ಸುಹಾಸ್ ಶೆಟ್ಟಿ ಕೊಲೆಯಲ್ಲಿ ಯಾರೆಲ್ಲ ಶಾಮೀಲು? ಹತ್ಯೆ ಮಾಡಿದ್ದೇಕೆ? ಇಲ್ಲಿದೆ ಸಮಗ್ರ ಮಾಹಿತಿ

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಮಂಗಳೂರಿನ ಬಜ್ಪೆ ಬಳಿ ನಡು ರಸ್ತೆಯಲ್ಲೇ ಹಂತಕರು ಕೊಲೆ ಮಾಡಿದ್ದರು. ಮೀನು ಸಾಗಿಸುವ ವಾಹನದಿಂದ ಗುದ್ದಿ, ಬಳಿಕ ಅಟ್ಟಹಾಸ ಮೆರೆದಿದ್ದರು. ಮೊದಲೇ ಕೋಮು ಸೂಕ್ಷ್ಮ ಪ್ರದೇಶವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಹಾಸ್ ಹತ್ಯೆ ಪ್ರಕರಣ ಕಿಡಿ ಹೊತ್ತಿಸಿತ್ತು. ಮೂರು ವರ್ಷಗಳ ಹಿಂದಿನ ಫಾಜಿಲ್ ಹತ್ಯೆ ಕೂಡ ಇದರಲ್ಲಿ ಥಳುಕು ಹಾಕಿಕೊಂಡಿತ್ತು. ಆದರೆ ಈಗ ಪೊಲೀಸ್ ತನಿಖೆಯಲ್ಲಿ ಸುಹಾಸ್ ಶೆಟ್ಟಿಯ ಕೊಲೆ ರಹಸ್ಯ ಬಯಲಾಗಿದೆ. ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಿದ್ದು ಯಾರು? ಯಾಕೆ ಎಂಬ ಸ್ಫೋಟಕ ಮಾಹಿತಿ ‘ಟಿವಿ9ಗೆ’ ಲಭ್ಯವಾಗಿದೆ.

ಸುಹಾಸ್ ಶೆಟ್ಟಿ ಕೊಲೆಯಲ್ಲಿ ಯಾರೆಲ್ಲ ಶಾಮೀಲು? ಹತ್ಯೆ ಮಾಡಿದ್ದೇಕೆ? ಇಲ್ಲಿದೆ ಸಮಗ್ರ ಮಾಹಿತಿ
ಮಂಗಳೂರು ಪೊಲೀಸ್ ಆಯುಕ್ತರು ಹಾಗೂ ಸುಹಾಸ್ ಶೆಟ್ಟಿ
Updated By: Ganapathi Sharma

Updated on: May 03, 2025 | 2:50 PM

ಮಂಗಳೂರು, ಮೇ 3: ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ (Suhas Shettyಹತ್ಯೆಯ ಭೀಕರ ದೃಶ್ಯ ಸಿಸಿಟಿವಿ ಹಾಗೂ ಸ್ಥಳೀಯರ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಮಂಗಳೂರಿನ ಪೊಲೀಸರು ಕೂಡ ಇದೇ ವಿಡಿಯೋಗಳನ್ನು ಆಧರಿಸಿ ಆರೋಪಿಗಳ ಬೆನ್ನುಬಿದ್ದಿದ್ದರು. ಆರೋಪಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅವಿತುಕೊಂಡಿದ್ದ ವಿಚಾರ ತಿಳಿದಿದ್ದ ಪೊಲೀಸರು, ಎಂಟು ಮಂದಿಯ ಹೆಡೆಮುರಿ ಕಟ್ಟಿದ್ದಾರೆ. ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ಮೊಹಮ್ಮದ್ ರಿಜ್ವಾನ್, ರಂಜಿತ್ ಹಾಗೂ ನಾಗರಾಜ್​ನನ್ನ ಬಂಧಿಸಿದ್ದಾರೆ. ಈ ವೇಳೆ ಸುಹಾಸ್ ಕೊಲೆಯಲ್ಲಿ ಒಂಬತ್ತು ಜನ ಶಾಮೀಲಾಗಿರುವುದು ಗೊತ್ತಾಗಿದೆ.

