ಮಾಜಿ ಶಾಸಕ ಮೊಯಿದ್ದೀನ್ ಬಾವ ಸೋದರ ನಾಪತ್ತೆ ಕೇಸ್​: ಮಹಿಳೆ ಸೇರಿ 6 ಮಂದಿ ವಿರುದ್ಧ ಎಫ್​ಐಆರ್

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಮೊಯಿದ್ದೀನ್ ಬಾವ, ಮಾಜಿ ಎಂ.ಎಲ್.ಸಿ ಬಿ.ಎಂ.ಫಾರೂಕ್ ಅವರ ತಮ್ಮ ಉದ್ಯಮಿ ಮುಮ್ತಾಜ್ ಅಲಿ ನಾಪತ್ತೆ ಪ್ರಕರಣ ಸಂಬಂಧ ಮಹಿಳೆ ಸೇರಿದಂತೆ ಆರು ಮಂದಿ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಮಾಜಿ ಶಾಸಕ ಮೊಯಿದ್ದೀನ್ ಬಾವ ಸೋದರ ನಾಪತ್ತೆ ಕೇಸ್​: ಮಹಿಳೆ ಸೇರಿ 6 ಮಂದಿ ವಿರುದ್ಧ ಎಫ್​ಐಆರ್
ಉದ್ಯಮಿ ಮುಮ್ತಾಜ್ ಅಲಿ, ಶೋಧಕಾರ್ಯ
Follow us
| Updated By: ವಿವೇಕ ಬಿರಾದಾರ

Updated on:Oct 07, 2024 | 10:51 AM

ಮಂಗಳೂರು, ಅಕ್ಟೋಬರ್​ 07: ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ಸೋದರ ಮುಮ್ತಾಜ್ ಅಲಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಆರು ಮಂದಿಯ ವಿರುದ್ಧ ಕಾವೂರು ಪೊಲೀಸ್ (Police) ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ನಾಪತ್ತೆಯಾದ ಮುಮ್ತಾಜ್ ಆಲಿ ಸಹೋದರ ಹೈದರ್ ದೂರು ಆಧರಿಸಿ ರೆಹಮತ್, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶೋಯೆಬ್ ಹಾಗೂ ಸಿರಾಜ್ ವಿರುದ್ದ ಎಫ್ಐಆರ್ ದಾಖಲಾಗಿದೆ.

ಮುಮ್ತಾಜ್ ಅಲಿ ಸಮಾಜದ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ಅವರ ಗೌರವ ಹಾಳು ಮಾಡಲು ಮಹಿಳೆಯನ್ನು ಬಳಸಿಕೊಂಡು ಷಡ್ಯಂತ್ರ ರೂಪಿಸಿದ್ದಾರೆ. ಮುಮ್ತಾಜ್ ಆಲಿ ಅವರಿಗೆ ಅಕ್ರಮ ಸಂಬಂಧ ಇದೆ ಎಂದು ರೆಹಮತ್ ಸುಳ್ಳು ಪ್ರಚಾರ ಮಾಡಿ ಬೆದರಿಕೆ ಹಾಕಿದ್ದಾನೆ. 2024ರ ಜುಲೈನಿಂದ ಈವರೆಗೆ ಮುಮ್ತಾಜ್ ಅಲಿ ಅವರಿಂದ 50 ಲಕ್ಷ ರೂ. ವಸೂಲಿ ಮಾಡಿದ್ದಾರೆ. 25 ಲಕ್ಷ ರೂ. ಹಣವನ್ನು ಮಹಿಳೆ ಚೆಕ್ ಮೂಲಕ ಪಡೆದಿದ್ದಾಳೆ.

ಸತ್ತಾರ್ ಎಂಬಾತ ಮುಮ್ತಾಜ್ ಅಲಿಯ ರಾಜಕೀಯ ವಿರೋಧಿಯಾಗಿದ್ದಾನೆ. ಅಕ್ರಮ ಸಂಬಂಧ ಇದೆ ಎಂದು ಇವರು ನಿರಂತರ ಬ್ಲ್ಯಾಕ್ ಮೇಲ್ ಮಾಡಿದ್ದರು. ಜೀವ ಬೆದರಿಕೆ ಜೊತೆಗೆ ಮುಮ್ತಾಜ್ ಆಲಿ ಕುಟುಂಬಕ್ಕೂ ಬೆದರಿಸಿದ್ದರು. ಹೀಗಾಗಿಯೇ ಸಹೋದರ ಮುಮ್ತಾಜ್ ಆಲಿ ಮೆಸೇಜ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮುಮ್ತಾಜ್ ಅಲಿ ಸಹೋದರ ಹೈದರ್ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಏನಿದು ಘಟನೆ?

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಮೊಯಿದ್ದೀನ್ ಬಾವ ಅವರ ಸಹೋದರ ಉದ್ಯಮಿ ಮುಮ್ತಾಜ್ ಅಲಿ ಅವರ BMW ಕಾರು ಮಂಗಳೂರು ಹೊರವಲಯದ ಕೂಳೂರು ಸೇತುವೆ ಮೇಲೆ ಪತ್ತೆಯಾಗಿದೆ. ಮುಮ್ತಾಜ್ ಅಲಿ ಅವರು ಸೇತುವೆ ಮೇಲಿಂದ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೋಸ್ಟ್ ಗಾರ್ಡ್, ಎಫ್ಎಸ್​ಡಿಆರ್​ಎಫ್, ಅಗ್ನಿಶಾಮಕ ದಳ, ಈಶ್ವರ್ ಮಲ್ಪೆ ಸೇರಿದಂತೆ ಮುಳುಗು ತಜ್ಞರು ಶೋಧ ನಡೆಸಿದ್ದಾರೆ.

