Pets: ಪಚ್ಚನಾಡಿಯಲ್ಲಿ ಸಾಕುಪ್ರಾಣಿಗಳ ಉಪಟಳ -ಬೇಸತ್ತು ಜನ ಕಠೋರ ಬ್ಯಾನರ್ ಹಾಕಿದ್ದಾರೆ! ಏನಿದೆ ಅದರಲ್ಲಿ?
Mangaluru City Corporation: ಪಚ್ಚನಾಡಿ ಪ್ರದೇಶದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹಿಸುವ ತ್ಯಾಜ್ಯಗಳ ಡಂಪಿಂಗ್ ಯಾರ್ಡ್ ಇದೆ. ಹೀಗಾಗಿ ಮನೆಯಲ್ಲಿ ನಾಯಿ, ಬೆಕ್ಕಿನ ಮರಿಗಳನ್ನು ಸಾಕಲು ಸಾಧ್ಯವಾಗದವರು ಮರಿಗಳನ್ನು ಈ ಪ್ರದೇಶಕ್ಕೆ ತಂದು ಬಿಡುತ್ತಿದ್ದಾರೆ.
ಸಾಕು ಪ್ರಾಣಿಗಳು ಮನೆಯಲ್ಲಿದ್ದರಷ್ಟೇ ಚಂದ. ಆದ್ರೆ ಅವು ಬೀದಿಗೆ ಬಂದ್ರೆ ಒಂದಿಲ್ಲೊಂದು ಅವಾಂತರಕ್ಕೆ ಕಾರಣವಾಗುತ್ತೆ. ಮಂಗಳೂರಿನ ಆ ಊರೊಂದರ ಜನರು ಸಾಕುಪ್ರಾಣಿಗಳ ಉಪಟಳದಿಂದಾಗಿ ಬ್ಯಾನರ್‌ನ ಮೊರೆ ಹೋಗಿದ್ದಾರೆ. ಹಾಗಾದ್ರೆ ಬ್ಯಾನರ್‌ನಲ್ಲಿ ಇವರು ಬರೆದಿರೋದಾದರು ಏನು, ಇಲ್ಲಿನ ಸಮಸ್ಯೆಯೇನು ಎಂಬುದನ್ನು ತಿಳಿಯಲು ಈ ಸ್ಟೋರಿ ಓದಿ. ಮಂಗಳೂರಿನ ಪಚ್ಚನಾಡಿಯಲ್ಲಿ (Pachanady) ಸಾಕುಪ್ರಾಣಿಗಳ ಉಪಟಳ (Pets)– ನಾಯಿ ಮರಿ, ಬೆಕ್ಕಿನ ಮರಿ ತಂದು ಬಿಡುವವರನ್ನು ಖಂಡಿಸಿ, ಹೀಗೆ ಕಠೋರ ಶಬ್ದಗಳ ಬ್ಯಾನರ್ ಹಾಕಲಾಗಿದೆ – ಇಲ್ಲಿ ಯಾರು ನಾಯಿಮರಿ ಮತ್ತು ಬೆಕ್ಕುಮರಿಗಳನ್ನು ತಂದು ಬಿಡುತ್ತಾರೋ ಅವರು ತಮ್ಮ ಹೆಂಡತಿ ಮಕ್ಕಳನ್ನು ತಂದು ಬಿಡಿ, ನಾವು ಸಾಕುತ್ತೇವೆ ಎಂಬ ಕಠೋರ ಬರಹದ ಬ್ಯಾನರ್ (Banner) ಅದು. ಅದರ ಮಧ್ಯೆಯೂ ರಸ್ತೆಯುದ್ದಕ್ಕೂ ಹೊರಳಾಡಿಕೊಂಡು, ರೆಸ್ಟ್ ಮೂಡ್‌ನಲ್ಲಿರುವ ಬೀದಿನಾಯಿಗಳು. ಈ ದೃಶ್ಯಗಳು ಕಂಡು ಬಂದಿರುವುದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ (Mangaluru City Corporation) ಪಚ್ಚನಾಡಿಯ ಮಂಗಳಜ್ಯೋತಿ ಪ್ರದೇಶದಲ್ಲಿ. ಬೀದಿನಾಯಿಗಳ ಉಪಟಳದಿಂದ ಬೇಸತ್ತಿರುವ ಈ ಊರಿನ ಜನ ಇದೀಗ ಬೇರೆ ದಾರಿ ಕಾಣದೆ ಇಂತಹ ಬ್ಯಾನರ್‌ನ ಮೊರೆ ಹೋಗಿದ್ದಾರೆ.
