್ರಾಥಮಿಕ ವರದಿಯಲ್ಲಿ ಬಹಿರಂಗವಾಗಿದೆ.
ದೇಶದ್ರೋಹಿಗಳ ವಿರುದ್ಧ ಕ್ರಮ ಆಗಲಿ: ಶಾಸಕ ಅಭಯ್ ಪಾಟೀಲ್
ಬೆಳಗಾವಿ: ರಾಜ್ಯ ಹಾಗೂ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದವರು. ಪಾಕಿಸ್ತಾನ ಜಿಂದಾಬಾದ್ ಎನ್ನುವವರ ವಿರುದ್ಧ ಕ್ರಮ ಆಗಬೇಕು ಎಂದು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಒತ್ತಾಯಿಸಿದರು. ಉತ್ತರ ಪ್ರದೇಶ ಮಾದರಿ ಕರ್ನಾಟಕದಲ್ಲೂ ಕ್ರಮ ಕೈಗೊಳ್ಳಬೇಕು. ಕೇವಲ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸುವುದು ಆಗಬಾರದು. ಇಂಥವರನ್ನು ಎನ್ಕೌಂಟರ್ ಮಾಡಬೇಕು. ಇವರಿಗೆ ಆಶ್ರಯ ಕೊಡುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎಸ್ಡಿಪಿಐಗೂ ಸ್ಫೋಟಕ್ಕೂ ಸಂಬಂಧವಿಲ್ಲ: ಭಾಸ್ಕರನ್
ಬೆಂಗಳೂರು: ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೂ ಎಸ್ಡಿಪಿಐಗೂ ಯಾವುದೇ ಸಂಬಂಧವಿಲ್ಲ ಎಂದು ನಗರದಲ್ಲಿ ಎಸ್ಡಿಪಿಐ ಪ್ರಧಾನ ಕಾರ್ಯದರ್ಶಿ ಭಾಸ್ಕರನ್ ಹೇಳಿದರು. ಈ ಹಿಂದೆಯೂ ಮಂಗಳೂರಿನಲ್ಲಿ ಸ್ಫೋಟವೊಂದು ಸಂಭವಿಸಿತ್ತು. ಆಗ ಹೆಸರನ್ನು ಆಧರಿಸಿ ಭಯೋತ್ಪಾದಕ ಕೃತ್ಯ ಎಂದು ಹೇಳಿದ್ದರು. ಬಳಿಕ ಆದಿತ್ಯರಾವ್ ಹೆಸರು ಬಂದ ಬಳಿಕ ಪ್ರಕರಣವನ್ನು ಉಲ್ಟಾಪಲ್ಟಾ ಮಾಡಿದರು. ಮಾನಸಿಕ ಸ್ಥಿಮಿತ ಇಲ್ಲದ ವ್ಯಕ್ತಿಯ ಕೃತ್ಯವೆಂದು ಪ್ರಕರಣವನ್ನು ತಿರುಚಿದ್ದರು ಎಂದು ನೆನಪಿಸಿಕೊಂಡರು.
ಪ್ರಮೋದ್ ಮುತಾಲಿಕ್ ಒಬ್ಬ ಭಯೋತ್ಪಾದಕ ಎಂದು ಆರೋಪಿಸಿದ ಅವರು, ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ನನ್ನು ಮೊದಲು ಬಂಧಿಸಬೇಕು. ಇವರ ಪ್ರಚೋದನಾಕಾರಿ ಭಾಷಣದಿಂದ ಶೂದ್ರ ಸಮುದಾಯದ ಯುವಕರು ಬಲಿಯಾಗುತ್ತಿದ್ದಾರೆ ಎಂದು ಆರೋಪ ಮಾಡಿದರು.
Published On - 1:59 pm, Tue, 22 November 22