ಮಂಗಳೂರು ಸ್ಫೋಟ ಪ್ರಕರಣ: ಹಿಂದೂ ಹೆಸರಿನಲ್ಲಿ ಕೇರಳ, ತಮಿಳುನಾಡಿಗೆ ಭೇಟಿ ನೀಡಿದ್ದ ಶಾರೀಕ್, ಆಘಾತಕಾರಿ ಅಂಶ ಬಯಲು

| Updated By: ರಮೇಶ್ ಬಿ. ಜವಳಗೇರಾ

Updated on: Nov 23, 2022 | 3:18 PM

ಮಂಗಳೂರಿನಲ್ಲಿ ಸಂಭವಿಸಿದ ಬ್ಲಾಸ್ಟ್​ ಪ್ರಕರಣದ ಆರೋಪಿಗೆ ಕೊಯಮತ್ತೂರು ಹಾಗೂ ಕೇರಳದಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟದ ನಂಟು ಇರುವ ಶಂಕೆ ವ್ಯಕ್ತವಾಗಿದೆ.

ಮಂಗಳೂರು ಸ್ಫೋಟ ಪ್ರಕರಣ: ಹಿಂದೂ ಹೆಸರಿನಲ್ಲಿ ಕೇರಳ, ತಮಿಳುನಾಡಿಗೆ ಭೇಟಿ ನೀಡಿದ್ದ ಶಾರೀಕ್, ಆಘಾತಕಾರಿ ಅಂಶ ಬಯಲು
ಮಂಗಳೂರು ಸ್ಫೋಟದ ಮುಖ್ಯ ಅರೋಪಿ ಶಾರೀಕ್
Follow us on

ಮಂಗಳೂರು: ಮಂಗಳೂರಿನ ಕಂಕನಾಡಿ ಬಳಿ ಆಟೋದಲ್ಲಿ ಸಂಭವಿಸಿದೆ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ (Mangaluru Auto Blast Case) ತೀವ್ರ ಸ್ವರೂಪ ಪಡೆದುಕೊಂಡಿದ್ದು, ಶಂಕಿತ ಉಗ್ರ ಶಾರೀಕ್‌ನ ಬೆನ್ನತ್ತಿರುವ ಖಾಕಿ ಪಡೆಗೆ ಇನ್ನಷ್ಟು ಆಘಾತಕಾರಿ ಮಾಹಿತಿಗಳು ಬಯಲಾಗಿವೆ. ಆರೋಪಿ ಶಿವಮೊಗ್ಗದ ತೀರ್ಥಹಳ್ಳಿಯ ಎಚ್ ಮೊಹಮ್ಮದ್ ಶಾರಿಕ್ ತಮಿಳುನಾಡು ಹಾಗೂ ಕೇರಳಕ್ಕೆ ಭೇಟಿ ನೀಡಿದ್ದು, ಅಲ್ಲಿ ಹಿಂದೂ ಹೆಸರಿನ ನಕಲಿ ಆಧಾರ್ ಕಾರ್ಡ್​ ಬಳಸಿ ಲಾಡ್ಜ್​ ಪಡೆದುಕೊಂಡಿದ್ದ ಎಂದು ತಿಳಿದುಬಂದಿದೆ.

ನಿಮ್ಮ ಆಧಾರ್ ಕಾರ್ಡ್ ಭಯೋತ್ಪಾದಕರಿಗೆ ಸಿಗದಿರಲಿ: ಮಂಗಳೂರು ಸ್ಫೋಟದಿಂದ ಪಾಠ ಕಲಿಯಿರಿ ಎಂದ ಎಡಿಜಿಪಿ ಅಲೋಕ್​ಕುಮಾರ್

ಕೊಯಮತ್ತೂರಿನಲ್ಲಿ ಸಂಗಮೇಶ್ವರ ದೇವಸ್ಥಾನ ಬಳಿ ಸ್ಫೋಟ ಸಂಭವಿಸುವುದಕ್ಕೆ ಒಂದೂವರೆ ತಿಂಗಳ ಮೊದಲು ಶಾರೀಕ್ ಕೊಯಮತ್ತೂರಿಗೆ ಹೋಗಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅ.23 ರಂದು ಸಂಗಮೇಶ್ವರ ದೇವಸ್ಥಾನ ಬಳಿಯ ನಡೆದಿದ್ದ ಕಾರು ಬಾಂಬ್ ಸ್ಫೋಟ ಪ್ರಕರಣಕ್ಕೂ ನಂಟು ಇರುವ ಬಗ್ಗೆ ಪೊಲೀಸರು ತನಿಖೆ ಬಿರುಸುಗೊಳಿಸಿದ್ದಾರೆ.

