ಗಣೇಶೋತ್ಸವಕ್ಕೆ ಸರ್ಕಾರದಿಂದ ವಿಚಿತ್ರ ನಿಯಮ, ಯಾರೂ ಪಾಲಿಸಬೇಡಿ ಎಂದು ಶಾಸಕ ವೇದವ್ಯಾಸ ಕಾಮತ್ ಕಿಡಿ
ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅರ್ಥವಿಲ್ಲದ ಷರತ್ತು ಹಾಕಿದ್ದಾರೆಂದು ಎಂದು ಮಂಗಳೂರಿನಲ್ಲಿ ಶಾಸಕ ವೇದವ್ಯಾಸ ಕಾಮತ್ ಕಿಡಿಕಾರಿದ್ದಾರೆ. ಕಳೆದ ವರ್ಷ ಇಲ್ಲದ ಷರತ್ತು ಈಗ ಏಕೆ? ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರ, ಅತಿಥಿಗಳ ಹೆಸರು, ಮೊಬೈಲ್ ಸಂಖ್ಯೆ ಏಕೆ ಬೇಕು? ನಾವು ಯಾರಿಗೂ ಯಾವ ಮಾಹಿತಿಯನ್ನೂ ನೀಡುವುದಿಲ್ಲ. ಈ ಸೂಚನೆಗಳನ್ನು ಪಾಲಿಸೋದು ಬೇಡ ಎಂದಿದ್ದಾರೆ.
ಮಂಗಳೂರು, ಸೆ.05: ಯಾವುದೇ ಭೇದವಿಲ್ಲದೆ ಸಾಮರಸ್ಯದಿಂದ ಆಚರಿಸುವ ಗಣೇಶ ಚತುರ್ಥಿ (Ganesh Chaturthi) ಹಬ್ಬಕ್ಕೆ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಆದರೆ ಕಡಲನಗರಿ ಮಂಗಳೂರಿನಲ್ಲಿ ವಿಘ್ನ ವಿನಾಯಕನ ಹಬ್ಬ ಆಚರಣೆಗೆ ಈಗ ವಿಘ್ನವೊಂದು ಎದುರಾಗಿದೆ. ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಚಿತ್ರ ವಿಚಿತ್ರ ನೀತಿ ನಿಯಮ ಹೇರುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ರಾಜ್ಯ ಸರ್ಕಾರದ (Karnataka Government) ವಿರುದ್ಧ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ (Veda Vyasa Kamath) ಕಿಡಿಕಾರಿದ್ದಾರೆ.
ರಾಜ್ಯ ಸರಕಾರ ವಿಘ್ನ ವಿನಾಯಕನಿಗೆ ಈಗ ವಿಘ್ನ ತಂದಿರಿಸಿದೆ. ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅನುಮತಿ ಕೋರಿದರೆ ಚಿತ್ರವಿಚಿತ್ರ ನಿಯಮ ಹೇರಲಾಗುತ್ತಿದೆ. ಆಯೋಜಕರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರ, ಅತಿಥಿಗಳ ಹೆಸರು, ಮೊಬೈಲ್ ಸಂಖ್ಯೆ ನೀಡಲು ಹೇಳಲಾಗುತ್ತಿದೆ. ಅವರ ವಿಳಾಸ ನೀಡಬೇಕು, ಭಾಗವಹಿಸುವ ಟ್ಯಾಬ್ಲೊಗಳ ತಂಡ ಯಾವುದು? ಸೂಚಿಸಬೇಕು. ಯಾವ ವಾಹನದಲ್ಲಿ ಬರುತ್ತಾರೆ? ಅದರ ದಾಖಲೆ ನೀಡಬೇಕು, ಲೈಸೆನ್ಸ್ ನೀಡಬೇಕು ಎಂದು ಅರ್ಥ ವಿಲ್ಲದ ಸೂಚನೆಗಳನ್ನು ಸರ್ಕಾರ ನೀಡುತ್ತಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಕಾಂಗ್ರೆಸ್ಸಿಗರಿಗೆ ಗಣೇಶನ ಮೇಲೆ, ಹಿಂದೂ ಹಬ್ಬಗಳ ಮೇಲೆ ಯಾಕಿಷ್ಟು ಕೋಪ? ಕೂಡಲೇ ಇದನ್ನೆಲ್ಲ ಬಿಟ್ಟು ಹಿಂದೂ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡಬೇಕು ಎಂದು ಮಂಗಳೂರಿನಲ್ಲಿ ವೇದವ್ಯಾಸ್ ಕಾಮತ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಗಣೇಶ ಹಬ್ಬದ ಪ್ರಸಾದ: ವಿಘ್ನಾದೇಶ ಹೊರಡಿಸುವ ಹಕೀಕತ್ತು ಏನಿದೆ? ಸಿಎಂಗೆ ಬಿಜೆಪಿ ಪ್ರಶ್ನೆ
