
ಮಂಗಳೂರು, ಏಪ್ರಿಲ್ 30: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು (Mangaluru) ಸಮೀಪದ ಕುಡುಪು ಎಂಬಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಗಲಾಟೆ ಸಂಭವಿಸಿ, ಗುಂಪೊಂದು ಯುವಕನ ಮೇಲೆ ಹಲ್ಲೆಗೈದ ಪರಿಣಾಮ ಆತ ಸಾವನ್ನಪ್ಪಿದ (Mob lynching) ಘಟನೆ ಸಂಭವಿಸಿದೆ. ಪ್ರಕರಣ ಸಂಬಂಧ ಈವರೆಗೆ 20 ಮಂದಿಯನ್ನು ಮಂಗಳೂರು ಪೊಲೀಸರು (Mangalore Police) ಬಂಧಿಸಿದ್ದಾರೆ. ಮೃತ ವ್ಯಕ್ತಿಯನ್ನು ಕೇರಳದ ವಯನಾಡಿನ ಮನವಂತವಾಡಿಯ ಪುಲ್ಪಲ್ಲಿ ನಿವಾಸಿ ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ. ಕೇರಳದಿಂದ ಬಂದ ಆತನ ಸಂಬಂಧಿಕರು ಮೃತದೇಹದೇಹದ ಗುರುತು ಪತ್ತೆ ಮಾಡಿದ್ದು, ಅವರಿಗೆ ಹಸ್ತಾಂತರ ಮಾಡಲಾಗಿದೆ. ಮೊಹಮ್ಮದ್ ಅಶ್ರಫ್ ಕ್ರಿಕೆಟ್ ಪಂದ್ಯದ ವೇಳೆ ‘‘ಪಾಕಿಸ್ತಾನ ಜಿಂದಾಬಾದ್’’ ಎಂದು ಘೋಷಣೆ ಕೂಗಿದ್ದಕ್ಕೆ ಅಲ್ಲಿ ನೆರೆದಿದ್ದವರು ಅಲ್ಲಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ವೇಳೆ ಮೊಹಮ್ಮದ್ ಅಶ್ರಫ್, ಪಾಕಿಸ್ತಾನವರ ಘೋಷಣೆ ಕೂಗಿದ್ದಾನೆ. ಹಾಗಾಗಿ ಆತನ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪವಿದೆ. ಈ ವಿಚಾರವಾಗಿ ತನಿಖೆ ನಡೆಸುತ್ತಿದ್ದೇವೆ. ಘಟನೆ ಸಂಬಂಧ 15 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರ ವಿಚಾರಣೆ ನಡೆಸಲಾಗುತ್ತಿದೆ. ಹೆಚ್ಚಿನ ತನಿಖೆಯ ನಂತರ ಈ ಬಗ್ಗೆ ವಿವರಗಳು ದೊರೆಯಬಹುದು ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ, ಬೇರೆ ರಾಜ್ಯದ ವ್ಯಕ್ತಿಯೊಬ್ಬನನ್ನು ಗುಂಪು ಹಲ್ಲೆ ಮಾಡಿ ಹತ್ಯೆ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಸ್ಥಳೀಯ ಕ್ರಿಕೆಟ್ ಪಂದ್ಯದ ವೇಳೆ ಆತ ‘‘ಪಾಕಿಸ್ತಾನ ಜಿಂದಾಬಾದ್’’ ಎಂದು ಕೂಗಿದ್ದ, ಆಗ ಅಲ್ಲಿದ್ದ ಗುಂಪು ಆತನ ಮೇಲೆ ಹಲ್ಲೆ ನಡೆಸಿತ್ತು ಎಂದು ವರದಿಯಾಗಿದೆ. ಥಳಿತದಿಂದ ಗಾಯಗೊಂಡ ವ್ಯಕ್ತಿ ಆ ನಂತರ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪೂರ್ಣ ವರದಿ ಕೈಸೇರಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಅದರಲ್ಲಿಯೂ ಮಂಗಳೂರಿನಲ್ಲಿ ಏನೇ ಗಲಭೆ ನಡೆದರೂ ಕೋಮು ಬಣ್ಣ ಹಚ್ಚಲಾಗುತ್ತದೆ. ಹೀಗಾಗಿ ಘಟನೆ ಬಗ್ಗೆ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
VIDEO | Bengaluru: Karnataka Home Minister G Parameshwara on Mangaluru mob lynching incident says, “An incident of mob lynching has been reported involving an unidentified individual. I was informed that there are reports he was shouting ‘Pakistan Zindabad’ during a local cricket… pic.twitter.com/dpLHTrujDf
— Press Trust of India (@PTI_News) April 29, 2025
ಎಪ್ರಿಲ್ 27 ರ ಭಾನುವಾರ ಮಂಗಳೂರಿನ ಕುಡುಪು ಎಂಬಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಮಂಗಳೂರಿಗೆ ವಲಸೆ ಕಾರ್ಮಿಕನಾಗಿ ಬಂದಿದ್ದ ಮೊಹಮ್ಮದ್ ಅಶ್ರಫ್ ಕ್ರಿಕೆಟ್ ಪಂದ್ಯ ವೀಕ್ಷಿಸಲು ಅಲ್ಲಿಗೆ ತೆರಳಿದ್ದ. ಆ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ ಎನ್ನಲಾಗಿದೆ. ಇದರಿಂದ ಕೆರಳಿದ ಸ್ಥಳೀಯರು ಆತನ ಮೇಲೆ ಹಲ್ಲೆ ನಡೆಸಿದ್ದರು. ದೇಹದ ಸೂಕ್ಷ್ಮ ಭಾಗಗಳಿಗೆ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಅಶ್ರಫ್ ಮರುದಿನ ಮೃತಪಟ್ಟಿದ್ದರು.
ಘಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಖಂಡಿಸಿದ್ದು, ಇದು ಒಂದು ಕ್ರೂರ ಘಟನೆ. ಅಮಾನವೀಯ ರೀತಿಯಲ್ಲಿ ಕೊಲೆ ಮಾಡಲಾಗಿದೆ. ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಇದನ್ನು ಮಾಡಿದವರು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.