ಮಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್(Nalin Kumar Kateel), ಸಚಿವ ಸುನಿಲ್ ಕುಮಾರ್(Sunil Kumar) ಸೇರಿದಂತೆ ಹಲವು ನಾಯಕರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮಕ್ಕೆ ಭೇಟಿ ನೀಡಿ ಮೃತ ಪ್ರವೀಣ್ ನೆಟ್ಟಾರು(Praveen Nettar) ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲು ಯತ್ನಿಸಿದರು. ಈ ವೇಳೆ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಉದ್ವಿಗ್ನಗೊಂಡು ನಳಿನ್ ಕುಮಾರ್ ಕಟೀಲ್ ಕಾರಿನ ಮೇಲೆ ಮುಗಿಬಿದ್ದರು. ‘ಶರತ್ ಮಡಿವಾಳರ ಹತ್ಯೆ ಪ್ರಕರಣದಲ್ಲಿ ಏನು ಮಾಡಿದಿರಿ’ ಎಂದು ಆಕ್ರೋಶದಿಂದ ಪ್ರಶ್ನಿಸಿದರು. ಕಾರನ್ನು ಪಲ್ಟಿ ಮಾಡಲೂ ಕೆಲವರು ಯತ್ನಿಸಿ, ಟೈರ್ಗಳಿಂದ ಗಾಳಿ ಹೊರಬಿಟ್ಟರು. ಪರಿಸ್ಥಿತಿ ಕೈಮೀರುವುದು ಮನಗಂಡ ಪೊಲೀಸರು ಲಾಠಿ ಚಾರ್ಜ್ ಮಾಡಿ ಗುಂಪು ಚೆದುರಿಸಿದರು. ಪೊಲೀಸ್ ಭದ್ರತೆಯಲ್ಲಿಯೇ ನಳಿನ್ ಕುಮಾರ್ ಕಟೀಲ್ ಸ್ಥಳದಿಂದ ಹೊರನಡೆದರು.
ಪೊಲೀಸರೊಂದಿಗೆ ಕಾರ್ಯಕರ್ತರು ವಾಗ್ವಾದಕ್ಕಿಳಿದರು. ‘ಬೇಕೇ ಬೇಕು, ನ್ಯಾಯ ಬೇಕು’ ಎಂಬ ಘೋಷಣೆ ಮೊಳಗಿಸಿದರು. ಬೆಳ್ಳಾರೆ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಬಿಗಿ ಬಂದೋಬಸ್ತ್ ಹಾಕಲಾಗಿದೆ. ಅಂಗಡಿಗಳನ್ನು ಮುಚ್ಚಿಸುತ್ತಿರುವ ಪೊಲೀಸರು ಗುಂಪು ಸೇರಿದ್ದ ಕಾರ್ಯಕರ್ತರನ್ನು ಲಾಠಿ ಬೀಸಿ ಚೆದುರಿಸುತ್ತಿದ್ದಾರೆ. ಇನ್ನು ಘಟನೆಯಲ್ಲಿ ಹಿಂದೂ ಕಾರ್ಯಕರ್ತನ ತಲೆಗೆ ಗಾಯಗಳಾಗಿದ್ದು ಗಾಯಾಳು ಕಾರ್ಯಕರ್ತನನ್ನ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೊಲೀಸರ ವಿರುದ್ಧ ಹಿಂದೂ ಕಾರ್ಯಕರ್ತರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬೆಳ್ಳಾರೆ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿಲಾಗಿದೆ. ನಿಷೇಧಾಜ್ಞೆ ಜಾರಿ ಬಗ್ಗೆ ಪೊಲೀಸರು ಅನೌನ್ಸ್ ಮಾಡ್ತಿದ್ದಾರೆ. ಅದರೂ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದು ಸದ್ಯ ಬೆಳ್ಳಾರೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
Published On - 2:34 pm, Wed, 27 July 22