ಜ.26 ರಂದು ಮಂಗಳೂರಿನ ನೆಹರು ಮೈದಾನದಲ್ಲಿ ಗತಕಾಲದ ಕಾರುಗಳ ಪ್ರದರ್ಶನ
22ನೇ ವಿಂಟೇಜ್ ಕ್ಲಾಸಿಕ್ ಕಾರ್ ಮತ್ತು ಬೈಕ್ ಪ್ರದರ್ಶನ ಜನವರಿ 26 (ಗಣರಾಜ್ಯೋತ್ಸವ) ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿದೆ. ಗಣರಾಜ್ಯೋತ್ಸವ ದಿನದಂದು ನೆಹರು ಮೈದಾನದಲ್ಲಿ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಪ್ರದರ್ಶನ ನಡೆಯಲಿದೆ. ಇದರಲ್ಲಿ ಭಾಗವಹಿಸುವ ಪ್ರದರ್ಶಕರಿಗೆ ಸ್ಮರಣಿಕೆ ಮತ್ತು ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ನೀಡಲಾಗುತ್ತದೆ
ಮಂಗಳೂರು, ಜನವರಿ 03: ಹಳೇಯ ಕಾರ್ಗಳನ್ನು ನೋಡಬೇಕು, ಅವುಗಳ ಮುಂದೆ ಸೆಲ್ಫಿ ತೆಗೆದುಕೊಳ್ಳಬೇಕು ಅಂತ ಅಂದುಕೊಂಡವರಿಗೆ ಇಲ್ಲಿದೆ ಸಿಹಿ ಸುದ್ದಿ. 22ನೇ ವಿಂಟೇಜ್ ಕ್ಲಾಸಿಕ್ ಕಾರ್ ಮತ್ತು ಬೈಕ್ (Vintage Classic Car and Bike) ಪ್ರದರ್ಶನ ಜನವರಿ 26 (ಗಣರಾಜ್ಯೋತ್ಸವ) ರಂದು ಮಂಗಳೂರಿನ (Mangaluru) ನೆಹರು ಮೈದಾನದಲ್ಲಿ ನಡೆಯಲಿದೆ. ಈ ಬಗ್ಗೆ ಸಂಘಟನಾ ಸಮಿತಿ ಅಧ್ಯಕ್ಷ ಮಿಥುನ್ ರೈ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಗಣರಾಜ್ಯೋತ್ಸವ (Republic Day) ಪಥಸಂಚಲನದ ಬಳಿಕ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಹಳೇಯ ಕಾಲದ ಕಾರು, ಬೈಕ್ಗಳ ಪ್ರದರ್ಶನ ನಡೆಯಲಿದೆ ಎಂದರು. ಗಣರಾಜ್ಯೋತ್ಸವ ದಿನದಂದು ನೆಹರು ಮೈದಾನದಲ್ಲಿ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಪ್ರದರ್ಶನ ನಡೆಯಲಿದೆ. ಅಂದು ಸಾರ್ವಜನಿಕರು ಆಗಮಿಸಿ ಹಳೇ ಕಾಲದ ಕಾರುಗಳನ್ನು ನೋಡಬಹುದು ಮತ್ತು ಅವುಗಳ ಫೋಟೋ ಸೆರೆ ಹಿಡಿಯಬಹುದು. ಇಲ್ಲಿಗೆ ಬರುವ ಪ್ರತಿಯೊಂದು ಕಾರು ತನ್ನದೇ ಆದ ವಿಶಿಷ್ಟ ಕಥೆ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇನ್ನು ಇದರಲ್ಲಿ ಭಾಗವಹಿಸುವ ಪ್ರದರ್ಶಕರಿಗೆ ಸ್ಮರಣಿಕೆ ಮತ್ತು ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದು ಮಂಗಳೂರು ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಸುಧೀರ್ ಬಿ.ಕೆ. ಹೇಳಿದರು.
ಇದನ್ನೂ ಓದಿ: Lalbagh Flower Show: 2024ರ ಲಾಲ್ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ವಚನ ಸಾಹಿತ್ಯ, ಬಸವೇಶ್ವರರ ಪ್ರತಿಕೃತಿ
1906ರಲ್ಲಿ ಸೇಂಟ್ ಅಲೋಶಿಯಸ್ ಕಾಲೇಜ್ ಮ್ಯೂಸಿಯಂಗೆ ಕೊಡುಗೆಯಾಗಿ ನೀಡಲಾಗಿದ್ದ ಮತ್ತು ಪಿಎಫ್‌ಎಕ್ಸ್ ಸಲ್ಡಾನ್ಹಾ ಒಡೆತನದ ನಗರದ ಮೊದಲ ಕಾರು ಡಿ ಡಿಯೋನ್-ಬೌಟನ್ ಕೂಡ ಪ್ರದರ್ಶನದಲ್ಲಿರಲಿದೆ. ಇನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ 1948 ರ ರೋಲ್ಸ್ ರಾಯ್ಸ್ ಸಿಲ್ವರ್ ವ್ರೈತ್, 1948 ಬೆಂಟ್ಲಿ Mk VI, ಮತ್ತು 1949 ರ ಕ್ಯಾಡಿಲಾಕ್ LHD ಸೇರಿದಂತೆ ಅರೂರ್ ಕಿಶೋರ್ ರಾವ್ ಒಡೆತನದ ಕಾರುಗಳನ್ನು ಸಹ ಪ್ರದರ್ಶನಕ್ಕೆ ಇಡಲಾಗುತ್ತದೆ ಎಂದು ಮಾಧ್ಯಮ ಸಂಯೋಜಕ ಯತೀಶ್ ಬೈಕಂಪಾಡಿ ತಿಳಿಸಿದ್ದಾರೆ.
ಲ್ಯೂಕ್ ರೆಬೆಲ್ಲೊ ಎಂಬವರು ತಮ್ಮ 1925ರ ಮಾಡಲ್ ರೋಲ್ಸ್ ರಾಯ್ಸ್ ಅನ್ನು ಪ್ರದರ್ಶಿಸುತ್ತಾರೆ. ಕೃಷ್ಣಪ್ಪ ಉಚ್ಚಿಲ್ ಅವರು ವಿಂಟೇಜ್ ಫೋರ್ಡ್ ಕಾರು ಪ್ರದರ್ಶಿಸಲಿದ್ದಾರೆ. ನಾವು ಸುಮಾರು 50 ಕಾರುಗಳು ಮತ್ತು ಬೈಕ್‌ಗಳನ್ನು ಪ್ರದರ್ಶನದಲ್ಲಿ ಇಡುವ ನಿರೀಕ್ಷೆಯಿದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