ಮೊದಲ ಮಳೆಗೆ ಕೊಚ್ಚಿಹೋಯ್ತು ರಾಷ್ಟ್ರೀಯ ಹೆದ್ದಾರಿ!: ಮೂಡುಬಿದಿರೆ ಮಿಜಾರಿನಲ್ಲಿ NH-169 ರಸ್ತೆ ಕುಸಿತ

ಮಂಗಳೂರು-ಸೋಲಾಪುರ NH-169ರಲ್ಲಿ ಮಿಜಾರು ಬಳಿ ಕಳಪೆ ಕಾಮಗಾರಿ ಬಯಲಾಗಿದೆ. ಮುಂಗಾರು ಮಳೆಯ ಮೊದಲ ಅಲೆಗೆ ರಸ್ತೆಯ ಒಂದು ಭಾಗ ಕೊಚ್ಚಿ ಹೋಗಿದ್ದು, ಅವೈಜ್ಞಾನಿಕ ಕಲ್ವರ್ಟ್ ನಿರ್ಮಾಣವೇ ಇದಕ್ಕೆ ಕಾರಣ. ವಾಹನ ಸವಾರರು ಮತ್ತು ಸ್ಥಳೀಯರು ತೀವ್ರ ಆತಂಕದಲ್ಲಿದ್ದು, ಹೆದ್ದಾರಿ ಪ್ರಾಧಿಕಾರ ತುರ್ತು ದುರಸ್ತಿ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದು ಗಂಭೀರ ದುರಂತಕ್ಕೆ ಆಹ್ವಾನ ನೀಡುತ್ತಿದೆ.

ಮೊದಲ ಮಳೆಗೆ ಕೊಚ್ಚಿಹೋಯ್ತು ರಾಷ್ಟ್ರೀಯ ಹೆದ್ದಾರಿ!: ಮೂಡುಬಿದಿರೆ ಮಿಜಾರಿನಲ್ಲಿ NH-169 ರಸ್ತೆ ಕುಸಿತ
ಮಂಗಳೂರಿನ Nh 169 ರಸ್ತೆಯಲ್ಲಿ ಕಳಪೆ ಕಾಮಗಾರಿ
Image Credit source: social Media

Updated on: Jun 06, 2026 | 7:36 PM

ಮಂಗಳೂರು, ಜೂ.6: ಕರಾವಳಿಯಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಈ ಮೊದಲು ಮಳೆಗೆ ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ-169ರ (NH-169) ಅಭಿವೃದ್ಧಿ ಕಾಮಗಾರಿಯ ಅಸಲಿ ಗುಣಮಟ್ಟ ಬಯಲಾಗಿದೆ. ಮಂಗಳೂರಿನ ಮೂಡುಬಿದಿರೆ ಸಮೀಪದ ಮಿಜಾರು ಎಂಬಲ್ಲಿ ನೆನ್ನೆ (ಜೂ.5) ಸುರಿದ ಮಳೆಗೆ ಹೆದ್ದಾರಿಯ ಒಂದು ಭಾಗ ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು, ವಾಹನ ಸವಾರರು ಮತ್ತು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಕಾಮಗಾರಿಯು ತೀರಾ ಕಳಪೆ ಹಾಗೂ ಅವೈಜ್ಞಾನಿಕವಾಗಿ ನಡೆದಿರುವುದೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸ್ಥಳೀಯರ ಪ್ರಕಾರ, ಮಳೆನೀರಿನ ಭಾರಿ ಹರಿವನ್ನು ತಡೆದುಕೊಳ್ಳಲು ಈ ಸ್ಥಳದಲ್ಲಿ ದೊಡ್ಡ ಕಲ್ವರ್ಟ್ (ಚರಂಡಿ ಸೇತುವೆ) ನಿರ್ಮಿಸಬೇಕಾಗಿತ್ತು. ಆದರೆ, ಗುತ್ತಿಗೆ ಸಂಸ್ಥೆಯು ನಿಯಮಗಳನ್ನು ಗಾಳಿಗೆ ತೂರಿ ಅತ್ಯಂತ ಸಣ್ಣ ಕಲ್ವರ್ಟ್ ಅಳವಡಿಸಿದ್ದರಿಂದ ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲದಂತಾಗಿದೆ. ಪರಿಣಾಮವಾಗಿ, ಅಪಾರ ಪ್ರಮಾಣದ ಮಳೆನೀರು ರಸ್ತೆಯ ಪಕ್ಕದಲ್ಲಿ ಶೇಖರಣೆಗೊಂಡು, ಹೆದ್ದಾರಿಯ ಅಡಿಯಲ್ಲಿದ್ದ ಮಣ್ಣು ಮತ್ತು ಜಲ್ಲಿಕಲ್ಲುಗಳನ್ನು ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಇದರಿಂದಾಗಿ ರಸ್ತೆಯ ಒಂದು ಭಾಗ ಕುಸಿದು ಬಿದ್ದಿದೆ. ತೆಂಕಮಿಜಾರು ಭಾಗದ ಇನ್ನು ಮೂರು ಕಡೆಗಳಲ್ಲಿ ಇಂತಹದ್ದೇ ಗಂಭೀರ ಸಮಸ್ಯೆಗಳು ಸೃಷ್ಟಿಯಾಗಿದ್ದು, ಹೆದ್ದಾರಿ ಕಾಮಗಾರಿಯ ಗುಣಮಟ್ಟದ ವಿರುದ್ಧ ದೊಡ್ಡ ಪ್ರಶ್ನೆಗಳು ಎದ್ದಿವೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ದಿಢೀರ್ ಮಳೆರಾಯನ ಆರ್ಭಟ!: ಮಲ್ಲೇಶ್ವರಂ, ವಿಜಯನಗರದಲ್ಲಿ ಧಾರಾಕಾರ ಮಳೆ: ಜೂನ್ 11ರವರೆಗೆ ಈ ಭಾಗದಲ್ಲೂ ಭಾರಿ ಮಳೆ

