ದೇವಾಲಯದಲ್ಲಿ ಕೇಸರಿ ಧ್ವಜ ಹಾರಿಸಬೇಡಿ ಎಂದ ಕಾಂಗ್ರೆಸ್ನ ಮಾಜಿ ಸಚಿವ
ಮಾಜಿ ಸಚಿವ ರಮಾನಾಥ ರೈ ಅವರು ದೇವಸ್ಥಾನಗಳಲ್ಲಿ ಕೇಸರಿ ಸೇರಿದಂತೆ ಯಾವುದೇ ರಾಜಕೀಯ ಧ್ವಜ ಹಾರಿಸಬಾರದು ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಡುಪಿ ಡಿಸಿ ಕೇಸರಿ ಧ್ವಜ ಹಾರಿಸಿದ್ದನ್ನು ಖಂಡಿಸಿ, ಎಲ್ಲರಿಗೂ ಸಂಬಂಧಿಸಿದ ದೇಗುಲಗಳಲ್ಲಿ ತಟಸ್ಥತೆ ಕಾಪಾಡಬೇಕೆಂದರು. ಈ ಹೇಳಿಕೆಗೆ ಹಿಂದೂ ಪರ ಸಂಘಟನೆಗಳು ಮತ್ತು ಸಾರ್ವಜನಿಕರಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಂಗಳೂರು, ಜ.22: ಮಂಗಳೂರು ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಸಚಿವ ರಮಾನಾಥ ರೈ (Ramanath Rai) ವಿವಾದತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಇದೀಗ ಅವರು ನೀಡಿರುವ ಹೇಳಿಕೆಯಿಂದ ದಕ್ಷಿಣ ಕನ್ನಡದಲ್ಲಿ ಹಿಂದೂ ನಾಯಕರನ್ನು ಕೇರಳಿಸಿದೆ. ದೇವಸ್ಥಾನದಲ್ಲಿ ಕೇಸರಿ ಬಾವುಟ ಸೇರಿ ಯಾವುದೇ ಧ್ವಜ ಹಾರಿಸಬೇಡಿ ಎಂದು ಹೇಳಿ, ಇದೀಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದೆ. ನೀವು ಒಂದು ದೈವದ ಗುತ್ತು ಮನೆಯವರಾಗಿ (ದೈವದ ಮನೆಯವರು) ಹೀಗೆ ಮಾತನಾಡುವುದು ಸರಿಯಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ. ಉಡುಪಿ ಮಠ ಪರ್ಯಾಯ ಮಹೋತ್ಸವದಲ್ಲಿ ಉಡುಪಿ ಜಿಲ್ಲಾಧಿಕಾರಿ ಟಿಕೆ ಸ್ವರೂಪಾ ಕೇಸರಿ ಧ್ವಜ ಹಾರಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಮಾಜಿ ಸಚಿವ ರಮಾನಾಥ ರೈ ಇದನ್ನು ಖಂಡಿಸುವ ಭರದಲ್ಲಿ ದೇವಾಲಯದಲ್ಲಿ ಕೇಸರಿ ಬಾವುಟ ಹಾಕಬೇಡಿ ಎಂದು ಹೇಳಿದ್ದಾರೆ.
ಉಡುಪಿ ಡಿಸಿ ಭಗವಾಧ್ವಜ ಹಾರಿಸಿದ್ದ ತಪ್ಪು, ಇದನ್ನು ಒಪ್ಪಲು ಸಾಧ್ಯವಿಲ್ಲ. ಅವರ ಮೇಲೆ ಸರಿಯಾದ ಕ್ರಮ ಆಗಬೇಕು. ದೇವಾಲಯದ ಕಾರ್ಯಕ್ರಮದಲ್ಲಿ ರಾಜಕೀಯ ಪ್ರೇರಿತ ಪತಾಕೆ ಧಿಕ್ಕರಿಸಬೇಕು. ದೇಗುಲದಲ್ಲಿ ಕಾಂಗ್ರೆಸ್, ಕೇಸರಿ, ಹಸಿರು ಯಾವುದೇ ಬಾವುಟ ಹಾಕಬೇಡಿ ಎಂದು ಹೇಳಿದ್ದಾರೆ. ದೇವಸ್ಥಾನದಲ್ಲಿ ನಡೆಯುವುದು ಕಾರ್ಯಕ್ರಮವೂ ಎಲ್ಲರಿಗೂ ಸಂಬಂಧಿಸಿದೆ. ಈ ಕಾರಣಕ್ಕೆ ದೇಗುಲದಲ್ಲಿ ಕೇಸರಿ ಧ್ವಜ ಹಾರಿಸಬಾರದು. ದೇಗುಲದ ಉತ್ಸವಗಳಲ್ಲಿ ಭಗವಾಧ್ವಜ ಹಾರಿಸುವುದನ್ನು ವಿರೋಧಿಸಬೇಕು ಎಂದು ಅವರು ಮಂಗಳೂರಿನ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ವೇಳೆ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರಮಾನಾಥ ರೈ ಹೇಳಿಕೆಗೆ ಆಕ್ರೋಶ:
ಮಾಜಿ ಸಚಿವ ರಮಾನಾಥ ರೈ ನೀಡಿದ ಹೇಳಿಕೆಗೆ ಹಿಂದೂ ಪರ ಸಂಘಟನೆಗಳು ಹಾಗೂ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಕೂಡ ನಡೆದಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಇಂತಹ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದ್ದಾರೆ. ನೀವು ದೈವರಾಧಕರು ಅಲ್ಲವೇ, ಒಂದು ಗುತ್ತಿನ ಮನೆಯವರಾಗಿ ಹೀಗೆ ಅವಮಾನ ಮಾಡುವುದು ಸರಿಯೇ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಹಿಂದೂ ದೇವಾಲಯದಲ್ಲಿ ಕೇಸರಿ ಧ್ವಜ ಹಾರಿಸದೇ ಬೇರೆ ಯಾವ ಧ್ವಜ ಹಾರಿಸಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ದೇವಾಲಯದ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಕೆಲವೊಂದು ನೆಟ್ಟಿಗರು ಹೇಳಿದ್ದಾರೆ.
