ನೆಟ್ಟಾರು ಕೊಲೆ ಪ್ರತಿಕಾರಕ್ಕೆ ಫಾಜಿಲ್ ಹತ್ಯೆ: ಇದೇ ಸೇಡಿಗೆ ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನ ಬಜ್ಪೆ ಕಿನ್ನಿಪದವು ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲಾಗಿದೆ. ಸುಹಾಸ್ ಶೆಟ್ಟಿ ಸುರತ್ಕಲ್‌ನ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರು. ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಫಾಜಿಲ್ ಕೊಲೆ ನಡೆದಿತ್ತು. ಸುಹಾಸ್ ಶೆಟ್ಟಿ ಈ ಹಿಂದೆ ಬಜರಂಗದಳದ ಕಾರ್ಯಕರ್ತರಾಗಿದ್ದರು ಮತ್ತು ಅವರ ವಿರುದ್ಧ ಹಲವು ಕೊಲೆ ಪ್ರಯತ್ನದ ಪ್ರಕರಣಗಳು ದಾಖಲಾಗಿದ್ದವು. ಈ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಗಳೂರು, ಮೇ 01: ಮಂಗಳೂರಿನ (Mangaluru) ಬಜ್ಪೆ ಕಿನ್ನಿಪದವು ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ತಲ್ವಾರ್ನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ರೌಡಿಶೀಟರ್ ಸುಹಾಸ್ ಶೆಟ್ಟಿಯು ಸುರತ್ಕಲ್‌ನ ಫಾಜಿಲ್ ಕೊಲೆ ಕೇಸ್ನ ಪ್ರಮುಖ ಆರೋಪಿಯಾಗಿದ್ದರು. ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆಗೆ ಪ್ರತೀಕಾರವಾಗಿ 2022ರ ಜುಲೈ 28ರಂದು ಫಾಜಿಲ್ನ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ಸುಹಾಸ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದರು.
ಸುಹಾಸ್ ಶೆಟ್ಟಿ ಈ ಹಿಂದೆ ಬಜರಂಗದಳದ ಕಾರ್ಯಕರ್ತನಾಗಿದ್ದನು. ಸಹಾಸ್ ಶೆಟ್ಟಿ ವಿರುದ್ಧ ಹಲವು ಕೊಲೆ, ಕೊಲೆಯತ್ನ ಕೇಸ್ಗಳು ದಾಖಲಾಗಿದ್ದವು. ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಸ್ಪತ್ರೆಗೆ ಬಿಜೆಪಿ ಶಾಸಕ, ಹಿಂದೂ ಕಾರ್ಯಕರ್ತರ ಆಗಮನ
ಇನ್ನು ಸುಹಾಸ್ ಹತ್ಯೆ ವಿಷಯ ತಿಳಿಯುತ್ತಿದ್ದಂತೆಯೇ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಮಂಗಳೂರು ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಆಗಮಿಸಿದ್ದಾರೆ. ಇನ್ನು ಆಸ್ಪತ್ರೆ ಎದುರು ಭಾರೀ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಸೇರಿದ್ದಾರೆ. ಇದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಮಂಗಳೂರಿನ ಹಲವೆಡೆ ನಾಕಾಬಂದಿ
ಇನ್ನು ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮಂಗಳೂರು ಹಲವೆಡೆ ನಾಕಾಬಂದಿ ಹಾಕಿದ್ದಾರೆ. ಅಲ್ಲದೇ ಸೂಕ್ಷ್ಮ ಪ್ರದೇಶದಲ್ಲಿ ರಾತ್ರಿ ಇಡೀ ಗಸ್ತು ತಿರುಗಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದು, ಮಂಗಳೂರು ನಗರಕ್ಕೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ. ಯಾಕಂದ್ರೆ ಕೊಲೆಯಾದ ಸುಹಾಸ್ ಸ್ಥಳೀಯವಾಗಿ ಸಾಕಷ್ಟು ಕಾರ್ಯಕರ್ತರ ಪಡೆಯನ್ನು ಹೊಂದಿದ್ದ. ಹೀಗಾಗಿ ಪೊಲೀಸರು ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದಾರೆ.
ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಇನ್ನೂ ನಾಲ್ವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ
ಫಾಜಿಲ್ ಕೊಲೆ ಪ್ರಕರಣ
2022ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೆ ಪ್ರತಿಕಾರವಾಗಿ 2022ರ ಜುಲೈ 28 ರಂದು ಸುರತ್ಕಲ್ನಲ್ಲಿ ಫಾಜಿಲ್ ಕೊಲೆಯಾಗಿತ್ತು.
ಪಕ್ಕಾ ಪ್ಲಾನ್ ಮಾಡಿ ಫಾಜಿಲ್ ಕೊಲೆ
ಆರೋಪಿ ಸುಹಾಸ್ ಶೆಟ್ಟಿ, ಅಭಿಷೇಕ್ನೊಂದಿಗೆ ದೂರವಾಣಿ ಕರೆ ಮಾಡಿ ಓರ್ವನನ್ನು ಹತ್ಯೆ ಮಾಡುವ ಬಗ್ಗೆ ಮಾತನಾಡಿದ್ದನು. 2022ರ ಜು.27ರಂದು ಸುರತ್ಕಲ್‌ನ ಒಂದು ಕಡೆಯಲ್ಲಿ ಅಭಿಷೇಕ್ ಮತ್ತು ಸುಹಾಸ್ ಉಳಿದವರನ್ನು ಸೇರಿಸಿಕೊಂಡು ಮಾತುಕತೆ ನಡೆಸಿ ಕೃತ್ಯಕ್ಕೆ ಕಾರಿನ ಅವಶ್ಯಕತೆ ಬಗ್ಗೆ ಮಾತನಾಡಿಕೊಂಡಿದ್ದರು. ಅದರಂತೆ ಮೋಹನ್ ಮತ್ತು ಗಿರಿಧರ್ ಮಧ್ಯಾಹ್ನದ ವೇಳೆಗೆ ಅಜಿತ್ ಕ್ರಾಸ್ತಾ ಅವರ ಕಾರನ್ನು 15 ಸಾವಿರ ರೂಪಾಯಿಗೆ ಬಾಡಿಗೆಗೆ ತಂದಿದ್ದರು.
ಹತ್ಯೆ ಸಂಚಿನಂತೆ ಜು.27ರಂದು ಸಂಜೆ ಸುಹಾಸ್, ಗಿರಿಧರ್ ಮತ್ತು ಮೋಹನ್ ಚರ್ಚೆ ನಡೆಸಿ ತಮಗೆ ಆಗದವರ ಹೆಸರಿನ ಪಟ್ಟಿ ತಯಾರಿಸಿದ್ದರು. ಜು. 28ರ ಬೆಳಗ್ಗೆ ಸುಹಾಸ್ ಮಾರಕಾಸ್ತ್ರಗಳನ್ನು ಸಿದ್ಧಪಡಿಸಿದ್ದನು. ಅಂದು, ಮತ್ತೆ ಚರ್ಚೆ ನಡೆಸಿದಾಗ ಹತ್ಯೆಗೆ ಫಾಜಿಲ್ ಹೆಸರನ್ನು ಫೈನಲ್ ಮಾಡಿದ್ದರು. ನಂತರ ಫಾಜಿಲ್ನ ಚಲನವಲನಗಳ ಮೇಲೆ ಆರೋಪಿಗಳು ನಿಗಾ ಇಡಲು ಆರಂಭಿಸಿದ್ದರು.
ಅಂದು ಸಂಜೆ ಆರೂ ಜನರು ಕಾರಿನಲ್ಲಿ ಬಂದು ಫಾಜಿಲ್ ಬರುವಿಕೆಗಾಗಿ ಕಾಯ್ದಿದ್ದರು. ಸರಿಯಾದ ಸ್ಥಳದಲ್ಲಿ ಫಾಜಿಲ್ ಕಣ್ಣಿಗೆ ಬೀಳುತ್ತಿದ್ದಂತೆ ಸುಹಾಸ್, ಮೋಹನ್, ಅಭೀಷೇಕ್ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಚ್ಚಿ ಪರಾರಿಯಾಗಿದ್ದರು. ಇದೀಗ, ಫಾಜಿಲ್ ಕೊಲೆ ಪ್ರಕರಣದ ಆರೋಪಿ ಸುಹಾಸ್ ಶೆಟ್ಟಿಯನ್ನು ತಲ್ವಾರ್ನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:22 pm, Thu, 1 May 25







