ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದ ಮಂಗಳೂರಿನ ರೆಮೊನಾ; ಬಾಲಕಿಯ ಸಾಧನೆ ಏನು? ಇಲ್ಲಿದೆ ವಿವರ
Mangaluru: ಸದ್ಯ ರೆಮೊನಾ ತನ್ನ ಸಾಧನೆ ಮೂಲಕ ದೇಶಾದ್ಯಂತ ಸದ್ದು ಮಾಡಿದ್ದಾಳೆ. ಈಕೆಯ ಭವಿಷ್ಯದಲ್ಲಿ ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ಉಚಿತವಾಗಿ ನೃತ್ಯ ಕಲಿಸುವ ಕನಸಿಗೆ ಆಲ್ ದ ಬೆಸ್ಟ್ ಹೇಳೋಣ.
ಮಂಗಳೂರು: ಕೇಂದ್ರ ಸರಕಾರ ನೀಡುವ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವು ಕರ್ನಾಟಕದ ಕರಾವಳಿಯ ಬಾಲಕಿಗೂ ಲಭಿಸಿದೆ. ದೇಶದಲ್ಲಿ ಒಟ್ಟು 32 ಮಕ್ಕಳು ಈ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ಕರಾವಳಿಯ ಓರ್ವ ಬಾಲಕಿಯ ಸಾಧನೆಗೂ ಪ್ರಶಸ್ತಿ ದೊರಕಿದೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡುವ ಅವಕಾಶ ಈ ಬಾಲಕಿಗೂ ಲಭಿಸಿದೆ. ಅದರಲ್ಲೂ ವಿಶೇಷ ಎಂಬಂತೆ, ಕರ್ನಾಟಕದವರ ಪೈಕಿ ಮೋದಿ ಜೊತೆ ಮಾತನಾಡುವ ಅವಕಾಶ ಈ ಬಾಲಕಿಗೆ ಮಾತ್ರ ಸಿಕ್ಕಿದೆ.
ಗಾಜಿನ ಚೂರುಗಳ ಮೇಲೂ ಡ್ಯಾನ್ಸ್ ಮಾಡಬಲ್ಲ ಡೇರಿಂಗ್ ಡ್ಯಾನ್ಸರ್, ತಲೆ ಮೇಲೆ ಬೆಂಕಿಯನ್ನಿರಿಸಿಕೊಂಡು ಸ್ಟೆಪ್ ಹಾಕಲು ಸೈ ಎನಿಸಿಕೊಂಡಿರೋ ಕರಾವಳಿ ಬೆಡಗಿ ಈಕೆ. ಭರತನಾಟ್ಯ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳಲ್ಲಿ ಸಾಧನೆ ಮಾಡಿರುವ ಈ ಬಾಲಕಿಯ ಹೆಸರು ರೆಮೊನಾ ಇವೆಟ್ಟೆ ಪೆರೇರಿಯಾ. 17 ವರ್ಷದ ಈ ಬಾಲಕಿ ಮಂಗಳೂರು ನಿವಾಸಿ. 2022 ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಭಾಜನಳಾಗಿದ್ದಾಳೆ.