ಚೂರಿ ಇರಿತಕ್ಕೆ ಪ್ರತೀಕಾರ ತೀರಿಸಿಕೊಂಡಿತಾ ಸಫ್ವಾನ್ ಗ್ಯಾಂಗ್?

ತನಿಖೆ ಆರಂಭಿಸಿದ ಪೊಲೀಸರಿಗೆ 2023ರ ಪ್ರಕರಣವೊಂದರ ಲಿಂಕ್ ಇರುವುದು ಗೊತ್ತಾಗಿತ್ತು. ಅದುವೇ ಸಫ್ವಾನ್ ಹಾಗೂ ಸುಹಾಸ್ ಶೆಟ್ಟಿಯ ಆಪ್ತನ ನಡುವಿನ ಗಲಾಟೆ. ಸಫ್ವಾನ್ ಎಂಬಾತನ ಜತೆಗೆ ಸುಹಾಸ್ ಶೆಟ್ಟಿ ಆಪ್ತ ಪ್ರಶಾಂತ್ ಗಲಾಟೆ ಮಾಡಿಕೊಂಡಿದ್ದ. ಗಲಾಟೆ ವಿಚಾರಕ್ಕೆ ಮಾತುಕತೆ ನಡೆಸೋದಕ್ಕೆ ಸಫ್ವಾನ್​ನನ್ನು ಕರೆದಿದ್ದ. ಮಾತಾನಾಡುವುದಕ್ಕೆ ಎಂದು ಕರೆದ ಪ್ರಶಾಂತ್ ಹಾಗೂ ಗ್ಯಾಂಗ್ 2023ರ ಸೆಪ್ಟೆಂಬರ್​​ನಲ್ಲಿ ಸಫ್ವಾನ್​ಗೆ ಡ್ರ್ಯಾಗನರ್​ನಿಂದ ಇರಿದಿತ್ತು. ಬಳಿಕ ಚೂರಿ ಇರಿತಕ್ಕೆ ಒಳಗಾದ ಸಫ್ವಾನ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ಚೂರಿ ಇರಿತ ಪ್ರಕರಣ ಬಳಿಕ ಸಫ್ವಾನ್ ಹಾಗೂ ಪ್ರಶಾಂತ್ ನಡುವೆ ದ್ವೇಷ ಹುಟ್ಟಿಸಿತ್ತು.

ಪ್ರಶಾಂತ್ ಬದಲು ಸುಹಾಸ್ ಹತ್ಯೆ!

ಹಲ್ಲೆಗೆ ಪ್ರತಿಯಾಗಿ ಪ್ರಶಾಂತ್​ ಮೇಲೆ ದಾಳಿ ಮಾಡುವುದಕ್ಕೆ ಸಫ್ವಾನ್ ಅನೇಕ ಬಾರಿ ಸಂಚು ಹೂಡಿದ್ದ. ಈ ವೇಳೆ ಪ್ರಶಾಂತ್​​​ಗೆ ಬೆಂಬಲವಾಗಿ ನಿಂತಿದ್ದು ಸುಹಾಸ್ ಶೆಟ್ಟಿ. ಇದೇ ವಿಚಾರಕ್ಕೆ ಪ್ರಶಾಂತ್ ಮೇಲಿನ ಸಫ್ವಾನ್ ಸಂಘರ್ಷ, ಸುಹಾಸ್​ ಶೆಟ್ಟಿ ಕಡೆಗೆ ತಿರುಗಿತ್ತು. ಹೀಗಾಗಿಯೇ ಪ್ರಶಾಂತ್​ನನ್ನು ಬಿಟ್ಟ ಸಫ್ವಾನ್, ಸುಹಾಸ್ ಹತ್ಯೆಗೆ ಸ್ಕೆಚ್ ಹಾಕಿದ್ದ. ಒಂದಷ್ಟು ಕ್ರಿಮಿನಲ್​​ಗಗಳ ಜೊತೆಸೇರಿ ಸಂಚು ರೂಪಿಸಿದ್ದ. ಅದರಂತೆ ಮಿನಿ ಕಂಟೇನರ್ ಚಲಾಯಿಸಿದ್ದ ಸಫ್ವಾನ್ ಸುಹಾಸ್ ಕಾರಿಗೆ ಗುದ್ದಿದ್ದ. ಬಲಿಕ ಮುಝಮ್ಮಿಲ್ ಎಂಬಾತ ಚಲಾಯಿಸಿಕೊಂಡು ಬಂದ ಸ್ವಿಫ್ಟ್​ ಕಾರಿನಲ್ಲಿದ್ದ ಹಂತಕರು, ನಟ್ಟ ನಡುರಸ್ತೆಯಲ್ಲೇ ಸುಹಾಸ್​​ನನ್ನು ಕೊಲೆ ಮಾಡಿದ್ದರು.