ಪಚ್ಚನಾಡಿ ಪ್ರದೇಶದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹಿಸುವ ತ್ಯಾಜ್ಯಗಳ ಡಂಪಿಂಗ್ ಯಾರ್ಡ್ ಇದೆ. ಹೀಗಾಗಿ ಮನೆಯಲ್ಲಿ ನಾಯಿ, ಬೆಕ್ಕಿನ ಮರಿಗಳನ್ನು ಸಾಕಲು ಸಾಧ್ಯವಾಗದವರು ಮರಿಗಳನ್ನು ಈ ಪ್ರದೇಶಕ್ಕೆ ತಂದು ಬಿಡುತ್ತಿದ್ದಾರೆ. ಇದರಿಂದ ಈ ಭಾಗದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿ ಇವುಗಳ ಉಪಟಳವು ಹೆಚ್ಚಾಗಿದೆ. ಹೀಗಾಗಿ ಇನ್ಮುಂದೆ ಇಲ್ಲಿ ಯಾರು ನಾಯಿ, ಬೆಕ್ಕಿನ ಮರಿಗಳನ್ನು ಬಿಡದಂತೆ ಮಾಡಲು ಕಠೋರ ವಾಕ್ಯಗಳನ್ನು ಹೊಂದಿದ ಬ್ಯಾನರ್‌ನ್ನು ಇಲ್ಲಿನ ಮಂದಿ ಅಳವಡಿಸಿದ್ದಾರೆ.
ಪಚ್ಚನಾಡಿಯ ಈ ಮಂಗಳಜ್ಯೋತಿ ಏರಿಯಾದಲ್ಲಿ ಶಾಲೆ, ಕಾಲೇಜು ಸಹ ಇದೆ. ಶಾಲೆಗೆ ಪುಟ್ಟ ಮಕ್ಕಳು, ವಿದ್ಯಾರ್ಥಿಗಳು ಬರುವಾಗ ಹೋಗುವಾಗ ಈ ಬೀದಿನಾಯಿಗಳು ತೊಂದರೆಯನ್ನು ಮಾಡುತ್ತಿದೆ. ಕೆಲ ಮಕ್ಕಳಿಗೆ ಬೀದಿನಾಯಿಗಳು ಕಚ್ಚಿರುವ ಉದಾಹರಣೆಯೂ ಇದೆ. ಹೀಗಾಗಿ ಭಯದಿಂದಲೇ ಈ ಭಾಗದಲ್ಲಿ ಮಕ್ಕಳು ಓಡಾಟವನ್ನು ನಡೆಸುತ್ತಿದ್ದಾರೆ.
ಈ ಸಾಕುಪ್ರಾಣಿಗಳನ್ನು ಬೀದಿಗಳಲ್ಲಿ ಅನಾಥವಾಗಿಸುವ ಪರಿಣಾಮ ಆಹಾರಕ್ಕಾಗಿ ಡಂಪಿಂಗ್ ಯಾರ್ಡ್‌ನ್ನೆ ಇದು ಅವಲಂಬಿಸುತ್ತದೆ. ಒಟ್ಟಿನಲ್ಲಿ ಯಾರೋ ಮಾಡುವ ತಪ್ಪಿಗೆ ಇನ್ಯಾರೋ ಸಂಕಷ್ಟ ಅನುಭವಿಸುವ ಸ್ಥಿತಿ ಇಲ್ಲಿದೆ. ಹೀಗಾಗಿ ಮಂಗಳೂರು ಮಹಾನಗರ ಪಾಲಿಕೆ ಈ ಬಗ್ಗೆ ಗಮನ ಹರಿಸಿ ಈ ಸಮಸ್ಯೆಗೆ ಮುಕ್ತಿ ನೀಡಬೇಕಿದೆ.
ವರದಿ: ಅಶೋಕ್, ಟಿವಿ 9, ಮಂಗಳೂರು
Published On - 1:14 pm, Sat, 4 February 23