ಇದನ್ನೂ ಓದಿ: ಅಹಿಂದ ಸಮಾವೇಶಕ್ಕೆ ವಾಹನ ನೀಡದಂತೆ ಹೇಳಿದ್ದಾರೆ: ಡಿಕೆಶಿ ವಿರುದ್ಧ ಗಂಭೀರ ಆರೋಪ
ಕೃಷ್ಣಮಠದ ಪರ್ಯಾಯದಲ್ಲಿ ಕೇಸರಿ ಧ್ವಜ ಹಾರಿಸಿದ ಡಿಸಿ:
ಜನವರಿ 18 ರಂದು ಉಡುಪಿಯ ಜಿಲ್ಲಾಧಿಕಾರಿ ಟಿಕೆ ಸ್ವರೂಪಾ ಅವರು ಪರ್ಯಾಯ ಮೆರವಣಿಗೆಗೆ ಚಾಲನೆ ನೀಡುವಾಗ ಕೇಸರಿ ಧ್ವಜ ಹಾರಿದ್ದಾರೆ, ಇದೀಗ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು, ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಟೀಕೆಗಳು ಬಂತು. ಒಬ್ಬ ಸರ್ಕಾರಿ ಅಧಿಕಾರಿ ಒಂದು ಧರ್ಮದ ಧ್ವಜವನ್ನು ಹಾರಿಸಿರುವುದು ತಪ್ಪು ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಆದರೆ ಇದಕ್ಕೆ ಬಿಜೆಪಿ ಕಿಡಿಕಾರಿದ. ಇದು ಕಾಂಗ್ರೆಸ್ಸಿನ ಹಿಂದೂ ವಿರೋಧಿ ಸಿದ್ಧಾಂತವನ್ನು ತೋರಿಸುತ್ತದೆ. ಭಗವಾ ಧ್ವಜದ ಮೇಲೆ ನಿಷೇಧವಿದೆಯೇ ಅಥವಾ ಅದು ಪಾಕಿಸ್ತಾನದ ಧ್ವಜವೇ? ಇದು ಕೋಟ್ಯಂತರ ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ಸಿಟಿ ರವಿ ಹೇಳಿದ್ದಾರೆ. ಈ ವಿವಾದಕ್ಕೆ ಜಿಲ್ಲಾಧಿಕಾರಿ ಸ್ಪಷ್ಟನೆ ಕೂಡ ನೀಡಿದ್ದಾರೆ. ತಮ್ಮ ಅಧಿಕೃತ ಕರ್ತವ್ಯದ ಭಾಗವಾಗಿ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದೆ ಮತ್ತು ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ ಎಂದು ಹೇಳಿದ್ದಾರೆ.
ಎಸ್.ಡಿ.ಪಿ.ಐ ಪಕ್ಷ ಓಲೈಸಲು ಹೀಗೆ ಮಾತನಾಡುತ್ತಿದ್ದಾರೆ: ಬ್ರಿಜೇಶ್ ಚೌಟ
ಎಸ್.ಡಿ.ಪಿ.ಐ ಪಕ್ಷ ಓಲೈಸಲು ರಮಾನಾಥ ರೈ ಇಂತ ಹೇಳಿಕೆ ನೀಡಿದ್ದಾರೆ. ರೈ ಹೇಳಿಕೆ ಕಾಂಗ್ರೆಸ್ ಮಾನಸಿಕತೆಯನ್ನು ತೋರಿಸುತ್ತದೆ. ದೇವಸ್ಥಾನಗಳಲ್ಲಿ ಕೇಸರಿ ಧ್ವಜ ಹಾಕದೇ ಬೇರೆ ಯಾವ ಬಣ್ಣದ ಧ್ವಜ ಹಾಕಬೇಕು. ನಿನ್ನೆ ಎಸ್.ಡಿ.ಪಿ.ಐ ರಾಷ್ಟ್ರೀಯ ಕಾನ್ಫರೆನ್ಸ್ ಮಂಗಳೂರಿನಲ್ಲಿ ನಡೆದಿದೆ. ಅವರ ಓಲೈಕೆಗಾಗಿ ರಮಾನಾಥ ರೈ ಇಂತಹ ಹೇಳಿಕೆ ಕೊಡುತ್ತಿದ್ದಾರೆ. ನಿಷೇಧಿತ ಪಿಎಫ್ಐ ನ ಮುಖವಾಣಿ SDPI. PFI ನಲ್ಲಿದ್ದವರೇ SDIP ನಲ್ಲಿ ಇರೋದು. ಈ ಹಿಂದೊಮ್ಮೆ ಚುನಾವಣೆಯಲ್ಲಿ ಎಸ್.ಡಿ.ಪಿ.ಐ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರು ಎಂದು ಸಂಸದ ಬ್ರಿಜೇಶ್ ಚೌಟ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:04 am, Thu, 22 January 26