ಕತಾರ್ ಮೇಲೆ ಇರಾನ್ ದಾಳಿ: ಮಂಗಳೂರು ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ
ಇರಾನ್, ಇಸ್ರೇಲ್, ಅಮೆರಿಕ ಸಂಘರ್ಷದ ಬಿಸಿ ಮಂಗಳೂರು ಅಂತಾರಾಷ್ಟ್ರೀಯ ವಿಮನ ನಿಲ್ದಾಣದಿಂದ ಪ್ರಯಾಣಿಸುವವರಿಗೂ ತಟ್ಟಿದೆ. ಮಧ್ಯಪ್ರಾಚ್ಯದ ದೇಶಗಳು ವಾಯುಮಾರ್ಗಗಳನ್ನು ಬಂದ್ ಮಾಡಿದ ಕಾರಣ, ಮಂಗಳೂರಿನಿಂದ ಹೊರಟಿದ್ದ ಎರಡು ವಿಮಾನಗಳು ವಾಪಸಾಗಿವೆ. ಅಲ್ಲದೆ, ವಿದೇಶಗಳಿಗೆ ಹೋಗುವ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ. ಈ ಬಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮನ ನಿಲ್ದಾಣ ಮಾಹಿತಿ ಹಂಚಿಕೊಂಡಿದೆ.

ಮಂಗಳೂರು, ಜೂನ್ 24: ಕೊಲ್ಲಿ ರಾಷ್ಟ್ರ ಕತಾರ್‌ನಲ್ಲಿರುವ ಅಮೇರಿಕಾ ಸೇನಾ ನೆಲೆಗಳ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿರುವ ಕಾರಣ ಮಂಗಳೂರು ಅಂತಾರಾಷ್ಟ್ರೀಯ ವಿಮನ ನಿಲ್ದಾಣದಿಂದ (Mangaluru Airport) ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಮಂಗಳೂರಿನಿಂದ (Mangaluru) ಹೊರಟಿದ್ದ ಎರ್ ಇಂಡಿಯಾ ಎಕ್ಸ್‌ಪ್ರೆಸ್ ದಮ್ಮಾಮ್‌ಗೆ ಹೋಗುವ ಬದಲು ಮುಸ್ಕತ್ ಕಡೆ ತಿರುಗಿಸಲಾಗಿತ್ತು. ಅಬುದಾಭಿಗೆ ಹೋಗುವ ಇಂಡಿಗೋ ವಿಮಾನ ಮುಂಬೈನಲ್ಲಿ ಲ್ಯಾಂಡ್ ಆಗಿತ್ತು. ಇದೀಗ ಎರಡೂ ವಿಮಾನಗಳು ಮಂಗಳೂರಿಗೆ ವಾಪಸ್ ಆಗಿವೆ.
ಇರಾನ್ ಮಿಸೈಲ್ ದಾಳಿ ಮಾಡಿದ ಕಾರಣ ಮಧ್ಯಪ್ರಾಚ್ಯದ ದೇಶಗಳು ವಾಯುಮಾರ್ಗಗಳನ್ನು ಬಂದ್ ಮಾಡಿವೆ. ಅಲ್ಲಿನ ವಿಮಾನಯಾನ ವಲಯ ಮುಚ್ಚಲ್ಪಟ್ಟ ಕಾರಣ ವಿಮಾನಗಳು ಮಂಗಳೂರಿಗೆ ವಾಪಸಾಗಿವೆ.
ಮಂಗಳೂರಿನಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿರುವ ಬಗ್ಗೆ ಏರ್ಪೋರ್ಟ್ ಆಡಳಿತ ಮಾಹಿತಿ ನೀಡಿದೆ. ವಿಮಾನ ನಿಲ್ದಾಣಕ್ಕೆ ಬರುವ ಮುನ್ನ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಪ್ರಯಾಣಿಕರಿಗೆ ಮನವಿ ಮಾಡಲಾಗಿದೆ.
ಮಂಗಳೂರು ವಿಮಾನ ನಿಲ್ದಾಣ ಎಕ್ಸ್ ಸಂದೇಶ
— Mangaluru Airport (@mlrairport) June 23, 2025
ಇಸ್ರೇಲ್ ಇರಾನ್ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ ಅಮೆರಿಕ ಕೂಡ ಇರಾನ್ನ ಪರಮಾಣು ಘಟಗಳ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಸೇನೆ, ಕೊಲ್ಲಿ ರಾಷ್ಟ್ರ ಕತಾರ್‌ನಲ್ಲಿರುವ ಅಮೇರಿಕಾ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಮಾಹಿತಿ ನೀಡಿದ್ದು, ಇರಾನ್ ದಾಳಿಯಿಂದ ಅಮೆರಿಕ ನೆಲೆಗಳಿಗೆ ಏನೂ ಹಾನಿಯಾಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಕತಾರ್‌ನಲ್ಲಿರುವ ಅಮೆರಿಕದ ವಾಯುನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ
ಈ ಸಂಘರ್ಷದ ಬೆನ್ನಲ್ಲೇ ಮಧ್ಯಪ್ರಾಚ್ಯ ದೇಶಗಳು ಏರ್ಸ್ಪೇಸ್ ಬಂದ್ ಮಾಡಿವೆ. ಇದರ ಬಿಸಿ ಮಂಗಳೂರಿನ ಪ್ರಯಾಣಿಕರಿಗೂ ತಟ್ಟಿದೆ.







