ಮಂಗಳೂರು: ಇತ್ತೀಚೆಗೆ ನಗರದಲ್ಲಿ ನಡೆದ ಗೋಲಿಬಾರ್ ಸಂದರ್ಭದಲ್ಲಿ ಸುಮಾರು 300 ಜನರಷ್ಟೇ ಇದ್ದಿದ್ದು, ಅವರನ್ನೂ ನಿಯತ್ರಿಸೋಕ್ಕೆ ಪೊಲೀಸರಿಗೆ ಆಗಲಿಲ್ವಾ? ಫೈರಿಂಗ್ ಮಾಡಿದ್ಯಾಕೆ? ಎಂದು ಖಾಸಗಿ ಕಾರ್ಯಕ್ರಮಕ್ಕೆ ನಗರಕ್ಕೆ ಆಗಮಿಸಿರುವ ಕಾಂಗ್ರೆಸ್ ಶಾಸಕ ಜಮಿರ್ ಅಹ್ಮದ್ ಪ್ರಶ್ನೆ ಎತ್ತಿದ್ದಾರೆ.
ಮಂಗಳೂರು ಈಗ ಶಾಂತಿಯುತವಾಗಿದೆ. ಘಟನೆಯ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ಸರ್ಕಾರ ಪರಿಹಾರ ಕೊಡಲ್ಲವೆಂಬುದು ಮೊದಲೇ ಗೊತ್ತಿತ್ತು. ತನಿಖೆ ಮುಗಿಯದೆ ಅವರು ಅಮಾಯಕರಲ್ಲ ಎಂದು ಹೇಳಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಹೇಗೆ ಈ ರೀತಿ ಹೇಳುತ್ತಾರೆ ಎಂದು ಮಂಗಳೂರು ಏರ್‌ಪೋರ್ಟ್‌ನಲ್ಲಿ ಜಮೀರ್ ಅಹ್ಮದ್ ಸುದ್ದಿಗಾರರ ಬಳಿ ಪ್ರಶ್ನಿಸಿದರು.
ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ರೆ ವೈಯಕ್ತಿಕ ಹೊಣೆಗಾರಿಕೆ ನಿಭಾಯಿಸಬೇಕಾಗುತ್ತದೆ ಎಂದು ಸಚಿವ ಆರ್.ಅಶೋಕ್ ಹೇಳಿರುವ ಬಗ್ಗೆಯೂ ಜಮೀರ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರಲ್ಲಿ ಯಾರು ಸಾರ್ವಜನಿಕ ಆಸ್ತಿ ಹಾಳುಮಾಡಿದ್ದಾರೆ? ಇವರು ಪ್ರತಿಭಟನೆಗೆ ಅವಕಾಶ ನೀಡಿದ್ದರೆ ಹೀಗ್ಯಾಕಾಗುತ್ತಿತ್ತು? ಸಾರ್ವಜನಿಕ ಆಸ್ತಿಪಾಸ್ತಿಯನ್ನು ಏಕೆ ಹಾಳು ಮಾಡುತ್ತಿದ್ದರು? ಪ್ರತಿಪಕ್ಷವಾಗಿ ಇದನ್ನು ನಾವ್ಯಾರೂ ಒಪ್ಪುವುದಿಲ್ಲ ಎಂದು ಜಮೀರ್ ಗುಡುಗಿದ್ದಾರೆ.