ಮಂಗಳೂರು, ಜ.28: ಸ್ಟ್ರೀಟ್‌ನಲ್ಲಿ ನಿಂತ್ಕೊಂಡು ತಮಗಿಷ್ಟವಾದ ಫುಡ್ ಸವಿಯೋದು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಒಂದೇ ಜಾಗದಲ್ಲಿ ಸ್ಥಳೀಯ ಮಾತ್ರವಲ್ಲದೇ ರಾಜ್ಯ ಹೊರರಾಜ್ಯಗಳ ಬಹುಬೇಡಿಕೆಯ ವಿವಿಧ ಶೈಲಿಯ ಆಹಾರ ಮಳಿಗೆಗಳು ಸಿಕ್ರೆ ಅದಕ್ಕಿಂತ ಹೆಚ್ಚು ಬೇರೆನೂ ಬೇಕು ಅಲ್ವಾ. ಇಂತದ್ದೊಂದು ಅವಕಾಶ ಕಡಲನಗರಿ ಮಂಗಳೂರಿನಲ್ಲಿ (Mangaluru) ಕಲ್ಪಿಸಲಾಗಿತ್ತು. ಕರಾವಳಿಯ ತಿನಿಸುಗಳು ಮಾತ್ರವಲ್ಲದೇ ಹೊರರಾಜ್ಯಗಳ ಆಹಾರಗಳನ್ನು ಸ್ಟ್ರೀಟ್ ಫುಡ್ ಫೆಸ್ಟ್ನಲ್ಲಿ (Mangaluru Street Food Fiesta) ಆಹಾರಪ್ರಿಯರು ಸವಿದರು.
ಬೀದಿಯುದ್ದಕ್ಕೂ ವಿದ್ಯುತ್ ದೀಪಗಳ ನಡುವೆ ಸ್ಟಾಲ್‌ಗಳು ತಲೆಯೆತ್ತಿದ್ದವು. ಮೀನು ಫ್ರೈ, ಕೋರಿ ರೊಟ್ಟಿ, ಬಿರಿಯಾನಿ, ಕೋರಿ ಪುಂಡಿ, ಎಗ್ ಸ್ಪೆಷಲ್ಸ್, ನೀರುದೋಸೆ, ಮಟನ್ ಸುಕ್ಕ, ಕಬಾಬ್, ಚುರುಮುರಿ, ಹೋಳಿಗೆ, ಜಿಲೇಬಿ, ಐಸ್‌ಕ್ರೀಂ, ಜ್ಯೂಸ್ ಹೀಗೆ ಒಂದಾ ಎರಡಾ. ಬೀದಿಯುದ್ದಕ್ಕೂ 160ಕ್ಕೂ ಹೆಚ್ಚು ಸ್ಟಾಲ್‌ಗಳನ್ನು ಹಾಕಲಾಗಿತ್ತು. ಸ್ಟಾಲ್ಗಳ ಮುಂದೆ ಜನವೋ ಜನ ಕಂಡು ಬಂದ್ರು. ಇಲ್ಲಿ ತಮಗಿಷ್ಟವಾದ ಆಹಾರಗಳನ್ನು ಸವಿಯುತ್ತಾ ಆಹಾರ ಪ್ರಿಯರು ಈ ಫುಡ್ ಫೆಸ್ಟಿವಲ್‌ನಲ್ಲಿ ಪಾಲ್ಗೊಂಡರು.