ಇನ್ನು ಈ ಸಂಬಂಧ ಮಂಗಳೂರಿನಲ್ಲಿ ಟಿವಿ9 ಜೊತೆ ಮಾತನಾಡಿದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಹಲವು ವರ್ಷಗಳಿಂದ ಆಚರಿಸಲಾಗುತ್ತಿದೆ. ಈ ಹಿಂದೆ ಇಲ್ಲದಂತಹ ಹೊಸ ನಿಯಮವನ್ನು ಮಾಡಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿರುವ ಆಹ್ವಾನಿತರ ಹೆಸರು ಮತ್ತು ಫೋನ್ ನಂಬರ್ ಕೊಡಬೇಕಂತೆ. ಅತಿಥಿಗಳ ನಂಬರ್, ಹೆಸರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಅವಶ್ಯಕತೆ ಇಲ್ಲ. ಏನೇ ಹೆಚ್ಚು ಕಮ್ಮಿ ಆದರೂ ಗಣೇಶೋತ್ಸವ ಸಮಿತಿ ಇರುತ್ತೆ. ಸಮಿತಿಯವರನ್ನು ಪ್ರಶ್ನೆ ಮಾಡಬಹುದು. ಶೋಭಯಾತ್ರೆಯಲ್ಲಿ ಸಾಗುವ ಟ್ಯಾಬ್ಲೋ ಯಾವುದು? ವಾಹನದ ಮಾಲೀಕ ಯಾರು?ದಾಖಲೆ, ವಾಹನ ದಾಖಲೆ, ಚಾಲಕನ ದಾಖಲೆ ಬೇಕಂತೆ. ಈ ದಾಖಲೆ ಹಿಡಿದುಕೊಂಡು ಮುಂಚಿತವಾಗಿ ಪೊಲೀಸ್ ಇಲಾಖೆಗೆ ಕೊಡಬೇಕಂತೆ. ಯಾವ ಯಾವ ಟ್ಯಾಬ್ಲೋ ಬರುತ್ತೆ ಎಂದು ಮೊದಲೇ ಗೊತ್ತಾಗಲ್ಲ. ಇಲ್ಲಿವರೆಗೂ ಇದನ್ನೆಲ್ಲಾ ಕೇಳಿರಲಿಲ್ಲ. ಆದ್ರೆ ಈ ವರ್ಷ ಯಾಕೆ ಕೇಳ್ತಿದ್ದಾರೆ? ಎಂದು ಕಿಡಿಕಾರಿದ್ದಾರೆ.
ಸಮಿತಿಯವರು ಹತ್ತಾರು ಬಾರಿ ಪೊಲೀಸ್ ಸ್ಟೇಷನ್ ಗೆ ಅಲೆಯುತ್ತಿದ್ದಾರೆ. ಈ ಹೊಸ ನಿಯಮಗಳ ಜಾರಿಗೆ ಬಿಜೆಪಿ ಖಂಡಿಸುತ್ತೆ. ಹಿಂದೂ ಸಮಾಜದ ಧಾರ್ಮಿಕ ಆಚರಣೆಗೆ ತೊಂದ್ರೆ ಮಾಡೋದು ಕಾಂಗ್ರೆಸ್ ಸರ್ಕಾರದ ಡಿಎನ್ಎನಲ್ಲಿದೆ. ನಮ್ಮ ಸರ್ಕಾರ ಇದ್ದಾಗ ಈ ರೀತಿಯ ತೊಂದರೆ ಆಗಿರಲಿಲ್ಲ. ಸಾರ್ವಜನಿಕ ಗಣೇಶೋತ್ಸವ ಆಚರಣೆ ಕಡಿಮೆ ಆಗಬೇಕು. ಹಿಂದೂ ಆಚರಣೆಗಳಿಗೆ ತೊಂದ್ರೆ ಕೊಡಬೇಕೆಂದು ಕಾಂಗ್ರೆಸ್ ಈ ರೀತಿ ಮಾಡುತ್ತಿದೆ. ಕಮೀಷನರೇಟ್ ಹಾಗೂ ಜಿಲ್ಲೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ನಡೆಯುತ್ತೆ. ಈ ನಿಯಮಗಳನ್ನು ಯಾರು ಸಹ ಪಾಲಿಸಬೇಡಿ. ಸರ್ಕಾರ ಏನು ಬೇಕಾದರೂ ಹೇಳಲಿ. ನೂರು ಬಾರಿ ಓಡಾಡಿ ಕಷ್ಟ ಅನುಭವಿಸಬೇಕೆಂದು ದಾಖಲೆ ಸಂಗ್ರಹಿಸುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಈ ನಿಯಮ ಮಾಡಿದೆ. ಸಡಿಲಿಕೆ ಮಾಡದೇ ಇದ್ದರೆ ಕಳೆದ ವರ್ಷದಂತೆ ಮಾಡಿ. ಯಾವುದೇ ಇಲಾಖೆಯವರು ಬಂದರೂ ನಾವು ನಿಮ್ಮ ಜೊತೆ ಇದ್ದೇವೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