ಇದನ್ನೂ ಓದಿ
ಕರಾವಳಿಗೆ ಆ್ಯಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್: ಪರಮೇಶ್ವರ್
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್​ ಶೆಟ್ಟಿ ಕೊಲೆ: ಮಂಗಳೂರು ಸುತ್ತಮುತ್ತ 3 ಮಂದಿಗೆ ಚಾಕು ಇರಿತ
ಸುಹಾಸ್ ಹತ್ಯೆ ಬೆನ್ನಲ್ಲೇ ಉಡುಪಿಯಲ್ಲಿ ಮುಸ್ಲಿಂ ಯುವಕನ ಕೊಲೆಗೆ ಯತ್ನ

ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳು

ಸುಹಾಸ್ ಶೆಟ್ಟಿಯ ಕೊಲೆ ಪ್ರಕರಣದಲ್ಲಿ ಬಂಧಕ್ಕೊಳಗಾಗಿರುವ ಆರೋಪಿಗಳಿಗೆ ಕ್ರಿಮಿನಲ್ ಹಿನ್ನೆಲೆ ಇದೆ.

ಯಾರು ಈ ಸಫ್ವಾನ್?

ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಫ್ವಾನ್, ಮಂಗಳೂರಿನ ಬಳಿಯ ಶಾಂತಿಗುಡ್ಡೆ ಪೇಜಾವರ ಗ್ರಾಮದವನು. ಅಬ್ದುಲ್ ನಾಸಿರ್ ಎಂಬುವವರ ಮಗನಾದ ಈತ ಚಾಲಕನಾಗಿ ಕೆಲಸ ಮಾಡುತ್ತಿದ್ದ.

ಯಾರು ಈ ನಿಯಾಜ್?

ಮೇಸ್ತ್ರಿ ಕೆಲಸ ಮಾಡುತ್ತಿರುವ ನಿಯಾಜ್ ಕೂಡ ಕೊಲೆಯಲ್ಲಿ ಶಾಮೀಲಾಗಿದ್ದಾನೆ. ಈತ ಮಂಗಳೂರಿನ ಬಜ್ಪೆ ಶಾಂತಿಗುಡ್ಡೆ ಮಸೀದಿ ಬಳಿ ವಾಸ್ತವ್ಯವಿದ್ದಾನೆ.

ಮುಝಮಿಲ್ ಯಾರು?

ಮಂಗಳೂರಿನ ಮೊಹಮ್ಮದ್ ಮುಝಮಿಲ್ 4 ತಿಂಗಳ ಹಿಂದೆ ಸೌದಿ ಅರೇಬಿಯಾದಿಂದ ಬಂದಿದ್ದ. ನವ ವಿವಾಹಿತನಾಗಿರುವ ಈತ ಕೂಡ ಕೊಲೆಯಲ್ಲಿ ಶಾಮೀಲಾಗಿದ್ದಾನೆ. ಈತನ ವಿರುದ್ಧ ಪಣಂಬೂರು ಠಾಣೆಯಲ್ಲಿ ಒಂದು ಪ್ರಕರಣ ಕೂಡ ಇದೆ.

