
ಮಂಗಳೂರು: ವಿಜ್ಞಾನ ಮೇಳದ ಪೆಂಡಾಲ್ ಕುಸಿದು ಹಲವರಿಗೆ ಗಾಯವಾಗಿರುವಂತಹ ಘಟನೆ ಕೇರಳದ ಕಾಸರಗೋಡಿನ ಮಂಜೇಶ್ವರ ಬೇಕೂರಿನಲ್ಲಿ ನಡೆದಿದೆ. ಇಂದು (ಅ.21) ಸರ್ಕಾರಿ ಶಾಲಾ ಆವರಣದಲ್ಲಿ ವಿಜ್ಞಾನ ಮೇಳ ನಡೆಯುತಿದ್ದು, ಕಬ್ಬಿಣದ ಶೀಟ್ ಅಳವಡಿಸಿದ್ದ ಬೃಹತ್ ಪೆಂಡಾಲ್ ಕುಸಿತವಾಗಿದೆ. ಮೇಳದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ, ಕೆಲ ಶಿಕ್ಷಕರು ಮತ್ತು ಕಾರ್ಯಕ್ರಮದ ತೀರ್ಪುಗಾರರಿಗೂ ಗಾಯಗಳಾಗಿದ್ದು, ಮಂಗಲ್ಪಾಡಿ ಮತ್ತು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಂಜೇಶ್ವರ ಸಾರ್ಕಾರಿ ಶಾಲೆಯ ಉಪಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ವಿವಿಧ ಶಾಲೆಗಳಿಂದ ಆಯ್ದ ವಿದ್ಯಾರ್ಥಿಗಳು ಈ ಆಗಮಿಸಿದ್ದರು. ಶಾಲಾ ಆವರಣದಲ್ಲಿ ನಿರ್ಮಿಸಿದ್ದ ಕಬ್ಬಿಣದ ಶೀಟ್ ಅಳವಡಿಸಿದ್ದ ಬೃಹತ್ ಪೆಂಡಾಲ್ ಅಡಿಯಲ್ಲಿ ವಿದ್ಯಾರ್ಥಿಗಳು ಕುಳಿತುಕೊಂಡಿದ್ದರು. ಅವಘಡ ಸಂಭವಿಸಿದಾಗ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ತುರ್ತು ರಕ್ಷಣಾ ಕಾರ್ಯ ಮತ್ತು ಪರಿಹಾರ ಕಾರ್ಯಾಚರಣೆ ನಡೆಸಿ, ಸ್ಥಳೀಯರ ಸಹಕಾರದಿಂದ ಶೀಟ್‌ಗಳನ್ನು ಸರಿಸಿ, ಅಡಿಯಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ.
ಮಳೆಯಿಂದಾಗಿ ಕಾಲೇಜು ಗೋಡೆ ಕುಸಿತ
ಇನ್ನು ನಿರಂತರ ಜಿಟಿ ಜಿಟಿ ಮಳೆಯಿಂದಾಗಿ ನೂರು ವರ್ಷ ಹಳೆಯದಾದ ಮೈಸೂರು ಜೆಎಲ್ಬಿ ರಸ್ತೆಯಲ್ಲಿರುವ ಮಹಾರಾಣಿ ಕಾಲೇಜಿನ ಕಟ್ಟಡದ ಗೋಡೆ ಕುಸಿದು ಬಿದಿದ್ದೆ. ಘಟನೆ ವೇಳೆ ಯಾರು ಇಲ್ಲದ ಕಾರಣ ಅಪಾಯ ತಪ್ಪಿದೆ. ಕಟ್ಟಡದ ಗೋಡೆ ಕುಸಿದು ಬೀಳುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಚಾಮುಂಡಿ ಬೆಟ್ಟದ ನಂದಿ ಮಾರ್ಗದಲ್ಲಿ ಮತ್ತೆ ಭೂ ಕುಸಿತ
ಮೈಸೂರು: ಚಾಮುಂಡಿ ಬೆಟ್ಟದ (Chamundi Hill) ನಂದಿ ಮಾರ್ಗದಲ್ಲಿ ಮತ್ತೆ ಭೂ ಕುಸಿತ (Landslide) ಉಂಟಾಗಿರುವಂತಹ ಘಟನೆ ನಡೆದಿದೆ. ಮಳೆಯಿಂದ ವೀಕ್ಷಣಾ ಗೋಪುರ ಪಕ್ಕದ ರಸ್ತೆ ಕುಸಿದಿದೆ. ಮೈಸೂರಿನಲ್ಲಿ ಕಳೆದ 3 ದಿನಗಳಿಂದ ಮಳೆ ಸುರಿಯುತ್ತಿದೆ. ಒಂದು ಕಡೆ ರಸ್ತೆ ಕಾಮಗಾರಿ ನಡೆಯುತ್ತಿದ್ದರೆ, ಮತ್ತೊಂದೆಡೆ ಭೂ ಕುಸಿತವಾಗುತ್ತಿದೆ. ಈ ಹಿಂದೆಯೂ ಮಳೆಯಿಂದಾಗಿ ರಸ್ತೆ ಕುಸಿದಿತ್ತು. ಕುಸಿತವಾದ ಜೊತೆಗೆ ಮತ್ತೊಂದಿಷ್ಟು ಭಾಗದ ರಸ್ತೆಯು ಬಿರುಕು ಬಿಟ್ಟಿರುವ ಕಾರಣ ಇದೇ ಭಾಗದಲ್ಲಿ ಮತ್ತೆ ಭೂಕುಸಿತವಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಯಲಕ್ಷ್ಮಿಪುರಂನ ಹಲವೆಡೆ ದೊಡ್ಡ ಗಾತ್ರದ ಮರಗಳು ಬುಡಸಮೇತ ಮನೆಗಳ ಮೇಲೆ ಉರುಳಿ ಬಿದ್ದಿವೆ. ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬಗಳು ಕೂಡ ಮುರಿದು ನೆಲಕಚ್ಚಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:08 pm, Fri, 21 October 22