ಮಂಗಳೂರು: ದುಷ್ಕರ್ಮಿಗಳಿಂದ ಕೊಲೆಯಾದ ಸುಳ್ಯ ತಾಲ್ಲೂಕಿನ ಬೆಳ್ಳಾರೆ ಗ್ರಾಮದ ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು (Praveen Nettar Murder) ಸ್ವಭಾವತಃ ಮೃದುಹೃದಯಿಯಾಗಿದ್ದರು ಎಂದು ಅವರ ಒಡನಾಡಿಗಳು ನೆನಪಿಸಿಕೊಂಡಿದ್ದಾರೆ. ಪ್ರಾಣಿಗಳ ಸಂಕಷ್ಟಕ್ಕೆ ಮಿಡಿಯುತ್ತಿದ್ದ ಅವರು, ಹಲವು ಮೂಕ ಪ್ರಾಣಿಗಳಿಗೆ ಕಾಯಕಲ್ಪ ಕಲ್ಪಿಸಿದ್ದರು. ಪ್ರವೀಣ್ ಅವರು ಜುಲೈ 4ರಂದು ಹಾಕಿಕೊಂಡಿದ್ದ ಫೇಸ್ಬುಕ್ ಪೋಸ್ಟ್ ಒಂದು ಇದೀಗ ವೈರಲ್ ಆಗುತ್ತಿದೆ. 127ಕ್ಕೂ ಹೆಚ್ಚು ಮಂದಿ ಶೇರ್ ಮಾಡಿಕೊಂಡಿರುವ ಈ ಪೋಸ್ಟ್ಗೆ 560ಕ್ಕೂ ಹೆಚ್ಚು ಲೈಕ್ ಮತ್ತು 92 ಕಾಮೆಂಟ್ ಸಿಕ್ಕಿದೆ. ಪ್ರಾಣಿಗಳ ಕಷ್ಟ, ಬುದ್ಧಿವಂತಿಕೆ, ರಕ್ಷಣೆ ಬಿಂಬಿಸುವ ಹಲವು ವಿಡಿಯೊ ಮತ್ತು ಫೋಟೊಗಳನ್ನೂ ಪ್ರವೀಣ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು.
‘ನಿನ್ನೆ ರಾತ್ರಿ ನಾನು ಸುಳ್ಯ ತಾಲೂಕಿನ ಬೆಳ್ಳಾರೆಯಿಂದ ಕೋಟೆಮುಂಡುಗಾರುಗೆ ಹೋಗುತ್ತಿದ್ದೆ. ಜೋರು ಗಾಳಿ ಮಳೆಗೆ ಕಳಂಜ ಕ್ರಾಸ್ ರಸ್ತೆ ಬದಿಯಲ್ಲಿ ಕಂಡು ಬಂದ ದೃಶ್ಯ ಇದು. ಗಾಳಿ ಮಳೆಗೆ ಕಂಗಾಲಾಗಿದ್ದ ಈ ಜೀವಗಳು ಬೈಕಿನ ಲೈಟು (ಬೆಳಕು) ನೋಡಿ ಹತ್ತಿರ ಬಂದು ರಕ್ಷಣೆಗಾಗಿ ಅದರದ್ದೇ ಭಾಷೆಯಲ್ಲಿ ಕಾಡಿಬೇಡಿಕೊಂಡ ದೃಶ್ಯ ಎಂತಹ ಕಲ್ಲುಹೃದಯವನ್ನು ಕೂಡ ಕರಗಿಸುವ ಹಾಗಿತ್ತು.
‘ಈ ಮೂಕ ಮುಗ್ಧ ಪ್ರಾಣಿಗಳನ್ನು ಇಂತಹ ಜೋರು ಗಾಳಿ ಮಳೆಯ ಸಂಧರ್ಭ ಜನರಹಿತವಾದ ರಸ್ತೆಯಲ್ಲಿ ಬಿಟ್ಟುಹೋಗುವಂತಹ ದಯೆ, ಕನಿಕರ ಇಲ್ಲದ ಹೀನಾಯ ಮನಸ್ಥಿತಿಯ ಆ ಕೊಳಕು ಹೊಲಸು ಜೀವಿಗಳು ಮುಂದೊಂದು ದಿನ ಖಂಡಿತವಾಗಿಯೂ ನರಕ ಯಾತನೆ ಅನುಭವಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಒಂದು ವೇಳೆ ಯಾರಾದರೂ ಈ ರೀತಿಯಲ್ಲಿ ಬಿಡಲೇಬೇಕಂತಿದ್ದರೆ ಆ ಪುಟ್ಟ ಮರಿಗಳ ಜೊತೆಗೆ ಅದರ ತಾಯಿಯನ್ನು ಕೂಡ ರಸ್ತೆಬದಿಯಲ್ಲಿ ಜೊತೆಗೆ ಬಿಡಿ, ಅವು ಹೇಗಾದರೂ ಬದುಕಿಕೊಳ್ಳುತ್ತವೆ. ಈಗ ಆ ಪುಟ್ಟಮರಿಗಳು ನನ್ನ ಮಿತ್ರನ ಮನೆಯಲ್ಲಿ ಸುರಕ್ಷಿತವಾಗಿದೆ. ಬದುಕಿಸಿದ್ದೇವೆ ಎಂಬ ಜಂಬ, ಹೆಮ್ಮೆ ನಮ್ಮದು’ ಎಂದು ಪ್ರವೀಣ್ ಬರೆದುಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಹಲವರು, ತಮ್ಮ ಬದುಕಿನಲ್ಲಿ ಎದುರಾದ ಇಂಥದ್ದೇ ಸಂದರ್ಭಗಳನ್ನು ನೆನಪಿಸಿಕೊಂಡಿದ್ದರು. ಹರಿಣಿ ಉದಯ್ ಎನ್ನುವವರು ತಾವು 12 ಮರಿಗಳನ್ನು ರಕ್ಷಿಸಿದ್ದು ನೆನಪಿಸಿಕೊಂಡಿದ್ದರೆ, ಸುಧೀರ್ ಕುಮಾರ್ ಎನ್ನುವವರು ಇನ್ನೂ ಭೀಕರ ಘಟನೆಯೊಂದನ್ನು ಬರೆದಿದ್ದರು. ‘ತಾಯಿಗೆ ಯಾರೋ ಅನ್ನದ ಜೊತೆ ಗ್ಲಾಸ್ ತುಂಡುಗಳನ್ನು ಹಾಕಿ ಸಾಯಿಸಲು ಪ್ರಯತ್ನಿಸಿದ್ದರು. ಕುತ್ತಿಗೆಯ ಭಾಗ ಸಂಪೂರ್ಣ ಕೊಳೆತು ಹೋಗಿ ಸತ್ತು ಹೋಯಿತು. ಅದರ ಮರಿಯನ್ನು ಈಗಲೂ ಮನೆಯಲ್ಲಿ ಸಾಕುತ್ತಿದ್ದೇವೆ’ ಎಂದು ಅವರು ಹೇಳಿದ್ದರು. ‘ಜೀವಪರ ಕಾಳಜಿಗೆ ಅಭಿನಂದನೆಗಳು’ ಎಂದು ಹಲವರು ಪ್ರವೀಣ್ ಅವರನ್ನು ಅಭಿನಂದಿಸಿದ್ದರು.