ಹೌದು. ಇಂದು ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಈಕೆ ಪ್ರಶಸ್ತಿ ಸ್ವೀಕರಿಸಿದ್ದಾಳೆ. ಮೋದಿ ಜೊತೆ ಸಂವಾದ ಮಾಡಿದ ರೆಮೊನಾ ಬಳಿಕ ಟಿವಿ9 ಜೊತೆ ಮಾತನಾಡಿದ್ದಾಳೆ. 13 ವರ್ಷದ ಸಾಧನೆ ಬಗ್ಗೆ ಪ್ರಾಧಾನಿ ಕೇಳಿದ್ರು. ಇನ್ನು ಸಾಧನೆ ಮಾಡಲು ಎದುರಾದ ಕಷ್ಟದ ಬಗ್ಗೆ ಕೇಳಿದ್ರು. ಭವಿಷ್ಯದ ಪ್ಲಾನ್ ಬಗ್ಗೆ ಕೇಳಿದಾಗ, ಆರ್ಥಿಕವಾಗಿ ಸಬಲರಾಗಿಲ್ಲದ ಪ್ರತಿಭಾವಂತರಿಗೆ ಡ್ಯಾನ್ಸ್ ಕಲಿಕೆ ಮತ್ತು ಗಿನ್ನಿಸ್ ರೆಕಾರ್ಡ್ ಮಾಡುವ ಪ್ಲಾನ್ ಇದೆ ಅಂತಾ ಹೇಳಿದ್ದಾಗಿ ತಿಳಿಸಿದ್ದಾಳೆ.
ರೆಮೊನಾ ಅಂತಿಂತಾ ಡ್ಯಾನ್ಸರ್ ಅಲ್ಲ. ಈಕೆಯ ಡ್ಯಾನ್ಸ್ಗೆ ಫಿಧಾ ಆಗದವರೇ ಇಲ್ಲ. ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಮೊನಾ ತನ್ನ ಡ್ಯಾನ್ಸ್ ಫರ್ಪಾರ್ಮೆನ್ಸ್ ನೀಡಿದ್ದಾಳೆ. 2017 ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2021 ರಲ್ಲಿ ಬಾಲ ಗೌರವ ಪ್ರಶಸ್ತಿ. ಸೇರಿದಂತೆ ಇಂಡಿಯಾ ಬುಕ್ ಆಫ್ ರೆಕಾರ್ಡ್, ಭಾರತ್ ಬುಕ್ ಆಫ್ ವರ್ಡ್ ರೆಕಾರ್ಡ್, ಗೋಲ್ಡನ್ ಬುಕ್ ಆಫ್ ವರ್ಡ್ ರೆಕಾರ್ಡ್ ಆಫ್ ಲಂಡನ್, ಮ್ಯಾಜಿಕ್ ಬುಕ್ ಆಫ್ ರೆಕಾರ್ಡ್ ಪಡೆದಿದ್ದಾರೆ. ಇನ್ನು ಜಿಲ್ಲಾ ಪಂಚಾಯತ್ ಸಿಇಓ ಕುಮಾರ್ ಈ ಹಿನ್ನೆಲೆಯಲ್ಲಿ ರೆಮೊನಾಗೆ ಸನ್ಮಾನ ಮಾಡಿದ್ದಾರೆ. ಕಳೆದ ವರ್ಷ ಇದೇ ಪ್ರಶಸ್ತಿ ಪಡೆದ ರಾಕೇಶ್ ಕೃಷ್ಣಗೂ ಇದೇ ವೇಳೆ ಸನ್ಮಾನ ಮಾಡಲಾಗಿದೆ.
ಸದ್ಯ ರೆಮೊನಾ ತನ್ನ ಸಾಧನೆ ಮೂಲಕ ದೇಶಾದ್ಯಂತ ಸದ್ದು ಮಾಡಿದ್ದಾಳೆ. ಈಕೆಯ ಭವಿಷ್ಯದಲ್ಲಿ ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ಉಚಿತವಾಗಿ ನೃತ್ಯ ಕಲಿಸುವ ಕನಸಿಗೆ ಆಲ್ ದ ಬೆಸ್ಟ್ ಹೇಳೋಣ.
ವಿಶೇಷ ವರದಿ: ಪೃಥ್ವಿರಾಜ್ ಬೊಮ್ಮನಕೆರೆ, ಟಿವಿ9 ಮಂಗಳೂರು
ಇದನ್ನೂ ಓದಿ: Padma awards 2022: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಅಮೈ ಮಹಾಲಿಂಗ ನಾಯ್ಕರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
Published On - 3:34 pm, Wed, 26 January 22