ನೆರವೇರಿದ ಮಂಗಳೂರು ವಿವಿ ಗಣೇಶೋತ್ಸವ: ಗಣಪತಿಗೆ ವಿರೋಧ ಮಾಡುವ ತಾಕತ್ತು ಯಾರಿಗೂ ಇಲ್ಲ ಎಂದ ಪ್ರಭಾಕರ್ ಭಟ್

| Updated By: Rakesh Nayak Manchi

Updated on: Sep 19, 2023 | 2:48 PM

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಣೇಶೋತ್ಸವಕ್ಕೆ ವಿರೋಧ ವ್ಯಕ್ತವಾಗಿದ್ದರೂ ಇಂದು ಯಾವುದೇ ವಿಘ್ನ ಇಲ್ಲದೆ ಸುಸೂತ್ರವಾಗಿ ನೆರವೇರಿತು. ಉತ್ಸವದಲ್ಲಿ ಆರ್​ಎಸ್​ಎಸ್​ ಮುಖಂಡ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಸೇರಿದಂತೆ ಹಿಂದೂ ಮುಖಂಡರು ಭಾಗಿಯಾಗಿದರು. ಈ ವೇಳೆ ಮಾತನಾಡಿದ ಪ್ರಭಾಕರ್ ಭಟ್, ಯಾವುದೇ ಸರ್ಕಾರಗಳು ದೇವರ ಪೂಜೆಗೆ ಅಡ್ಡಿ ಮಾಡಬಾರದು ಎಂದರು.

ನೆರವೇರಿದ ಮಂಗಳೂರು ವಿವಿ ಗಣೇಶೋತ್ಸವ: ಗಣಪತಿಗೆ ವಿರೋಧ ಮಾಡುವ ತಾಕತ್ತು ಯಾರಿಗೂ ಇಲ್ಲ ಎಂದ ಪ್ರಭಾಕರ್ ಭಟ್
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಗಣೇಶೋತ್ಸವದಲ್ಲಿ ಆರ್​ಎಸ್​ಎಸ್​ ಮುಖಂಡ ಪ್ರಭಾಕರ್ ಭಟ್ ಕಲ್ಲಡ್ಕ ಮತ್ತು ಹಿಂದೂ ಮುಖಂಡರು ಭಾಗಿ
Follow us on

ಮಂಗಳೂರು, ಸೆ.19: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ (Mangalore University) ಗಣೇಶೋತ್ಸವಕ್ಕೆ ವಿರೋಧ ವ್ಯಕ್ತವಾಗಿದ್ದರೂ ಇಂದು ಯಾವುದೇ ವಿಘ್ನ ಇಲ್ಲದೆ ಸುಸೂತ್ರವಾಗಿ ನೆರವೇರಿತು. ಉತ್ಸವದಲ್ಲಿ ಆರ್​ಎಸ್​ಎಸ್​ ಮುಖಂಡ ಡಾ.ಪ್ರಭಾಕರ್ ಭಟ್ ಕಲ್ಲಡ್ಕ (Dr. Prabhakar Bhat Kalladka) ಸೇರಿದಂತೆ ಹಿಂದೂ ಮುಖಂಡರು ಭಾಗಿಯಾಗಿದರು. ಈ ವೇಳೆ ಮಾತನಾಡಿದ ಪ್ರಭಾಕರ್ ಭಟ್, ಯಾವುದೇ ಸರ್ಕಾರಗಳು ದೇವರ ಪೂಜೆಗೆ ಅಡ್ಡಿ ಮಾಡಬಾರದು ಎಂದರು.

ಗಣೇಶೋತ್ಸವ ಬಳಿಕ ಮಾತನಾಡಿದ ಅವರು, ನಾಲ್ಕೈದು ವರ್ಷಗಳಿಂದ ವಿಶ್ವವಿದ್ಯಾಲಯದಲ್ಲಿ ಗಣೇಶನ ಪೂಜೆ ಆಗುತ್ತಿತ್ತು. ಒಂದು ಸ್ವಲ್ಪ ವ್ಯತ್ಯಾಸ ಆದರೂ ಮತ್ತೆ ಇಲ್ಲಿ ವಿನಾಯಕನ ಪೂಜೆ ಆಗಿದೆ. ಈ ವಿಚಾರದಲ್ಲಿ ವಿಸಿ ಜಯರಾಜ್ ಅಮೀನ್ ಮತ್ತು ರಿಜಿಸ್ಟ್ರಾರ್ ರಾಜುಗೆ ನೂರು ನಮನಗಳು ಎಂದರು.

