ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಬಂಟ್ವಾಳ: ಮಸೀದಿ ಮೆಟ್ಟಿಲೇರಿ ‘ಸೀಯಾಳ’ ಸ್ವೀಕರಿಸಿದ ದೈವ

ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ನಂದಾವರದಲ್ಲಿ ಮಂಜದಗೋಳಿ ಜಾತ್ರೆಯ ಸಂದರ್ಭದಲ್ಲಿ ಅಪೂರ್ವ ಧಾರ್ಮಿಕ ಸಹಬಾಳ್ವೆ ಅನಾವರಣಗೊಂಡಿದೆ. ದೈವದ ಭಂಡಾರವು ಮಸೀದಿ ಮೆಟ್ಟಿಲೇರಿ ಸೀಯಾಳ ಸ್ವೀಕರಿಸುವ ಪ್ರಾಚೀನ ಸಂಪ್ರದಾಯ ಸಮಾಜಕ್ಕೆ ಸಾಮರಸ್ಯದ ಸಂದೇಶ ಸಾರಿದೆ. ಪ್ರತಿ ವರ್ಷ ನಡೆಯುವ ಈ ಆಚರಣೆಯ ವಿಡಿಯೋ ವೈರಲ್ ಆಗಿದ್ದು, ಧರ್ಮಗಳ ನಡುವೆ ಸೇತುವೆಯಾಗಿ ಮಾದರಿಯಾಗಿದೆ. ಮಸೀದಿ ಹಾಗೂ ದೇವಸ್ಥಾನಗಳ ನಡುವಿನ ಈ ಬಾಂಧವ್ಯ ಕರಾವಳಿಯ ಹೆಮ್ಮೆಯಾಗಿದೆ.

ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಬಂಟ್ವಾಳ: ಮಸೀದಿ ಮೆಟ್ಟಿಲೇರಿ ಸೀಯಾಳ ಸ್ವೀಕರಿಸಿದ ದೈವ
ವಿಡಿಯೋ

Updated on: Mar 20, 2026 | 7:51 AM

ಬಂಟ್ವಾಳ, ಮಾ. 20: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರದಲ್ಲಿ ಮನುಷ್ಯತ್ವ ಮತ್ತು ಧಾರ್ಮಿಕ ಸಹಬಾಳ್ವೆಯ ಸುಂದರ ದೃಶ್ಯವೊಂದು ಅನಾವರಣಗೊಂಡಿದೆ. ಅರಸರ ಕಾಲದ ಪುರಾತನ ಪರಂಪರೆಯಂತೆ, ಮಂಜದಗೋಳಿ ಜಾತ್ರೆಯ ಸಂದರ್ಭದಲ್ಲಿ ದೈವದ ಭಂಡಾರವು ಮಸೀದಿಯ ಮೆಟ್ಟಿಲೇರಿ ಸೀಯಾಳ (ಎಳನೀರು) ಸ್ವೀಕರಿಸುವ ಮೂಲಕ ಸಮಾಜಕ್ಕೆ ಸಾಮರಸ್ಯದ ಸಂದೇಶ ಸಾರಿದೆ. ಪ್ರತಿ ವರ್ಷವೂ ಈ ಆಚರಣೆಗಳು ಇಲ್ಲಿ ನಡೆಯುತ್ತ ಬಂದಿದೆ. ಮುಸ್ಲಿಂ ಧರ್ಮದ ಜನ ದೈವಗಳಿಗೆ ಈ ಮೂಲಕ ವಿಶೇಷ ಗೌರವವನ್ನು ನೀಡುತ್ತಾರೆ.

ಸಜೀಪನಡು ಮೂಲಸ್ಥಾನದಿಂದ ಮಂಜದಗೋಳಿ ಕ್ಷೇತ್ರಕ್ಕೆ ಭಂಡಾರ ಸಾಗುವ ಹಾದಿಯಲ್ಲಿ ಈ ವಿಶಿಷ್ಟ ಆಚರಣೆ ನಡೆಯುತ್ತದೆ. ನಂದಾವರ ಕೇಂದ್ರ ಜುಮಾ ಮಸೀದಿಯ ಪ್ರಮುಖರು ದೈವದ ಭಂಡಾರಕ್ಕೆ ಭಕ್ತಿಯಿಂದ ಸೀಯಾಳ ಅರ್ಪಿಸುತ್ತಾರೆ. ದೈವವು ಮಸೀದಿಯ ನಾಲ್ಕು ಮೆಟ್ಟಿಲುಗಳನ್ನು ಹತ್ತಿ ಈ ಸೇವೆಯನ್ನು ಸ್ವೀಕರಿಸುವುದು ಇಲ್ಲಿನ ವಿಶೇಷವಾಗಿದೆ.

ಇದನ್ನೂ ಓದಿ: ಒಂದು ದಿನ ಮೊದಲೇ ಕರಾವಳಿ ಭಾಗದಲ್ಲಿ ರಂಜಾನ್ ಹಬ್ಬ ಆಚರಣೆ: ಮಾ 20ರಂದು ಸಾರ್ವತ್ರಿಕ ರಜೆ ಘೋಷಣೆ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಮಂಜದಗೋಳಿ ಜಾತ್ರೆಯ ಅಂಗವಾಗಿ ನಡೆಯುವ ಈ ಸಂಪ್ರದಾಯವು ಈ ವರ್ಷವೂ (ಮಾರ್ಚ್ 17) ಅತ್ಯಂತ ಶ್ರದ್ಧೆಯಿಂದ ನೆರವೇರಿದೆ. ಇಂದಿನ ಕಾಲಘಟ್ಟದಲ್ಲಿ ಧರ್ಮಗಳ ನಡುವೆ ಗೋಡೆಗಳು ನಿರ್ಮಾಣವಾಗುತ್ತಿರುವಾಗ, ನಂದಾವರದ ಈ ಆಚರಣೆಯು ಸಹಬಾಳ್ವೆ ಮತ್ತು ಪರಸ್ಪರ ಗೌರವಕ್ಕೆ ಮಾದರಿಯಾಗಿದೆ. ಮಸೀದಿ ಹಾಗೂ ದೇವಸ್ಥಾನಗಳ ನಡುವಿನ ಈ ಅವಿನಾಭಾವ ಸಂಬಂಧ ಕರಾವಳಿಯ ಸಾಂಸ್ಕೃತಿಕ ಹೆಮ್ಮೆಯಾಗಿದೆ. ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ದೈವ ಮಸೀದಿಯ ಬಳಿ ಬಂದು, ನಿಂತು ಎಲ್ಲರಿಗೂ ಅಭಯ ನೀಡುವುದನ್ನು ಕಾಣಬಹುದು. ದೈವ ಬರುವ ಮಾರ್ಗದಲ್ಲಿ ನಿಂತು ಸಾವಿರಾರೂ ಮುಸ್ಲಿಂ ಜನರು ಭಕ್ತಿಯಿಂದ ನೋಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us