ಮಂಗಳೂರು: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ತಾಯಿ ಸೇರಿ ಮೂವರು ಮಕ್ಕಳಿಗೆ ಗಾಯ
ಮಂಗಳೂರಿನ ಉಳ್ಳಾಲ ತಾಲೂಕಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ತಾಯಿ ಮತ್ತು ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟದಿಂದ ಮನೆಯ ಚಾವಣಿ ಹಾರಿಹೋಗಿದೆ. ಗ್ಯಾಸ್ ಲೀಕೇಜ್ ಸ್ಫೋಟಕ್ಕೆ ಪ್ರಮುಖ ಕಾರಣವಾಗಿದೆ. ಗ್ಯಾಸ್ ಪೈಪ್‌ನಲ್ಲಿನ ದೋಷ ಅಥವಾ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿರಬಹುದು ಎಂದು ಅನುಮಾನಿಸಲಾಗಿದೆ.
ಮಂಗಳೂರು, ಡಿಸೆಂಬರ್ 08: ಗ್ಯಾಸ್ ಸಿಲಿಂಡರ್ (Gas Cylender) ಸ್ಫೋಟಗೊಂಡು ತಾಯಿ ಮತ್ತು ಮೂವರು ಮಕ್ಕಳು ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ (Dakshin Kannada) ಜಿಲ್ಲೆಯ ಉಳ್ಳಾಲ ತಾಲೂಕಿನ ಮಂಜನಾಡಿಯ ಖಂಡಿಕದಲ್ಲಿ ನಡೆದಿದೆ. ಗಾಯಾಳುಗಳನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಖಂಡಿಕ ಪ್ರದೇಶದ ಮುತ್ತಲಿಬ್ ಎಂಬುವರ ಮನೆಯಲ್ಲಿ ಮಧ್ಯರಾತ್ರಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಮೇಲ್ಚಾವಣಿ ಹಾರಿಹೋಗಿದೆ.
ತಾಯಿ ಮತ್ತು ಮೂವರು ಮಕ್ಕಳು ಮಲಗಿದ್ದ ಮಂಚ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ಯಾಸ್ ಸ್ಫೋಟಕ್ಕೆ ಪ್ರಮುಖ ಕಾರಣ ಎಂದರೆ ಗ್ಯಾಸ್ ಲೀಕೇಜ್. ಕೇವಲ 14 ಕೆಜಿ ಸಿಲಿಂಡರ್ನಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಲೀಕ್ ಆಗುವ ಗ್ಯಾಸ್ ಮಾಡುವ ಹಾನಿ ಅಪಾರ ಪ್ರಮಾಣದಲ್ಲಿರುತ್ತದೆ. ಕೇವಲ ಮನೆಯವರ ಪ್ರಾಣ ತೆಗೆಯುವುದು ಮಾತ್ರವಲ್ಲದೆ ಮನೆಯ ಗೋಡೆ, ಚಾವಣಿ ಎಲ್ಲವೂ ಸಹ ಗ್ಯಾಸ್ ಸಿಲಿಂಡರ್ ಸ್ಫೋಟದ ರಭಸಕ್ಕೆ ಹಾರಿ ಹೋಗುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ, ಇಬ್ಬರು ಮಹಿಳೆಯರಿಗೆ ಗಾಯ
ಪ್ರಮುಖವಾಗಿ ಬಹುತೇಕ ಮನೆಗಳಲ್ಲಿ ಗ್ಯಾಸ್ ಲೀಕೆಜ್ ಗೆ ಕಾರಣ ಎಂದರೆ ಅದು ಗ್ಯಾಸ್ ಪೈಪ್. ಸಿಲಿಂಡರ್ ಭಾಗದಿಂದ ಸ್ಟೌ ಭಾಗಕ್ಕೆ ಕನೆಕ್ಟ್ ಆಗಿರುವ ರಬ್ಬರ್ ಪೈಪ್ ಎಂದು ಹೇಳಬಹುದು. ಇದನ್ನು ಎರಡು ಭಾಗದಲ್ಲಿ ಸರಿಯಾಗಿ ಫಿಟ್ ಮಾಡದಿದ್ದರೆ ಅಥವಾ ಕೆಲವೊಂದು ಕಡೆ ಒಡೆದು ಹೋಗಿದ್ದರೆ ಅದರಿಂದ ಗ್ಯಾಸ್ ಲೀಕೆಜ್ ಆಗುವ ಸಾಧ್ಯತೆ ಇರುತ್ತದೆ. ಇದು ಮೊದಲನೇ ಕಾರಣ.
ಕೆಲವೊಮ್ಮೆ ಇದು ನಿಮಗೆ ಗೊತ್ತಿಲ್ಲದೇ ಆಗುತ್ತದೆ ಎಂದು ಹೇಳಬಹುದು. ಇನ್ನೊಂದು ಪ್ರಮುಖ ಕಾರಣ ಎಂದರೆ ಅದು ನಿಮಗೆ ಗೊತ್ತಾಗಿ ಸಹ ನಿಮ್ಮ ನಿರ್ಲಕ್ಷದಿಂದ ಉಂಟಾಗುವ ಸಮಸ್ಯೆ. ನೀವು ಒಲೆಯ ಮೇಲೆ ಯಾವುದಾದರೂ ಆಹಾರ ಪದಾರ್ಥವನ್ನು ಕುದಿಯಲು ಇಟ್ಟು ನಿಮ್ಮ ಪಾಡಿಗೆ ನೀವು ಸೋಫಾ ಮುಂದೆ ಟಿವಿ ನೋಡುತ್ತಾ ಕುಳಿತರೆ ಆಹಾರ ಉಕ್ಕಿ ಬಂದು ಅದು ಪೈಪ್ ಮೇಲೆ ಚೆಲ್ಲಿ ಅವಘಡ ಸಂಭವಿಸುವ ಸಾಧ್ಯತೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