ಕೊಯಮತ್ತೂರಿನಲ್ಲಿ ಪಿಎಫ್‌ಐ ನಾಯಕರನ್ನು ಶಾರೀಕ್ ಭೇಟಿಯಾಗಿದ್ದ ಶಂಕೆ ವ್ಯಕ್ತವಾಗಿದೆ. ಜೊತೆಗೆ 1998ರ ಕೊಯಮತ್ತೂರು ಬಾಂಬ್ ಬ್ಲಾಸ್ಟ್ ರೂವಾರಿ ಎಸ್‌‌.ಎ.ಬಾಷಾ ಸಂಬಂಧಿ ಮುಹಮ್ಮದ್ ತಲ್ಕನನ್ನು ಭೇಟಿಯಾದ ಅನುಮಾನ ಬಂದಿದೆ. ಮೋಸ್ಟ್ ವಾಂಟೆಡ್‌ ಅಬ್ದುಲ್ ಮತೀನ್‌ನಿಂದ ಮುಹಮ್ಮದ್ ತಲ್ಕ ಪರಿಚಯವಾಗಿರಬಹುದು ಎನ್ನಲಾಗುತ್ತಿದೆ. ತಮಿಳುನಾಡು ಹಿಂದೂ ಮುಖಂಡನ ಹತ್ಯೆಯಲ್ಲಿ ಮತೀನ್ ಹೆಸರು ಕೇಳಿ ಬಂದಿತ್ತು. ತಮಿಳುನಾಡಿನ ಹಲವು ಉಗ್ರ ಜಾಲ ಹೊಂದಿದ್ದವರ ಜೊತೆ ಮತೀನ್‌ಗೆ ಸಂಪರ್ಕ ಇದ್ದು ಆತನೇ ಶಾರೀಕ್‌ಗೆ ಪರಿಚಯ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಕೇರಳಕ್ಕೂ ಭೇಟಿ

ಕೇರಳದ ಆಲುವಾ ರೈಲು ನಿಲ್ದಾಣದ ಬಳಿ ಜೈಥೂನ್ ಲಾಡ್ಜ್​ನಲ್ಲಿ ನಕಲಿ ಆಧಾಕರ್ ಕಾರ್ಡ್​ ನೀಡಿ ರೂಮ್ ಪಡೆದುಕೊಂಡಿದ್ದಾನೆ. ಸೆಪ್ಟೆಂಬರ್ 13ರಂದು ರೂಮ್ ಪಡೆದುಕೊಂಡು ಸೆ. 18ಕ್ಕೆ ಚೆಕ್​ ಔಟ್ ಆಗಿದ್ದಾನೆ. ಕೇರಳದ ಆಲುವಾದಲ್ಲಿನ ಲಾಡ್ಜ್‌ನಲ್ಲಿ ತಂಗಿರುವ ವೇಳೆ ಶಾರೀಕ್, ಆನ್​ಲೈನ್​ನಿಂದ ವಸ್ತುವನ್ನು ಖರೀದಿಸಿದ್ದಾನೆ. ಶರೀಕ್ ಆರ್ಡರ್ ಮಾಡಿದ್ದ ವಸ್ತುವನ್ನು ಡೆಲಿವರಿ ಬಾಯ್​ ಲಾಡ್ಜ್​ಗೆ ಬಂದು ಕೊಟ್ಟು ಹೋಗಿದ್ದಾನೆ ಎನ್ನುವ ಅಂಶ ಬೆಳಕಿಗೆ ಬಂದಿದೆ, ಹಾಗಾದ್ರೆ ಆನ್​ಲೈನ್​ನಲ್ಲಿ ಏನು ಆರ್ಡರ್ ಮಾಡಿದ್ದ? ಕೇರಳದಲ್ಲಿ ಈತನಿಗೆ ಯಾರ ನಂಟು ಇದೆ? ಈತನಿಗೆ ಹಣದ ಮೂಲ ಯಾವುದು ಎಂದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಒಟ್ಟಿನಲ್ಲಿ ಮಂಗಳೂರು ಬ್ಲಾಸ್ಟ್ ಆರೋಪಿ ಶಾರೀಕ್​ನ ನಡೆ ಹಿಂದೆ ಹಲವು ಆಘಾತಕಾರಿ ಅಂಶಗಳು ವ್ಯಕ್ತವಾಗುತ್ತಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ಸಂಪೂರ್ಣ ತನಿಖೆ ಬಳಿಕ ಶರೀಕ್​ನ ಕೇರಳ ಹಾಗೂ ತಮಿಳುನಾಡು ಭೇಟಿ ಹಿಂದಿನ ಸತ್ಯಾಂಶ ಹೊರಬರಲಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