Praveen Nettar: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಬೆಂಗಳೂರಿನ ಇಬ್ಬರು ಸೇರಿ ಒಟ್ಟು 40 ಬಂಧನ, ಕರಾವಳಿಗೆ ಡಿಜಿಪಿ ಪ್ರವೀಣ್ ಸೂದ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 01, 2022 | 12:07 PM

ಕರಾವಳಿಯಲ್ಲಿ ಸರಣಿ ಹತ್ಯೆಗಳು ನಡೆದ ಹಿನ್ನೆಲೆಯಲ್ಲಿ ಇಂದು ಮಂಗಳೂರು ಮತ್ತು ಉಡುಪಿಗೆ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ (ಡಿಜಿ ಮತ್ತು ಐಜಿಪಿ) ಪ್ರವೀಣ್ ಸೂದ್ ಭೇಟಿ ನೀಡಿದ್ದಾರೆ.

Praveen Nettar: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಬೆಂಗಳೂರಿನ ಇಬ್ಬರು ಸೇರಿ ಒಟ್ಟು 40 ಬಂಧನ, ಕರಾವಳಿಗೆ ಡಿಜಿಪಿ ಪ್ರವೀಣ್ ಸೂದ್
ಮೃತ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು
Follow us on

ಮಂಗಳೂರು: ಸುಳ್ಯ ತಾಲ್ಲೂಕು ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಇಬ್ಬರು ಸೇರಿದಂತೆ ಒಟ್ಟು 40 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗಸ್ತುವಾಹನಗಳನ್ನು ಹೆಚ್ಚಿಸುವಂತೆ ಸೂಚನೆ ನೀಡಿರುವ ಅವರು, ನಾಗರಿಕರು ಸಹ ಪೊಲೀಸರಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಕೋರಿದ್ದಾರೆ.

ಸರಣಿ ಕೊಲೆಗಳ ತನಿಖೆಯು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಮಸೂದ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಪೈಕಿ ಪ್ರಮುಖರು ಸಿಕ್ಕಿದ್ದಾರೆ. ಉಳಿದವರನನ್ನು ಶೀಘ್ರ ಬಂಧಿಸುತ್ತೇವೆ. ಫಾಜಿಲ್ ಹತ್ಯೆಗೆ ಬಳಸಿದ ಕಾರನ್ನು ವಶಕ್ಕೆ ಪಡೆದಿದ್ದೇವೆ. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನೂ ಬಂಧಿಸಲಾಗಿದೆ. ಸಾರ್ವಜನಿಕರು ಸಹಕರಿಸಿದರೆ ಮಾತ್ರ ಈ ಪ್ರಕರಣವನ್ನು ಶೀಘ್ರ ಭೇದಿಸಬಹುದು. ಗಡಿಭಾಗದಲ್ಲಿ ಚೆಕ್​ಪೋಸ್ಟ್​ಗಳನ್ನು ಬಿಗಿಗೊಳಿಸಲಾಗುತ್ತದೆ ಎಂದು ಹೇಳಿದರು.

ಸರ್ಕ್ಯೂಟ್​ ಹೌಸ್​ನಲ್ಲಿ ಅಧಿಕಾರಿಗಳ ಜೊತೆ ತನಿಖಾ ಪ್ರಗತಿ ಕುರಿತು ಸಭೆ ನಡೆಸಿದ ಅವರು, ಅಗತ್ಯ ಮಾಹಿತಿ ಪಡೆದುಕೊಂಡರು. ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಎಸ್​ಪಿ ಋಷಿಕೇಶ್ ಸೋನಾವಣೆ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರವೀಣ್ ಸೂದ್ ಅವರಿಗೆ ವರದಿ ನೀಡಿದರು.

ಪ್ರವೀಣ ನೆಟ್ಟಾರ್ ಹತ್ಯೆಗೆ ಕಾರಣವಾದ ಅಂಶಗಳು, ತನಿಖೆಯ ಪ್ರಗತಿ, ಫಾಝಿಲ್ ಹತ್ಯೆಯ ತನಿಖೆಯ ಪ್ರಗತಿ ಬಗ್ಗೆ ಮಾಹಿತಿ ಡಿಜಿಪಿ ಮಾಹಿತಿ ಪಡೆದರು. ಇದೇ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಪೊಲೀಸ್ ಬಂದೋಬಸ್ತ್ ಕುರಿತು ವಿಸ್ತೃತ ಚರ್ಚೆ ನಡೆಯಿತು.

ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಪರಿಸ್ಥಿತಿಯ ಪರಿಶೀಲನೆಗೆಂದು ನಾನು ಬಂದಿದ್ದೇನೆ. ಈಗ ನಡೆದಿರುವ ಕೊಲೆಗಳ ತನಿಖೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಮಸೂದ್ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಹತ್ಯೆ ಆರೋಪಿಗಳಲ್ಲಿ ಪ್ರಮುಖರು ಸಿಕ್ಕಿಬಿದ್ದಿದ್ದಾರೆ. ಉಳಿದವರನ್ನು ಶೀಘ್ರದಲ್ಲೇ ಬಂಧಿಸುತ್ತೇವೆ. ನಮಗೆ ಎನ್ಐಎ ಮೊದಲಾದ ಏಜೆನ್ಸಿಗಳು ಸಹಕರಿಸುತ್ತಿವೆ. ಫಾಸಿಲ್ ಹತ್ಯೆಗೆ ಬಳಸಲಾದ ಕಾರು ವಶಪಡಿಸಿಕೊಂಡಿದ್ದು, ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದರು.

ಈ ಕೊಲೆಗಳ ಮಧ್ಯೆ ಏನಾದರೂ ಸಂಬಂಧವಿದೆಯೇ ಅಥವಾ ಇಲ್ಲವೇ ಎನ್ನುವ ಬಗ್ಗೆ ಈ ಹಂತದಲ್ಲಿ ಏನೂ ಹೇಳಲು ಸಾಧ್ಯವಿಲ್ಲ. ಶವಗಳಿಗೆ ಯಾವುದೇ ಜಾತಿ ಇರುವುದಿಲ್ಲ. ಎಲ್ಲಾ ಸಾವುಗಳು ನಮಗೆ ಒಂದೇ. ಈ ರೀತಿಯ ಘಟನೆಗಳು ನಡೆದಾಗ ಪಬ್ಲಿಕ್ ಇಂಟೆಲಿಜೆನ್ಸ್ ನಮಗೆ ಸಹಕರಿಸಬೇಕು. ಘಟನೆಯನ್ನು ನೋಡಿದವರು ಆರೋಪಿಗಳ ಪರಿಚಯ ಇರುವವರು ಇಲಾಖೆಗೆ ಸಹಕರಿಸಬೇಕು. ಕೇರಳ ಗಡಿಭಾಗದಲ್ಲಿ ಚೆಕ್ ಪೋಸ್ಟ್​ಗಳನ್ನು ಬಿಗಿಗೊಳಿಸಲಾಗಿದೆ ಎಂದು ತಿಳಿಸಿದರು.

Published On - 11:30 am, Mon, 1 August 22