ಮಂಗಳೂರು, ಡಿಸೆಂಬರ್ 09: ರಾಜ್ಯದಲ್ಲಿ ಸೈಬರ್ ವಂಚನೆ (Cyber Crime) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ದಿನ ಬೆಳಗಾದರೆ ಸಾಕು ಹೊಸ ಹೊಸ ಮಾದರಿಯಲ್ಲಿ ಸೈಬರ್ ಖದೀಮರು ಹಣ ಲೂಟಿ ಮಾಡುತ್ತಿದ್ದಾರೆ. ಕಡಲನಗರಿ ಮಂಗಳೂರಿನಲ್ಲಿ (Mangaluru) ವ್ಯಕ್ತಿಯೊಬ್ಬರ ಮೊಬೈಲ್‌ನ್ನು ಹ್ಯಾಕ್ ಮಾಡಿ ಅವರ ಹೆಸರಿನಲ್ಲೇ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಆರ್ಡರ್ ಮಾಡಿ ವಂಚಿಸಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಒಟಿಪಿ ಪಡೆದು ಹಣ ದೋಚುತ್ತಿದ್ದ ಸೈಬರ್ ಖದೀಮರು ಇದೀಗ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ವಾಟ್ಸಪ್‌ಗೆ ನಕಲಿ ಎಪಿಕೆ ಮಾದರಿಯ ಫೈಲ್ ಕಳುಹಿಸಿ ಮೊಬೈಲ್‌ನ್ನು ಹ್ಯಾಕ್ ಮಾಡಿ ಅಕೌಂಟ್ನಲ್ಲಿರುವ ಹಣವನ್ನು ದೋಚಿದ್ದಾರೆ. ಮಂಗಳೂರಿನ ಯದುನಂದನ್ ಆಚಾರ್ಯ ಎಂಬವರಿಗೆ ಸೈಬರ್ ವಂಚಕರು ಬೆಂಗಳೂರು ಸಿಟಿ ಪೊಲೀಸರ ಹೆಸರಿನಲ್ಲಿ ನಿಮ್ಮ ವಾಹನದ ದಂಡ ಪಾವತಿ ಬಾಕಿ ಇದೆ ಎಂಬ ಮೆಸೇಜ್ ಕಳುಹಿಸಿದ್ದಾರೆ. ಈ ದಂಡ ಪಾವತಿಗೆ ವಾಹನ್ ಪರಿವಾಹನ್ ಎಂಬ ಸಾರಿಗೆ ಇಲಾಖೆಯ ಆ್ಯಪ್‌ನ ಎಪಿಕೆ ಫೈಲ್ ಸಹ ಕಳುಹಿಸಿಕೊಟ್ಟಿದ್ದಾರೆ. ಇದನ್ನು ಇನ್ಸ್ಟಾಲ್ ಮಾಡಿ ದಂಡ ಪಾವತಿಸುವಂತೆಯೂ ಮೇಸೆಜ್‌ನಲ್ಲಿ ತಿಳಿಸಿದ್ದಾರೆ.
ಅದರಂತೆ ಯದುನಂದನ್ ಎಪಿಕೆ ಫೈಲ್ ಮೊಬೈಲ್‌ನಲ್ಲಿ ಇನ್ಸ್ಟಾಲ್ ಮಾಡಿದ್ದಾರೆ. ಇನ್ಸ್ಟಾಲ್ ಮಾಡುತ್ತಿದ್ದಂತೆ ಅವರ ಮೊಬೈಲ್ ಸಂಪೂರ್ಣವಾಗಿ ಸೈಬರ್ ವಂಚಕರ ನಿಯಂತ್ರಣಕ್ಕೆ ಹೋಗಿದೆ. ಕೂಡಲೇ ಅವರ ಪ್ಲಿಪ್‌ಕಾರ್ಟ್ ಖಾತೆ ಹ್ಯಾಕ್ ಆಗಿದೆ. ಸೈಬರ್ ವಂಚಕರು ಅವರ ಪ್ಲಿಪ್‌ಕಾರ್ಟ್ ಖಾತೆ ಬಳಸಿಕೊಂಡು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳಿಂದ 1.31 ಲಕ್ಷ ರೂ. ಮೌಲ್ಯದ ಎರಡು ಮೊಬೈಲ್ ಪೋನ್, ಒಂದು ಇಯರ್‌ಪಾಡ್ ಮತ್ತು ಗಿಫ್ಟ್ ವೋಚರ್‌ಗಳನ್ನು ಖರೀದಿಸಿದ್ದಾರೆ.