ಮುಖ್ಯಾಂಶಗಳು:

  • ಮಂಗಳೂರಿನಲ್ಲಿ ಅಭಿವೃದ್ಧಿ ಕಾಮಗಾರಿಯ ಅಸಲಿ ಗುಣಮಟ್ಟ ಬಯಲಾಗಿದೆ
  • ನೆನ್ನೆ ಸುರಿದ ಮಳೆಗೆ ಹೆದ್ದಾರಿಯ ಒಂದು ಭಾಗ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ
  • ಈ ಅವೈಜ್ಞಾನಿಕ ಕಾಮಗಾರಿಗೆ ಹೆದ್ದಾರಿ ನಿರ್ಮಾಣದ ಉಸ್ತುವಾರಿ ಹೊತ್ತಿರುವ ‘ಡಿಬಿಎಲ್ ಕಂಪನಿ
  • ಹೆದ್ದಾರಿ ಕಾಮಗಾರಿಯ ಗುಣಮಟ್ಟದ ವಿರುದ್ಧ ದೊಡ್ಡ ಪ್ರಶ್ನೆಗಳು ಎದ್ದಿವೆ

ಇಲ್ಲಿದೆ ನೋಡಿ ವಿಡಿಯೋ:

ರಸ್ತೆಯ ಪಾಯವೇ ಕೊಚ್ಚಿಹೋಗಿ ಹೆದ್ದಾರಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದರೂ, ಅದೇ ಮಾರ್ಗದಲ್ಲಿ ಲಘು ಹಾಗೂ ವಾಣಿಜ್ಯ ವಾಹನಗಳ ಸಂಚಾರ ಮುಂದುವರಿದಿದೆ. ಹರಿಯುವ ನೀರಿನ ಮಧ್ಯೆಯೇ ಸವಾರರು ಪ್ರಾಣದ ಹಂಗು ತೊರೆದು ವಾಹನ ಚಲಾಯಿಸುತ್ತಿದ್ದಾರೆ. ಮಳೆ ಹೀಗೆಯೇ ಮುಂದುವರಿದರೆ ಈ ರಸ್ತೆಯಲ್ಲಿ ದೊಡ್ಡ ದುರಂತ ನಡೆಯಲಿದೆ. ಈ ಅವೈಜ್ಞಾನಿಕ ಕಾಮಗಾರಿಗೆ ಹೆದ್ದಾರಿ ನಿರ್ಮಾಣದ ಉಸ್ತುವಾರಿ ಹೊತ್ತಿರುವ ‘ಡಿಬಿಎಲ್ ಕಂಪನಿ’ಯೇ ನೇರ ಹೊಣೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಕ್ಷಣ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು, ಮಳೆಗಾಲದ ಅವಧಿಯಲ್ಲಿ ಸಂಭವಿಸಬಹುದಾದ ಭೀಕರ ಅಪಘಾತಗಳನ್ನು ತಪ್ಪಿಸಲು ತುರ್ತು ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:29 pm, Sat, 6 June 26

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us