Praveen Nettar: ಸಮಾಜಕ್ಕೆ ದುಡಿದವರು ನನ್ನ ಗಂಡ, ಇಂಥ ಪರಿಸ್ಥಿತಿ ಇನ್ಯಾರಿಗೂ ಬರಬಾರದು: ಮೃತ ಪ್ರವೀಣ್ ಪತ್ನಿ ನೂತನಾ
ನನ್ನ ಪತಿಯಂತೆಯೇ ಎಷ್ಟೋ ಮಹಿಳೆಯರ ಗಂಡಂದಿರು ಸಮಾಜಕ್ಕಾಗಿ ದುಡಿಯುತ್ತಿದ್ದಾರೆ. ನನ್ನ ಗಂಡನಿಗೆ ಆದ ರೀತಿ ಯಾರಿಗೂ ಆಗಬಾರದು ಎಂದು ಅವರು ಕಂಬನಿ ಮಿಡಿದರು.
ಮಂಗಳೂರು: ನನ್ನ ಗಂಡ ಸಮಾಜಕ್ಕಾಗಿ ಬಹಳಷ್ಟು ದುಡಿದಿದ್ದಾರೆ. ಅವರಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದು. ಆರೋಪಿಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವ ವೈದ್ಯರಿಗೂ ನನ್ನ ಗಂಡನನ್ನು ಉಳಿಸಲು ಆಗಲಿಲ್ಲ ಎಂದು ದುಷ್ಕರ್ಮಿಗಳಿಂದ ಕೊಲೆಯಾದ ಬೆಳ್ಳಾರೆಯ ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನಾ ಒತ್ತಾಯಿಸಿದರು. ನನ್ನ ಗಂಡನಂತೆಯೇ ಸಮಾಜಕ್ಕಾಗಿ ಶ್ರಮಿಸುವವರು ಎಷ್ಟೋ ಜನರಿದ್ದಾರೆ. ಅವರಿಗೆ ಆದ ಅನ್ಯಾಯ ಇನ್ಯಾರಿಗೂ ಆಗುವುದು ಬೇಡ. ನನ್ನ ಗಂಡನನ್ನು ಇನ್ಯಾರೂ ವಾಪಸ್ ಕೊಡುವುದಿಲ್ಲ. ಆದರೆ ಮುಂದೆ ಯಾರಿಗೂ ಹೀಗೆ ಆಗದಂತೆ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರವೀಣ್ ಅವರ ಮನೆಯಲ್ಲಿ ಕುಟುಂಬ ಸದಸ್ಯರಲ್ಲಿ ದುಃಖ ಮಡುಗಟ್ಟಿದೆ. ಮೂರು ವರ್ಷಗಳ ಹಿಂದಷ್ಟೇ ಪ್ರವೀಣ್ ನೆಟ್ಟಾರ್ ಮತ್ತು ನೂತನಾ ಅವರ ಮದುವೆಯಾಗಿತ್ತು. ಸಂಬಂಧಿಕರು ಮತ್ತು ಹಿತೈಷಿಗಳು ನೂತನಾ ಅವರನ್ನು ಸಂತೈಸಲು ಯತ್ನಿಸುತ್ತಿದ್ದಾರೆ.
‘ನನ್ನ ಪತಿಯು ಹಗಲುರಾತ್ರಿ ಸಮಾಜಕ್ಕಾಗಿ ದುಡಿಯುತ್ತಿದ್ದರು. ಎಷ್ಟೊತ್ತಿಗೆ ಯಾರು ಕರೆದರೂ ಹೋಗುತ್ತಿದ್ದರು. ನಾನು ಬೇಡ ಅಂದ್ರೂ, ಅವರ ಅಪ್ಪ ಅಮ್ಮ ಬೇಡ ಅಂದ್ರೂ ಕೇಳುತ್ತಿರಲಿಲ್ಲ. ಇವತ್ತು ಅವರನ್ನು ಕಳೆದುಕೊಂಡಿದ್ದೇನೆ. ನನಗೆ ಅವರನ್ನು ಕೊಡುವವರು ಯಾರು. ಅವರು ಸಮಾಜಕ್ಕೆ ಏನೆಲ್ಲಾ ಮಾಡಿದರು ಆದರೆ ಅವರಿಗೆ ಸಮಾಜ ಏನೂ ಮಾಡಲಿಲ್ಲ. ನನ್ನ ಗಂಡನ ಜೀವ ಉಳಿಸಲು ಯಾರಿಂದಲೂ ಆಗಲಿಲ್ಲ’ ಎಂದು ನೂತನಾ ಕಣ್ಣೀರಿಟ್ಟರು.
