
ಮಂಗಳೂರು, ಜನವರಿ 13: ಆರು ಪೆಡ್ಲರ್‌ಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಉಗಾಂಡ ಮೂಲದ ಮಹಿಳೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಜಿಗಣಿ ಬಳಿ ಉಗಾಂಡದ ಮಹಿಳೆ ಜಲಿಯಾ ಝಲ್ವಾಂಗೋ ಅರೆಸ್ಟ್ ಮಾಡಲಾಗಿದ್ದು, ಆಕೆ ಬಳಿ ಇದ್ದ 4 ಕೋಟಿ ರೂ. ಮೌಲ್ಯದ MDMAಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸಿಸಿಬಿ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಕುಂದಾಪುರದ ಮೊಹಮ್ಮದ್ ಶಿಯಾಬ್ ಅಲಿಯಾಸ್ ಶಿಯಾಬ್, ಉಳ್ಳಾಲ ಕಳ್ಳರ ಕೋಡಿ ನಿವಾಸಿ ಮೊಹಮ್ಮದ್ ನೌಷದ್ , ಬೆಂಗ್ರೆ ನಿವಾಸಿ ಇಮ್ರಾನ್ ಅಲಿಯಾಸ್ ಇಂಬ, ಬಂಟ್ವಾಳದ ನಿಸಾರ್ ಅಹಮ್ಮದ್, ಕಾಪು ನಿವಾಸಿ ಮೊಹಮ್ಮದ್ ಇಕ್ಬಾಲ್ ಮತ್ತು ಪಡುಬಿದ್ರೆ ನಿವಾಸಿ ಶೆಹರಾಜ್ ಶಾರೂಕ್ ಎಂಬ ಡ್ರಗ್ ಪೆಡ್ಲರ್ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆರೋಪಿಗಳು ಜಲಿಯಾಳಿಂದ ಡ್ರಗ್ಸ್ ಪಡೆದು ಮಂಗಳೂರಲ್ಲಿ ಮಾರುತ್ತಿದ್ದ ವಿಚಾರ ತನಿಖೆ ವೇಳೆ ಗೊತ್ತಾಗಿತ್ತು. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಬೆಂಗಳೂರಲ್ಲಿ ಸಿಸಿಬಿ ರೇಡ್ ನಡೆಸಿದೆ ಎನ್ನಲಾಗಿದೆ.
ಇದನ್ನೂ ಓದಿ: ಡ್ರಗ್ಸ್ ಫ್ಯಾಕ್ಟರಿ ರಾಜಧಾನಿ ಆಯ್ತಾ ಬೆಂಗಳೂರು?; 55.88 ಕೋಟಿ ರೂ. ಮೌಲ್ಯದ MDMA ಸೀಜ್
ಉಗಾಂಡದ ಜಲಿಯಾ ಯಾರಿಗೂ ಅನುಮಾನ ಬಾರದಂತೆ ಎಂಡಿಎಂ ಸಾಗಾಟಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದಳು. ಮಾಲ್‌ಗಳು ಅಥವಾ ಟೆಕ್ಸ್ ಟೈಲ್ಗಳಿಂದ ಪುರುಷರ ಹೊಸ ಶರ್ಟ್ಗಳನ್ನು ಖರೀದಿಸಿ ಅದನ್ನು ಮೆಲ್ಲಗೆ ಬಿಡಿಸಿ ಅದರೊಳಗೆ ಅಂದಾಜು 300 ಗ್ರಾಂ ಎಂಡಿಎಂಎ ಪ್ಯಾಕ್ ಇಟ್ಟು ಸೂಟ್ ಕೇಸ್ನಲ್ಲಿ ತುಂಬುತ್ತಿದ್ದಳು. ಮೇಲ್ನೋಟಕ್ಕೆ ಇದು ಅಂದವಾಗಿ ಶರ್ಟ್ ಜೋಡಿಸಿಟ್ಟ ಸೂಟ್ ಕೇಸ್ನಂತೆ ಕಾಣುತ್ತಿತ್ತು. ಶರ್ಟ್ ಬಿಡಿಸಿ ನೋಡಿದರೆ ಆದರೊಳಗೆ ಎಂಡಿಎಂ ಪ್ಯಾಕೇಟ್ಗಳು ಇರುತ್ತಿದ್ದವು. ಇನ್ನು ಜಲಿಯಾ ಉಗಾಂಡದಿಂದ ಬಂದು ಭಾರತದಲ್ಲಿ ಅಕ್ರಮವಾಗಿ ವಾಸವಿದ್ದಳು ಎಂಬ ವಿಚಾರವೂ ಬಯಲಾಗಿದೆ. ಆ ಮೂಲಕ ಮಂಗಳೂರಿಗೆ ಸರಬರಾಜಾಗುತ್ತಿದ್ದ ಡ್ರಗ್ಸ್ ಜಾಲದ ಒಂದು ಪ್ರಮುಖ ಕೊಂಡಿ ಕಳಚಿದೆ. ಅದರೆ ಇಂತಹ ನುರಾರು ಮಂದಿ ಇರುವ ಅನುಮಾನವಿದ್ದು, ಅವರ ಪತ್ತೆಯನ್ನೂ ಶೀಘ್ರಮಾಡಿ ತಕ್ಕ ಶಾಸ್ತಿ ನೀಡಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:34 pm, Tue, 13 January 26