
ಮಂಗಳೂರು, ಜೂನ್ 25: ಈಗಾಗಲೇ ನಗರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಮಧ್ಯೆ ಕೋಟ್ಯಂತರ ರೂ ತೆರಿಗೆ (Tax) ವಂಚನೆ ದಂಧೆಯೊಂದು ಬೆಳಕಿಗೆ ಬಂದಿದೆ. ಮಂಗಳೂರು ಸಾರಿಗೆ ಅಧಿಕಾರಿ ಉಸ್ತುವಾರಿಯಲ್ಲೇ ಕೋಟ್ಯಂತರ ರೂ ಬೆಲೆಯ ಕಾರಿನ (luxury car) ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಭಾರಿ ವಂಚನೆ ಮಾಡಿರುವುದು ಪತ್ತೆ ಆಗಿದೆ. ಐಶಾರಾಮಿ ಕಾರುಗಳ ತಪಾಸಣೆ ವೇಳೆ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ. ಸದ್ಯ ಕಾರು ಸೀಜ್ ಮಾಡಿ ಆರ್ಸಿ ಬ್ಲಾಕ್ ಲಿಸ್ಟ್ಗೆ ಸೇರಿಸಲಾಗಿದ್ದು, ಶಿವಮೊಗ್ಗ ವಿಭಾಗದ ಸಾರಿಗೆ ಇಲಾಖೆ ಜಂಟಿ ಆಯುಕ್ತರಿಂದ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಕಾರಿನ ಮೌಲ್ಯ ಕಡಿಮೆ ಮಾಡಿ ಭಾರಿ ತೆರಿಗೆ ವಂಚನೆ ಮೆಗಾ ದಂಧೆ ನಡೆದಿದೆ. ಪ್ರಸ್ತುತ Mercedes-Benz AMG G 63 ಕಾರಿಗೆ 2 ರಿಂದ 2.50 ಕೋಟಿ ಮೌಲ್ಯ ಹೊಂದಿದ್ದರೆ, Mercedes-Benz GLA 200 CDA ಕಾರು ಸುಮಾರು 50 ಲಕ್ಷದವರೆಗೆ ಮೌಲ್ಯ ಹೊಂದಿದೆ. 2.50 ಕೋಟಿ ಮೌಲ್ಯದ ಕಾರಿಗೆ 50 ಲಕ್ಷ ರೂ ತೆರಿಗೆ ಕಟ್ಟಬೇಕು. ಆದರೆ 50 ಲಕ್ಷ ರೂ ಮೌಲ್ಯದ ಕಾರಿಗೆ 5 ರಿಂದ 6 ಲಕ್ಷ ರೂ ತೆರಿಗೆ ಕಟ್ಟಿದರೆ ಸಾಕು. ಇದೇ ಕಾರಣಕ್ಕೆ ಭಾರೀ ತೆರಿಗೆ ಉಳಿಸಲು ಕಾರಿನ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ವಂಚನೆ ಮಾಡಲಾಗಿದೆ. ತೆರಿಗೆ ವಂಚಿಸಲು ಮಂಗಳೂರು ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ್ ಸಾಥ್ ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರು: ನಿವೃತ್ತರಾಗಿ 15 ವರ್ಷ ಕಳೆದರೂ ಹುದ್ದೆಯಲ್ಲಿ ಮುಂದುವರಿದ ಅಧಿಕಾರಿ!
2017ರಲ್ಲಿ ಮಂಗಳೂರಿನ ನಿಹಾಲ್ ಅಹ್ಮದ್ ಎಂಬುವವರು ಬೆಂಗಳೂರಿನಲ್ಲಿ 2.50 ಕೋಟಿ ಮೌಲ್ಯದ ಮರ್ಸಿಡಿಸ್-ಬೆಂಜ್ ಎಎಂಜಿ ಜಿ 63 (Mercedes-Benz AMG G 63) ಕಾರು ಖರೀದಿಸಿದ್ದರು. ತಾತ್ಕಾಲಿಕವಾಗಿ ನೋಂದಾಣಿ ಮಾಡಿ 2017 ರಿಂದ 2025ರವರೆಗೆ ಚಲಾಯಿಸಲಾಗಿದೆ. ಬಳಿಕ 2025ರಲ್ಲಿ ನೇರವಾಗಿ ಮಂಗಳೂರಿನ ನೀರಜ್ ಕುಮಾರ್ ಶರ್ಮಾ ಎಂಬುವವರ ಹೆಸರಿನಲ್ಲಿ ಕಾರು ನೋಂದಾಣಿ ಮಾಡಿಸಲಾಗಿದೆ.
ಇದನ್ನೂ ಓದಿ: ಕತಾರ್ ಮೇಲೆ ಇರಾನ್ ದಾಳಿ: ಮಂಗಳೂರು ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ
ಕಾರು ನೋಂದಾಣಿಗೂ ಮುನ್ನವೇ ಮಂಗಳೂರು ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ್ ಕಾರಿನ ದಾಖಲೆ ಮಾರ್ಪಾಡು ಮಾಡಿದ್ದಾರೆ. ಆ ಮೂಲಕ ಲಕ್ಷಾಂತರ ರೂ. ತೆರಿಗೆ ವಂಚಿಸಲು ಮುಂದಾಗಿದ್ದಾರೆ. 2025ರ ಜನವರಿಯಲ್ಲೇ ದಾಖಲೆ ಬದಲಿಸಲಾಗಿದೆ. WDB4632722X261301 ಚಾಸಿಸ್ ನಂಬರ್ನ Benz AMG G 63 ಕಾರಿಗೆ ಅದೇ ಚಾಸಿಸ್ ನಂಬರ್ನಲ್ಲಿ Benz GLA 200 CDA ಕಾರಿನ ನಕಲಿ ದಾಖಲೆ ಸೃಷ್ಟಿ ಮಾಡಲಾಗಿದೆ. 15798460107755 ಇಂಜಿನ್ ನಂಬರ್ ಸರಿಯಾಗಿದ್ದರೂ ಕಾರಿನ ಮಾಡೆಲ್ ಮಾರ್ಪಡಿಸಲಾಗಿದೆ. ಮಂಗಳೂರು ಆರ್ಟಿಓದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಉಡುಪಿ ಆರ್ಟಿಓದಲ್ಲಿ ಕಾರು ನೋಂದಾಣಿ ಮಾಡಲಾಗಿದೆ. ಸದ್ಯ ಮೈಸೂರಿನಲ್ಲಿ ತಪಾಸಣೆ ವೇಳೆ ಕಾರಿನ ನಕಲಿ ದಾಖಲೆ ಮಾಹಿತಿ ಬಹಿರಂಗವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:57 am, Wed, 25 June 25