‘ನನ್ನ ಪತಿಯಂತೆಯೇ ಎಷ್ಟೋ ಮಹಿಳೆಯರ ಗಂಡಂದಿರು ಸಮಾಜಕ್ಕಾಗಿ ದುಡಿಯುತ್ತಿದ್ದಾರೆ. ಅವರು ಒಬ್ಬರಿಗೆ ಮಗನಾಗಿರುತ್ತಾರೆ, ಒಬ್ಬರ ಅಪ್ಪನಾಗಿರುತ್ತಾರೆ. ನನ್ನ ಗಂಡನಿಗೆ ಆದ ರೀತಿ ಯಾರಿಗೂ ಆಗಬಾರದು. ಎಷ್ಟೋ ಜನ ಪಾಪದವರು ಸಮಾಜ ಸಮಾಜ ಎಂದು ದುಡಿಯುತ್ತಿದ್ದಾರೆ. ಅವರಿಗೆ ಅನ್ಯಾಯ ಆಗುವುದು ಬೇಡ. ಸರ್ಕಾರ ಹಾಗೆ ಏನಾದರೂ ಮಾಡಬೇಕು’ ಎಂದು ಅವರು ಕಣ್ಣೀರಿಡುತ್ತಲೇ ಒತ್ತಾಯಿಸಿದರು.
ಐವರು ಶಂಕಿತರು ಪೊಲೀಸರ ವಶಕ್ಕೆ
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸರು ಐವರು ಶಂಕಿತರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ಆರಂಭಿಸಿದ್ದಾರೆ. ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಈ ಘಟನೆ ಸಂಭವಿಸಿದ್ದು, ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಮೃತ ಪ್ರವೀಣ್ ನೆಟ್ಟಾರು ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದರು.
ಪ್ರವೀಣ್ ಅವರನ್ನು ಹತ್ಯೆ ಮಾಡಲು ಬಂದಿದ್ದ ದುಷ್ಕರ್ಮಿಗಳ ಬೈಕ್ ನಂಬರ್ ಕೇರಳದ ನೋಂದಣಿ ಸಂಖ್ಯೆ ಹೊಂದಿತ್ತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ನಾಯಿಮರಿಗಳ ಪ್ರಾಣ ಉಳಿಸಿದ್ದ ಪ್ರವೀಣ್ ನೆಟ್ಟಾರ್
ದುಷ್ಕರ್ಮಿಗಳಿಂದ ಕೊಲೆಯಾದ ಸುಳ್ಯ ತಾಲ್ಲೂಕಿನ ಬೆಳ್ಳಾರೆ ಗ್ರಾಮದ ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು (Praveen Nettar Murder) ಸ್ವಭಾವತಃ ಮೃದುಹೃದಯಿಯಾಗಿದ್ದರು ಎಂದು ಅವರ ಒಡನಾಡಿಗಳು ನೆನಪಿಸಿಕೊಂಡಿದ್ದಾರೆ. ಪ್ರಾಣಿಗಳ ಸಂಕಷ್ಟಕ್ಕೆ ಮಿಡಿಯುತ್ತಿದ್ದ ಅವರು, ಹಲವು ಮೂಕ ಪ್ರಾಣಿಗಳಿಗೆ ಕಾಯಕಲ್ಪ ಕಲ್ಪಿಸಿದ್ದರು. ಪ್ರವೀಣ್ ಅವರು ಜುಲೈ 4ರಂದು ಹಾಕಿಕೊಂಡಿದ್ದ ಫೇಸ್ಬುಕ್ ಪೋಸ್ಟ್ ಒಂದು ಇದೀಗ ವೈರಲ್ ಆಗುತ್ತಿದೆ. 127ಕ್ಕೂ ಹೆಚ್ಚು ಮಂದಿ ಶೇರ್ ಮಾಡಿಕೊಂಡಿರುವ ಈ ಪೋಸ್ಟ್ಗೆ 560ಕ್ಕೂ ಹೆಚ್ಚು ಲೈಕ್ ಮತ್ತು 92 ಕಾಮೆಂಟ್ ಸಿಕ್ಕಿದೆ. ಪ್ರಾಣಿಗಳ ಕಷ್ಟ, ಬುದ್ಧಿವಂತಿಕೆ, ರಕ್ಷಣೆ ಬಿಂಬಿಸುವ ಹಲವು ವಿಡಿಯೊ ಮತ್ತು ಫೋಟೊಗಳನ್ನೂ ಪ್ರವೀಣ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು.
Published On - 12:57 pm, Wed, 27 July 22