ಮಂಗಳೂರು: ನಿವೃತ್ತರಾಗಿ 15 ವರ್ಷ ಕಳೆದರೂ ಹುದ್ದೆಯಲ್ಲಿ ಮುಂದುವರಿದ ಅಧಿಕಾರಿ!
ಕರ್ನಾಟಕದಲ್ಲಿ ಭ್ರಷ್ಟಚಾರದ ಆರೋಪ ಮುಗಿಲು ಮುಟ್ಟಿದೆ. ಆಡಳಿತ ಪಕ್ಷದ ಶಾಸಕರೇ ಈ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ನಡುವೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಚಾರವೇ ಬಯಲಾಗಿದೆ. ಪಾಲಿಕೆಯ ಎಲ್ಲಾ ವಿಭಾಗಕ್ಕೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಹಲವು ಹುಳುಕುಗಳು ಬೆಳಕಿಗೆ ಬಂದಿದೆ.

ಮಂಗಳೂರು, ಜೂನ್ 25: ಕಡಲನಗರಿ ಮಂಗಳೂರಿನಲ್ಲಿ (Mangaluru) ಭ್ರಷ್ಟಚಾರ ಮಿತಿ ಮೀರಿದೆ. ಕಲ್ಲು ಸಹ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸರಿಯಲು ಲಂಚ ಕೇಳುತ್ತಿವೆ ಎಂದು ಜನ ಮಾತನಾಡುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಎಲ್ಲ ವಿಭಾಗಗಳಿಗೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಹಲವು ಹುಳುಕುಗಳು ಬೆಳಕಿಗೆ ಬಂದಿವೆ. ಲೋಕಾಯುಕ್ತ ಅಧಿಕಾರಿಗಳ ಅನಿರೀಕ್ಷಿತ ಭೇಟಿ ವೇಳೆ ಪಾಲಿಕೆಯಲ್ಲಿನ ಭ್ರಷ್ಟ ಅಧಿಕಾರಿಗಳ ನಿಜ ಬಣ್ಣ ಬಯಲಾಗಿದೆ. ಕಂದಾಯ ವಿಭಾಗ, ಆರೋಗ್ಯ ವಿಭಾಗ, ಎಂಜಿನಿಯರ್ ವಿಭಾಗ, ಲೆಕ್ಕ ಪತ್ರ ವಿಭಾಗ, ನಗರ ಯೋಜನಾ ವಿಭಾಗ, ಆಯುಕ್ತರ ಕಛೇರಿಯಲ್ಲಿ ಕಡತ ವಿಲೇವಾರಿಯಲ್ಲಿ ಹಲವಾರು ನ್ಯೂನತೆ ಇರುವುದು ಗೊತ್ತಾಗಿದೆ. ಅದರಲ್ಲೂ ಕಂದಾಯ ಮತ್ತು ನಗರ ಯೋಜನಾ ವಿಭಾಗದ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ಬ್ರೋಕರ್ ಒಬ್ಬರ ಬಳಿ 5 ಲಕ್ಷ ರೂ. ಹಣವೂ ಪತ್ತೆಯಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಕೌನ್ಸಿಲ್‌ನ ಅಧಿಕಾರವಧಿ ಫೆಬ್ರವರಿ 27 ಕ್ಕೆ ಕೊನೆಯಾಗಿದೆ. ಆ ಬಳಿಕ ಚುನಾವಣೆ ನಡೆಯದಿರುವ ಕಾರಣ ಅಧಿಕಾರಿಗಳದ್ದೇ ರಾಜ್ಯಭಾರ ಎಂಬಂತಾಗಿದೆ. ಆರೋಗ್ಯ ವಿಭಾಗದಲ್ಲಿ ಹಲವಾರು ಉದ್ದಿಮೆ ಪರವಾನಗಿಯ ಕಡತಗಳು ವೆಬ್‌ಸೈಟ್‌ನಲ್ಲಿ ಬಾಕಿ ಇರುವುದು ಪತ್ತೆಯಾಗಿದೆ.

ಮಂಗಳೂರು ಮಹಾನಗರ ಪಾಲಿಕೆ
ಅದರಲ್ಲೂ ಪಾಲಿಕೆಯ ಆರೋಗ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅಧಿಕಾರಿ ನಿವೃತ್ತರಾಗಿ 15 ವರ್ಷ ಕಳೆದರೂ ಅದೇ ಹುದ್ದೆಯಲ್ಲಿ ಮುಂದುವರಿದಿರುವುದು ಗೊತ್ತಾಗಿದೆ.
ನಗರ ಯೋಜನಾ ವಿಭಾಗದಲ್ಲಿ ಕಟ್ಟಡ ಪರವಾನಗಿ ನೀಡುವ ಸಮಯ ಯಾವುದೇ ನಿಬಂಧನೆಗಳನ್ನು ಪಾಲಿಸದೇ ನೀಡಿರುವುದು ಗಮನಕ್ಕೆ ಬಂದಿದೆ. ಡೆಮೋಲೀಷನ್ ಆರ್ಡರ್ ಹೊರಡಿಸಿದ್ದರೂ ನಗರ ಯೋಜನಾ ವಿಭಾಗದ ಇಂಜಿನಿಯರ್‌ಗಳು ಮತ್ತು ಆಯುಕ್ತರು ನಿಯಮಗಳನ್ನು ಉಲ್ಲಂಘಿಸಿದ ಕಟ್ಟಡಗಳಿಗೆ ಕಾನೂನುಬಾಹಿರವಾಗಿ ಅನುಮತಿ ನೀಡಿರುವುದು ತಿಳಿದುಬಂದಿದೆ.
ಲಂಚದ ಹಣ ಸಾಗಿಸಲೆಂದೇ ಜನ: ಶಾಸಕ ವೇದವ್ಯಾಸ ಕಾಮತ್ ಗಂಭೀರ ಆರೋಪ
ಆಡಳಿತದ ದುರುಪಯೋಗ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿರುವ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್, ಪಾಲಿಕೆಯಲ್ಲಿ ದಿವಸವೂ ಮೂರು ಬಾರಿ ಲಂಚದ ಹಣ ಸಾಗಿಸಲು ವ್ಯಕ್ತಿಗಳಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಕತಾರ್ ಮೇಲೆ ಇರಾನ್ ದಾಳಿ: ಮಂಗಳೂರು ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ
ಭ್ರಷ್ಟಚಾರ ಮಿತಿಮೀರಿದ ಕಾರಣ ಸಾರ್ವಜನಿಕರು ದೂರಿನ ಸರಮಾಲೆಯನ್ನೇ ಲೋಕಾಯುಕ್ತಕ್ಕೆ ಸಲ್ಲಿಸಿದ್ದರು. ಸದ್ಯ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಬಾಕಿ ಇರಿಸಿಕೊಂಡ ಕಡತಗಳನ್ನು ವಶಕ್ಕೆ ಪಡೆದು ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಸಂಪೂರ್ಣ ವರದಿ ಸಿದ್ಧಪಡಿಸಿ ಕೇಂದ್ರ ಕಚೇರಿಗೆ ಸಲ್ಲಿಸಿ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕಾರ್ಯ ಮಾಡುತ್ತಿದ್ದಾರೆ.