ಇದನ್ನೂ ಓದಿ: ಹಣಕಾಸು ವಂಚಕರ ಬೇಟೆಗೆ ಮ್ಯೂಲ್ ಹಂಟರ್ ಸಜ್ಜು; ಬೆಂಗಳೂರಿನ ಆರ್ಬಿಐ ಇನ್ನೋವೇಶನ್ ತಂಡ ರೂಪಿಸಿದ ಪ್ರಬಲ ಎಐ ಮಾಡಲ್
ಘಟನೆ ನಡೆದ ಮರುದಿನ ತನ್ನ ಮೊಬೈಲ್ ಹ್ಯಾಕ್ ಆಗಿರುವ ವಿಚಾರ ಗೊತ್ತಾಗುತ್ತಿದ್ದಂತೆ ಯದುನಂದನ್ ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಫ್ಲಿಪ್ ಕಾರ್ಟ್ ಕಂಪನಿಯನ್ನು ಸಂಪರ್ಕಿಸಿ ಇಯರ್ ಪಾಡ್ ಹಾಗೂ 50 ಸಾವಿರ ಮೌಲ್ಯದ ಗಿಫ್ಟ್ ವೋಚರ್ ಡೆಲಿವರಿಯನ್ನು ತಡೆಹಿಡಿದಿದ್ದಾರೆ. ಆದರೆ, ಅಷ್ಟೊತ್ತಿಗಾಲೇ ಎರಡು ಮೊಬೈಲ್ ಫೋನ್ಗಳು ಡೆಲಿವರಿ ಆಗಿದ್ದವು. ಈ ವಿಳಾಸವನ್ನು ಬೆನ್ನು ಹತ್ತಿದ್ದಾಗ ದೆಹಲಿ ಲೊಕೇಷನ್ ತೋರಿಸಿದೆ.
ಕೂಡಲೇ ವಿಮಾನವೇರಿದ ಮಂಗಳೂರು ಪೊಲೀಸರು ದೆಹಲಿಗೆ ತೆರಳಿ ಡೆಲಿವರಿ ಏಜೆಂಟ್ ವೇಷದಲ್ಲಿ ವಂಚಕನಿದ್ದ ಫ್ಲ್ಯಾಟ್‌ಗೆ ಹೋಗಿದ್ದಾರೆ. ಉಳಿದ ವಸ್ತುಗಳನ್ನು ರಿಸೀವ್ ಮಾಡಿಕೊಳ್ಳಲು ಆರೋಪಿ ಹೊರಗೆ ಬರುತ್ತಿದ್ದಂತೆ ಪೊಲೀಸರು ಲಾಕ್ ಮಾಡಿದ್ದಾರೆ. ಈ ಬಂಧಿತ ಆರೋಪಿಯನ್ನು ಗೌರವ್ ಮಕ್ವಾನ್ ಎಂದು ಗುರುತಿಸಲಾಗಿದೆ.
ಆರೋಪಿಯಯಿಂದ ಐದು ಐಫೋನ್-15, ಎರಡು ಆಂಡ್ರಾಯ್ಡ ಫೋನ್, ಎರಡು ಇಯರ್‌ಪಾಡ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ ಸೇರಿದಂತೆ 4 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವಂಚನೆ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಮಾಹಿತಿ ಪೊಲೀಸರಿಗೆ ತಿಳಿದುಬಂದಿದೆ. ಈ ವಂಚಕರು ಈ ಹಿಂದೆಯೂ ಸಾಕಷ್ಟು ಮಂದಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಅನುಮಾನವಿದೆ.
ಇದನ್ನೂ ಓದಿ: ವಾಟ್ಸ್ಆ್ಯಪ್ ಕೂಡ ಹ್ಯಾಕ್ ಆಗುತ್ತೆ ಎಚ್ಚರ! ಆ್ಯಕ್ಸಿಸ್ ಬ್ಯಾಂಕ್ ಹೆಸರಲ್ಲಿ ಈ ರೀತಿಯ ಮೆಸೇಜ್ ಬಂದರೆ ಕ್ಲಿಕ್ ಮಾಡಬೇಡಿ
ಮೊಬೈಲ್ ಹ್ಯಾಕ್ ಆಗುತ್ತಿದ್ದಂತೆ ಆ ಮೊಬೈಲ್‌ಗಳಲ್ಲಿ ಲಾಗಿನ್ ಆಗಿರುವ ಅಕೌಂಟ್‌ಗಳನ್ನು ಬಳಸಿ ಈ ರೀತಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ತಮ್ಮ ವಿಳಾಸಕ್ಕೆ ಡೆಲಿವರಿ ಮಾಡಿಕೊಳ್ಳುತ್ತಿದ್ದರು.
ನಕಲಿ ಆ್ಯಪ್ ಕಳುಹಿಸಿ ಹ್ಯಾಕ್ ಮಾಡುವುದು ಒಬ್ಬನಾದರೇ, ಡೆಲಿವರಿಯನ್ನು ಸ್ವೀಕರಿಸುವವರು ಇನ್ನೊಬ್ಬರಾಗಿದ್ದರು. ಸದ್ಯ ಈ ವಂಚನೆ ಜಾಲ ಮಂಗಳೂರು ಪೊಲೀಸರ ಚಾಣಕ್ಷತನದಿಂದ 48 ಗಂಟೆಯಲ್ಲಿ ಬಯಲಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಜನರು ಸಹ ಈ ನಕಲಿ ಎಪಿಕೆ ಫೈಲ್‌ಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:35 am, Mon, 9 December 24