ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ; ಪೊಲೀಸ್ ಠಾಣೆ ಮೆಟ್ಟಿಲೇರಿದ ದೇವಸ್ಥಾನದ ಆಡಳಿತ ಮಂಡಳಿ

ರಿಷಬ್ ಶೆಟ್ಟಿ ಭಾಗವಹಿಸಿದ್ದ ಹರಕೆ ಕೋಲದ ದೈವ ನರ್ತಕರ ವರ್ತನೆ ಕುರಿತು ವಿವಾದ ಮುಂದುವರೆದಿದೆ, ಈ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ದೃಶ್ಯಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು, ಜಾರಂದಾಯ ಬಂಟ ಮತ್ತು ವಾರಾಹಿ ಪಂಜುರ್ಲಿ ಕ್ಷೇತ್ರದ ಆಡಳಿತ ಮಂಡಳಿ ಕದ್ರಿ ಠಾಣೆಗೆ ದೂರು ನೀಡಿದೆ. ದೇವಸ್ಥಾನದ ಪ್ರಮುಖರು ಸುದ್ದಿಗೋಷ್ಠಿ ನಡೆಸಿ, ವಿವಾದವು ದೈವ ಕ್ಷೇತ್ರದ ಬೆಳವಣಿಗೆಯನ್ನು ತಡೆಯುವ ಯತ್ನ ಎಂದು ಸ್ಪಷ್ಟಪಡಿಸಿದ್ದಾರೆ.

ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ; ಪೊಲೀಸ್ ಠಾಣೆ ಮೆಟ್ಟಿಲೇರಿದ ದೇವಸ್ಥಾನದ ಆಡಳಿತ ಮಂಡಳಿ
ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ಪೊಲೀಸ್ ಠಾಣೆ ಮೆಟ್ಟಿಲೇರಿದ ಆಡಳಿತ ಮಂಡಳಿ
Updated By: ಭಾವನಾ ಹೆಗಡೆ

Updated on: Dec 12, 2025 | 12:37 PM

ಮಂಗಳೂರು, ಡಿಸೆಂಬರ್ 12: ರಿಷಬ್ ಶೆಟ್ಟಿ (Rishabh Shetty) ಇತ್ತೀಚೆಗೆ ಪಾಲ್ಗೊಂಡ ಹರಕೆಯ ಕೋಲದ ಬಗ್ಗೆ ವಿವಾದ ವ್ಯಕ್ತವಾಗಿದ್ದು, ಕೋಲದ ಸಂದರ್ಭದಲ್ಲಿ ದೈವ ನರ್ತಕನ ವರ್ತನೆಯನ್ನು ದೈವಾರಾಧಕ ತಮ್ಮಣ್ಣ ಶೆಟ್ಟಿ ಸೇರಿ ಹಲವರು ವಿರೋಧಿಸಿದ್ದಾರೆ. ಈ ಹಿನ್ನೆಲೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿರುವ ಆಡಳಿತ ಮಂಡಳಿ, ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.

ಸಾಮಾಜಿಕ ಜಾಲತಾಣದಲ್ಲಿ  ದೈವದ ಅವಹೇಳನ

ಮಂಗಳೂರಿನಲ್ಲಿ ರಿಷಬ್ ಶೆಟ್ಟಿ ಹರಕೆ ನೇಮೋತ್ಸವ ನಡೆದಾಗ ಕೋಲದ ಕೆಲ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಈ ವೇಳೆ ದೈವ ನರ್ತಕನ ವರ್ತನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಲಾಗಿತ್ತು. ಈ ಕುರಿತು ಜಾರಂದಾಯ ಬಂಟ ಮತ್ತು ವಾರಾಹಿ ಪಂಜುರ್ಲಿ ಕ್ಷೇತ್ರದ ಆಡಳಿತ ಸಮಿತಿ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.

ನಮ್ಮ ದೈವ ಅಪವಾದದಿಂದ ಮುಕ್ತವಾಗಿದೆ- ರವಿಪ್ರಸನ್ನ

ಮಂಗಳೂರಿನ ಬಾರೆಬೈಲ್ ನಲ್ಲಿರುವ ದೈವಸ್ಥಾನದಲ್ಲಿ ಮಗನ ಹುಟ್ಟು ಹಬ್ಬದ ಹಿನ್ನಲೆ ಕಳೆದ ವರ್ಷವೂ ರಿಷಬ್ ಶೆಟ್ಟಿ ಕುಟುಂಬ ನೇಮೋತ್ಸವ ಸೇವೆ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಎಲ್ಲಿಯೂ ನಡೆಯದ ಚಮತ್ಕಾರ ಈ ಕ್ಷೇತ್ರದಲ್ಲಿ ಆಗಿದೆ ಎಂದು ರಿಷಬ್ ಹೇಳಿಕೊಂಡಿದ್ದರು. ಈ ವರ್ಷದ ದೀಪಾವಳಿ ಸಂದರ್ಭದಲ್ಲಿ ದೈವದ ಅನುಮತಿ ಕೇಳಿ ಹರಕೆ ನೇಮಕ್ಕೆ ಒಪ್ಪಿಗೆ ಪಡೆಯಲಾಗಿದ್ದು, ಪಂಜುರ್ಲಿ ನೇಮ,ಜಾರಾಂದಾಯಗೆ ತುಡರ ಬಲಿ ನೀಡಲು ದೈವ ಒಪ್ಪಿಗೆ ನೀಡಿತ್ತು. ಈ ಸೇವೆ ನೆರವೇರಿದ್ದು, ದೈವಗಳು ಒಳ್ಳೆಯ ರೀತಿ ಸ್ವೀಕಾರ ಮಾಡಿವೆ. ಆದರೆ ಈ ಕ್ಷೇತ್ರ ಬೆಳೆಯಬಾರದೆಂಬ ಕಾರಣಕ್ಕೆ ವಿವಾದ ಹುಟ್ಟು ಹಾಕಿದ್ದಾರೆ ಎಂದು ದೈವಸ್ಥಾನದ ಆಡಳಿತ ಮಂಡಳಿ ಪ್ರಮುಖರಾದ ರವಿಪ್ರಸನ್ನ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ ‘ಕಾಂತಾರದಿಂದ ದೈವಗಳು ಬೀದಿಗೆ ಬಂದಿವೆ’: ದೈವಾರಾಧಕ ತಮ್ಮಣ್ಣ ಶೆಟ್ಟಿ ಅಸಮಾಧಾನ

ನಮಗೆ ದೈವ ನರ್ತಕರ ಮೇಲೆ ಯಾವುದೇ ಸಂಶಯ ಇಲ್ಲ. ಭಾವನೆಗಳ ಮೇಲೆ ಆರಾಧನೆಯನ್ನು ಮಾಡುತ್ತಿದ್ದೇವೆ ಎಂದಿರುವ ರವಿಪ್ರಸನ್ನ, ದೈವಸ್ಥಾನದ ಕಟ್ಟಳೆಗಳ ಪ್ರಕಾರ ನಾವು ನಡೆದುಕೊಂಡಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಬೇರೆ ಬೇರೆ ಚರ್ಚೆಗಳು ನಡೆಯುತ್ತಿದೆ. ಎಣ್ಣೆಬೂಳ್ಯ ಸಂದರ್ಭದಲ್ಲಿ ದೈವವೇ ನರ್ತನ ಮಾಡುತ್ತದೆ ಎಂಬ ನಂಬಿಕೆ. ನಮ್ಮ ದೈವ ಅಪವಾದದಿಂದ ಮುಕ್ತವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.