ಮುಮ್ತಾಜ್ ಅಲಿ ಅವರು ಉದ್ಯಮಿಯಾಗಿದ್ದು, ಫಿಶ್ ಮಿಲ್, ಕಾಲೇಜು ಸೇರಿದಂತೆ ಹಲವು ಉದ್ಯಮಗಳನ್ನು ನಡೆಸುತ್ತಿದ್ದಾರೆ. ಮುಮ್ತಾಜ್ ಅಲಿ ಸಾಕಷ್ಟು ಸಂಘ ಸಂಸ್ಥೆಗಳಲ್ಲಿ, ಮಸೀದಿಯಲ್ಲಿ ಅಧ್ಯಕ್ಷ, ಪದಾಧಿಕಾರಿಯಾಗಿದ್ದು ಮುಸ್ಲಿಂ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ. ಸಮಾಜ ಸೇವೆಯ ಮೂಲಕ, ಮುಸ್ಲಿಂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದರು.

ಇದನ್ನೂ ಓದಿ: ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಚಡ್ಡಿಗ್ಯಾಂಗ್​ನ ರೋಚಕ ಸ್ಟೋರಿ

ರವಿವಾರ ರಾತ್ರಿ ಮುಮ್ತಾಜ್ ಅಲಿ ಮನೆಯಲ್ಲಿ ಗಲಾಟೆಯಾಗಿದೆ. ಸೋಮವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಯಾರಿಗೂ ತಿಳಿಯದಂತೆ ತನ್ನ ಬಿಎಂಡಬ್ಲ್ಯೂ ಕಾರನ್ನು ಚಲಾಯಿಸಿಕೊಂಡು ಪಣಂಬೂರು ಬಳಿ ಬಂದಿದ್ದಾರೆ. ಅಲ್ಲಿಂದ ವೇಗವಾಗಿ ಕೂಳೂರು ಹೈವೆಯಲ್ಲಿ ಬರುತ್ತಿದ್ದು ಖಾಸಗಿ ಬಸ್ಸೊಂದಕ್ಕೆ ಕಾರು ಡಿಕ್ಕಿ ಹೊಡೆದಿದೆ. ಬಳಿಕ ಯೂಟರ್ನ್ ತೆಗೆದುಕೊಂಡು ಬಂದು ಕೂಳೂರು ಸೇತುವೆಯ ಮಧ್ಯದಲ್ಲಿ ಕಾರನ್ನು ನಿಲ್ಲಿಸಿ ನಾಪತ್ತೆಯಾಗಿದ್ದಾರೆ. ಹೀಗಾಗಿ ಸೇತುವೆಯಿಂದ ಫಲ್ಗುಣಿ ನದಿಗೆ ಹಾರಿ‌ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ಶಂಕಿಸಲಾಗಿದೆ. ಹೀಗಾಗಿ ವಿವಿಧ ತಂಡಗಳಿಂದ ನದಿಯಲ್ಲಿ ಹುಡುಕಾಡುವ ಪ್ರಯತ್ನ ಮುಂದುವರೆದಿದೆ. ಇದೀಗ ಅವರ ನಾಪತ್ತೆ ಕುಟುಂಬಸ್ಥರನ್ನು ಆತಂಕಕ್ಕೀಡು ಮಾಡಿದೆ.

ಮಹಿಳೆ ಕೈವಾಡ

ಮುಮ್ತಾಜ್ ಅಲಿ ನಾಪತ್ತೆ ಹಿಂದೆ ಅದೊಂದು ಮಹಿಳೆಯ ಕೈವಾಡ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಸುರತ್ಕಲ್ ಕೃಷ್ಣಾಪುರ ನಿವಾಸಿ ಮಹಿಳೆ ಕಳೆದ ಒಂದು ವರ್ಷದಿಂದ ಮುಮ್ತಾಜ್ ಅಲಿ ಅವರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಳಂತೆ. ಮುಮ್ತಾಜ್ ಅಲಿ ಅವರ ಖಾಸಗಿ ವಿಡಿಯೋ ಇಟ್ಟುಕೊಂಡು ಮದುವೆ ಆಗುವಂತೆ ಮಹಿಳೆ ಬ್ಲಾಕ್ ಮೇಲ್ ಮಾಡುತ್ತಿದ್ದಳಂತೆ.

ಈ ವಿಚಾರ ಮುಮ್ತಾಜ್​ ಅಲಿ ಮನೆಯವರಿಗೆ ಗೊತ್ತಾಗಿ ನಿತ್ಯ ಕಿರಿಕಿರಿಯಾಗುತ್ತಿತ್ತು. ಇತ್ತೀಚಗೆ ಮಸೀದಿ ಕಮಿಟಿ ವಿಚಾರದಲ್ಲಿ ಕಾಟಿಪಳ್ಳದ ಮೂವರು ಯುವಕರು ಆ ಮಹಿಳೆಗೆ ಸಾಥ್ ನೀಡಿ ಹೆಸರು ಕೆಡಿಸಲು ತಯಾರಿ ನಡೆಸಿದ್ದರಂತೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ‌. ಪೊಲೀಸರು ಆ ಮಹಿಳೆ ಹಾಗೂ ಆ ಮೂವರ ಹಿಂದೆ ಬಿದ್ದಿದ್ದಾರೆ. ಆ ಮಹಿಳೆ ಕೇರಳಕ್ಕೆ ಹೋಗಿದ್ದು ಅಲ್ಲಿ ಫೋನ್ ಸ್ವಿಚ್ಡ್ ಆಫ್ ಆಗಿದೆ‌. ಈ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ದೊರೆತಿದೆ. ತನಿಖೆ ಮುಂದುವರೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:58 am, Mon, 7 October 24