ಮಂಗಳೂರು, ಸೆಪ್ಟೆಂಬರ್ 25: ಕಾಸ್ಮೆಟಿಕ್ ಸರ್ಜರಿ ವೇಳೆ ಯುವಕ ಮೃತಪಟ್ಟ ಪ್ರಕರಣವನ್ನು ದಕ್ಷಿಣ ಕನ್ನಡ (Dakshina Kannada) ಜಿಲ್ಲಾ ಆರೋಗ್ಯ ಇಲಾಖೆ (Health Department) ಗಂಭೀರವಾಗಿ ಪರಿಗಣಿಸಿದೆ. ಸರ್ಜರಿ ನಡೆದ ಬೆಂದೂರ್ ವೆಲ್ನಲ್ಲಿರುವ ಫ್ಲೋಂಟ್ ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್ಪ್ಲಾಂಟ್ ಕ್ಲಿನಿಕ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಓ ಡಾ.ತಿಮ್ಮಯ್ಯ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದರು.
ಎದೆ ಭಾಗ ಉಬ್ಬಿದ ಹಿನ್ನೆಲೆಯಲ್ಲಿ ಗೈನ್ ಇಕೋಮಸ್ಟಿಯಾ ಸರ್ಜರಿಗಾಗಿ ಉಳ್ಳಾಲದ ಅಕ್ಕರೆಕೆರೆ ನಿವಾಸಿ ಮುಹಮ್ಮದ್ ಮಾಝಿನ್ (32) ಅವರು ಮಂಗಳೂರು ನಗರದ ಕಂಕನಾಡಿಯ ಬೆಂದೂರ್ ವೆಲ್ ನಲ್ಲಿರುವ ಫ್ಲೋಂಟ್ ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್ಪ್ಲಾಂಟ್ ಕ್ಲಿನಿಕ್ನಲ್ಲಿ ದಾಖಲಾಗಿದ್ದರು. ಅರ್ಧ ಗಂಟೆಯಲ್ಲಿ ಮುಗಿಯಬಹುದಾಗಿದ್ದ ಸಣ್ಣ ಶಸ್ತ್ರಚಿಕಿತ್ಸೆ, ಸಂಜೆಯಾದರು ಮುಗಿಯದ ಹಿನ್ನೆಲೆಯಲ್ಲಿ ಅನುಮಾನಗೊಂಡ ಮಾಝಿನ್ ಪೋಷಕರು ಅನುಮಾನಗೊಂಡಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಲರಾ ಆತಂಕ! ಆಹಾರ ಗುಣಮಟ್ಟದ ಬಗ್ಗೆ ಎಚ್ಚರವಹಿಸಲು ಸೂಚನೆ
ಸಂಶಯಗೊಂಡು ವಿಚಾರಿಸಿದಾಗ ಮುಹಮ್ಮದ್ ಮಾಝಿನ್ ಆರೋಗ್ಯದಲ್ಲಿ ಏರುಪೇರು ಆಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಕೂಡಲೆ ಪೋಷಕರು ಮುಹಮ್ಮದ್ ಮಾಝಿನ್ನನ್ನು ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಖಾಸಗಿ ಆಸ್ಪತ್ರೆ ವೈದ್ಯರು ಪರೀಕ್ಷಿಸಿದಾಗ ಮುಹಮ್ಮದ್ ಮಾಝಿನ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಸರ್ಜರಿಯ ವೇಳೆ ವೈದ್ಯರು ಎಡವಟ್ಟು ಮಾಡಿದ್ದಾರೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಕದ್ರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಮಾತನಾಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ಲಿನಿಕ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಕ್ಲಿನಿಕ್ನ ವೈದ್ಯರು ಹಾಗೂ ಮುಖ್ಯಸ್ಥರಿಂದ ಪ್ರಕರಣ ಸಂಬಂಧ ಮಾಹಿತಿ ಪಡೆಯಲಾಗಿದೆ. ಸದ್ಯ ಪ್ರಾಥಮಿಕ ತನಿಖೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆ ಮಾಡುತ್ತೇವೆ ಎಂದು ಹೇಳಿದರು.
ಈ ಘಟನೆಯ ಸಮಗ್ರ ತನಿಖೆಗೆ ಆರೋಗ್ಯ ಇಲಾಖೆಯಿಂದ ಸಮಿತಿ ರಚಿಸಲಾಗುವುದು. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ವರದಿ ಸಲ್ಲಿಕೆ ಮಾಡುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