ಇದನ್ನೂ ಓದಿ: ಬೆಂಗಳೂರು: ಬಾರ್ನಲ್ಲಿ ಶುರುವಾದ ಗೆಳೆಯರ ಗಲಾಟೆ ಮನೆ ಮುಂದೆ ಕೊಲೆಯಲ್ಲಿ ಅಂತ್ಯ
ಮಂಗಳೂರಿನ ಕರಾವಳಿ ಉತ್ಸವ ಮೈದಾನದಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಮಣ್ಣುಗುಡ್ಡೆ ಗುರ್ಜಿ ಜಂಕ್ಷನ್ವರೆಗೆ ಸ್ಟ್ರೀಟ್ ಫುಡ್ ಫಿಯೆಸ್ಟಾ ಆಯೋಜನೆಯಾಗಿದ್ದು ಮಂಗಳೂರಿನ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ನೇತೃತ್ವದಲ್ಲಿ ಐದು ದಿನಗಳ ಕಾಲ ಬೀದಿ ಬದಿ ಆಹಾರೋತ್ಸವ ನಡೆದಿದೆ. ಇಂದು ಕೊನೆಯ ದಿನವಾಗಿರೊದ್ರಿಂದ ಸಾವಿರಾರು ಜನ ಈ ಆಹಾರ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಇದು ಕಡಲನಗರಿಯ ಎರಡನೇ ಬೀದಿಬದಿ ಆಹಾರೋತ್ಸವವಾಗಿದ್ದು ಈ ಬಾರಿಯು ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಒಟ್ಟು ಐದು ದಿನಗಳ ಕಾಲ ನಡೆದ ಈ ಆಹಾರೋತ್ಸವದಲ್ಲಿ ತುಳು ನಾಡಿನ ಬಗೆ ಬಗೆಯ ಖಾದ್ಯಗಳ ಜೊತೆಯಲ್ಲಿ ನೆರೆ ರಾಜ್ಯದ ಫೇಮಸ್ ತಿನಿಸುಗಳನ್ನೂ ಸವಿಯುವ ಅವಕಾಶ ಒದಗಿಸಲಾಗಿತ್ತು. ಉತ್ತರ ಕರ್ನಾಟಕ, ಗುಜರಾತಿ, ಆಂಧ್ರ, ಪಂಜಾಬಿ ಸೇರಿದಂತೆ ದಕ್ಷಿಣ ಭಾರತೀಯ, ಉತ್ತರ ಭಾರತೀಯ ಸಸ್ಯಹಾರಿ, ಮಾಂಸಹಾರಿ ಹೀಗೆ ಬಹು ಬೇಡಿಕೆಯ ವಿವಿಧ ಶೈಲಿಯ ಸಾಂಪ್ರದಾಯಿಕವಾದ ಸುಮಾರು 160ಕ್ಕೂ ಹೆಚ್ಚು ಮಳಿಗೆಗಳಿದ್ದವು. ಇನ್ನು ಈ 160 ಮಳಿಗೆಗಳಲ್ಲಿಯೂ ಡಿಜಿಟಲ್ ವಹಿವಾಟಿಗೆ ಹೆಚ್ಚು ಉತ್ತೇಜನ ನೀಡುವ ಸಲುವಾಗಿ ಪ್ರತ್ಯೇಕ ಕ್ಯೂಆರ್ ಕೋಡ್ ಸ್ಕ್ಯಾನ್ ವ್ಯವಸ್ಥೆ ಮಾಡಲಾಗಿತ್ತು. ಇದರ ಜೊತೆಗೆ ಬಿರುವೆರ್ ಕುಡ್ಲ ಸಂಘಟನೆ ಹಾಗೂ ಮ್ಯಾಂಗಲೂರ್ ಮೇರಿ ಜಾನ್ ಸೋಷಿಯಲ್ ಮೀಡಿಯಾದ ತಂಡ ಸೇವೆಗಾಗಿ ಸ್ಟಾಲ್‌ಗಳನ್ನು ಹಾಕಿತ್ತು. ಇವರು ಸ್ಟಾಲ್‌ನಿಂದ ಬರುವ ಲಾಭದ ಹಣವನ್ನು ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ನೀಡುವ ನಿರ್ಧಾರವನ್ನು ಮಾಡಿದ್ದಾರೆ.
ಇದರ ಜೊತೆಯಲ್ಲಿ ಸಂಗೀತ ಪ್ರಿಯರಿಗಾಗಿ ಆರ್ಕೆಸ್ಟ್ರಾ, ಮಕ್ಕಳಿಗೆ ಕಿಡ್ಸ್ ಝೋನ್, ಯುವಕ ಯುವತಿಯರಿಗೆ ಡ್ಯಾನ್ಸ್, ಸೆಲ್ಫಿ ರೌಂಡ್ ವಿಡಿಯೋ ಹೀಗೆ ಎಲ್ಲಾ ವಯೋಮಾನದವರಿಗೂ ತಕ್ಕುದಾದ ಚಟುವಟಿಕೆಗಳನ್ನು ಇಲ್ಲಿ ಆಯೋಜಿಸಲಾಗಿತ್ತು. ಒಟ್ಟಿನಲ್ಲಿ ಸ್ಟ್ರೀಟ್ ಫುಡ್ ಫೆಸ್ಟಿವಲ್‌ನ್ನು ಜನ ಸಖತ್ ಎಂಜಾಯ್ ಮಾಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