ಯಾರು ಈ ಕಲಂದರ್ ಶಾಫಿ?

ಮಂಗಳೂರಿನ ಕುರ್ಸು ಗುಡ್ಡೆ ಕಳವಾರಿನ ಕಲಂದರ್ ಶಾಫಿ ಕೂಡ ಪ್ರಕರಣದಲ್ಲಿ ಶಾಮೀಲಾಗಿದ್ದಾನೆ. ಈ ಕಲಂದರ್ ಶಾಫಿ ಬೆಂಗಳೂರಿನಲ್ಲಿ ಸೇಲಸ್​​ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಈತನ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಯಾರು ಮೊಹಮ್ಮದ್ ರಿಜ್ವಾನ್?

ಇನ್ನು ಕೊಲೆಯಲ್ಲಿ ಮೊಹಮ್ಮದ್ ರಿಜ್ವಾನ್ ಕೈವಾಡವೂ ಇದೆ. ಈತ ಮಂಗಳೂರಿನ ಜೋಕಟ್ಟೆಯ ಈದ್ಗಾ ಮಸೀದಿ ಹತ್ತಿರ ವಾಸವಿದ್ದಾನೆ. ಸೌದಿ ಅರೇಬಿಯಾ ಆಯಿಲ್ ಪ್ಲಾಂಟ್​​ನಲ್ಲಿ ಕೆಲಸ ಮಾಡುತ್ತಿದ್ದ.

ಸುಹಾಸ್ ಕೊಲೆಯಲ್ಲಿ ಇಬ್ಬರು ಹಿಂದೂ ಯುವಕರು!

ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಕೇವಲ ಮುಸ್ಲಿಮರು ಅಷ್ಟೇ ಅಲ್ಲ, ಬ್ಬರು ಹಿಂದೂ ಯುವಕರು ಕೂಡ ಶಾಮೀಲಾಗಿದ್ದಾರೆ. ಆ ಪೈಕಿ ಮೊದಲನೆಯವನು ರಂಜಿತ್. ಮತ್ತೊಬ್ಬ ನಾಗರಾಜ್.

ಯಾರು ಈ ರಂಜಿತ್?

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ರುದ್ರ ಪಾದದ ರಂಜಿತ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸುಹಾಸ್ ಮೇಲೆ ದಾಳಿ ಮಾಡಲು ಈತನೇ ಲಾಂಗ್ ತಂದುಕೊಟ್ಟಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.

ಯಾರು ಈ ನಾಗರಾಜ್?

ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್, ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಮಾವಿನಕೆರೆ ನಿವಾಸಿ.

ಇದನ್ನೂ ಓದಿ: ಸುಹಾಸ್ ಹತ್ಯೆ ಪ್ರಕರಣದಲ್ಲಿ ಬಂಧಿತ ಇಬ್ಬರು ಹಿಂದೂಗಳು: ಅಣ್ಣನ ಹತ್ಯೆ ಪ್ರತೀಕಾರಕ್ಕೆ ಹಿಂದೂಗಳನ್ನು ಬಳಸಿದನೇ ಫಾಜಿಲ್ ತಮ್ಮ

ಸದ್ಯ ಸುಹಾಸ್ ಹತ್ಯೆಯ ನೈಜ ಕಾರಣ ಖಾಕಿ ತನಿಖೆಯಲ್ಲಿ ಹೊರಬಿದ್ದಿದೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮತ್ತಷ್ಟು ವಿಚಾರಗಳನ್ನು ಬಯಲಿಗೆಳೆಯಲು ತನಿಖೆ ಮುಂದುವರಿಸಿದ್ದಾರೆ.

ವರದಿ: ಪೃಥ್ವಿ ಹಾಗೂ ಅಶೋಕ್, ಟಿವಿ9 ಮಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:47 pm, Sat, 3 May 25