ಯಾವುದೇ ಗೊಂದಲ, ನೋವಾಗದಂತೆ ಜಯರಾಜ್ ಅಮೀನ್ ರೇ ಪೂಜೆಯಲ್ಲಿ ಕೂತಿದ್ದಾರೆ. ಆದರೆ ಇಲ್ಲಿ ಗಣೇಶ ಮೂರ್ತಿ ಸ್ವಲ್ಪ ಸಣ್ಣದಾಗಿದೆ. ಯಕ್ಷಗಾನದ ರೀತಿ ಕಿರೀಟ ಎದುರಿಗಿಟ್ಟು ಪೂಜೆ ಆಗಿದೆ. ಮುಂದಿನ ಬಾರಿ ಕಿರೀಟ ಗಣಪತಿ ತಲೆಯ ಮೇಲೆಯೇ ಇರಲಿ. ನಮ್ಮ ನಂಬಿಕೆ ಪ್ರಕಾರ ಗಣಪತಿ ಎತ್ತರಕ್ಕೆ ಏರಬೇಕು. ವಿಸಿಯವರ ಸಹಕಾರ ಮತ್ತು ನಂಬಿಕೆ ಭಾರೀ ದೊಡ್ಡದು. ಅವರ ನಂಬಿಕೆ ಮತ್ತು ಸಂಸ್ಕೃತಿಯ ಕಾರಣಕ್ಕೆ ಸುಸೂತ್ರವಾಗಿ ನಡೆದಿದೆ ಎಂದರು.

ಇದನ್ನೂ ಓದಿ: ವಿವಾದದ ನಡುವೆಯೂ ಮಂಗಳೂರು ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

ಗಣಪತಿಗೆ ವಿರೋಧ ಮಾಡುವ ತಾಕತ್ತು ಯಾರಿಗೂ ಇಲ್ಲ. ಗಣಪತಿ ಮೇಲೆ ನಂಬಿಕೆ ಇಟ್ಟವರು ಯಾರೂ ವಿರೋಧ ಮಾಡಲ್ಲ. ಈ ದೃಷ್ಟಿಕೋನ ಸರ್ಕಾರದಲ್ಲಿ ನಿತ್ಯ ನಿರಂತರ ಇರಲಿ. ಯಾವುದೇ ಸರ್ಕಾರಗಳು ಬಂದರೂ ದೇವರ ಪೂಜೆಗೆ ಅಡ್ಡಿ ಮಾಡಬಾರದು ಎಂದರು.

ಪೂಜೆ ನೆರವೇರಿಸಿದ ವಿಶ್ವವಿದ್ಯಾಲಯದ ಉಪಕುಲಪತಿ

ಮಂಗಳೂರು ವಿವಿ ಮಂಗಳಾ ಆಡಿಟೋರಿಯಂನಲ್ಲಿ ಪ್ರತಿಷ್ಠಾಪಿಸಿದ ಗಣಪತಿಗೆ ವಿಶ್ವವಿದ್ಯಾಲಯದ ಉಪಕುಲಪತಿ ಜಯರಾಜ್ ಅಮೀನ್ ಅವರು ಹಿಂದೂ ಮುಖಂಡರ ಜೊತೆಗೇ ಪೂಜೆ ನೆರವೇರಿಸಿದರು. ಈ ವೇಳೆ ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್,‌ ಶಾಸಕ ಡಾ.ಭರತ್ ಶೆಟ್ಟಿ ಜೊತೆಗೂಡಿ ಪೂಜೆ ನೆರವೇರಿಸಿದರು. ಮಹಾ ಪೂಜೆ ‌ಬಳಿಕ ಬಿಜೆಪಿ ಮತ್ತು ಹಿಂದೂ ಮುಖಂಡರು ಪ್ರಸಾದ ಸ್ವೀಕರಿಸಿದರು. ಮಂಗಳೂರು ವಿವಿ ರಿಜಿಸ್ಟ್ರಾರ್ ರಾಜು ಸಹಿತ ಸಿಬ್ಬಂದಿ ಭಾಗಿಯಾದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