ಉಪ್ಪಿನಂಗಡಿ: ಇನ್ನೇನು ನೇತ್ರಾವತಿ ನದಿಗೆ ಹಾರಿ ಪ್ರಾಣ ಬಿಡಲಿದ್ದ ಮಹಿಳೆ, ದೇವರಂತೆ ಬಂದು ಕಾಪಾಡಿದ ಸಾಕುನಾಯಿ!

ನಾಯಿ ಅತ್ಯಂತ ನಿಷ್ಠೆಯ ಪ್ರಾಣಿ ಎನ್ನುತ್ತಾರೆ. ಇದು ಹೌದೆಂಬುದು ಕೂಡ ಆಗಾಗ ಸಾಬೀತಾಗುತ್ತಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದ ಸಿನಿಮೀಯ ಘಟನೆಯೊಂದರಲ್ಲಿ ಸಾಕು ನಾಯಿಯೊಂದು ನಾಲ್ಕು ಕಿಲೋಮೀಟರ್ ಹಿಂಬಾಲಿಸಿಕೊಂಡು ಮನೆಯೊಡತಿಯ ಪ್ರಾಣವನ್ನು ರಕ್ಷಿಸಿದೆ. ನೇತ್ರಾವತಿ ನದಿಗೆ ಹಾರಿ ಪ್ರಾಣಬಿಡಲು ಆಕೆ ತೆರಳುತ್ತಿದ್ದಾಳೆ ಎಂಬುದು ಅದಕ್ಕೆ ಅದ್ಹೇಗೆ ತಿಳಿಯಿತೋ! ಮಾನವೀಯತೆ ಮೆರೆದ ಶ್ವಾನದ ಸ್ವಾರಸ್ಯಕರ ಸುದ್ದಿ ಇಲ್ಲಿದೆ.

ಉಪ್ಪಿನಂಗಡಿ: ಇನ್ನೇನು ನೇತ್ರಾವತಿ ನದಿಗೆ ಹಾರಿ ಪ್ರಾಣ ಬಿಡಲಿದ್ದ ಮಹಿಳೆ, ದೇವರಂತೆ ಬಂದು ಕಾಪಾಡಿದ ಸಾಕುನಾಯಿ!
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:Jun 29, 2024 | 5:00 PM

ಉಪ್ಪಿನಂಗಡಿ, ಜೂನ್ 29: ನೇತ್ರಾವತಿ ನದಿಗೆ ಹಾರಿ ಪ್ರಾಣ ಬಿಡಲು ಯತ್ನಿಸಿದ ಮಹಿಳೆಯೊಬ್ಬರನ್ನು ಸಾಕುನಾಯಿ ರಕ್ಷಿಸಿದ ಸಿನಿಮೀಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ. ಉಪ್ಪಿನಂಗಡಿ ಸಮೀಪದ ಪಿಲಿಗೂಡಿನ 36 ವರ್ಷದ ಮಹಿಳೆಯೊಬ್ಬರು ಇತ್ತೀಚೆಗೆ ಪತಿಯೊಂದಿಗೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ನಾಲ್ಕು ಕಿಲೋ ಮೀಟರ್ ದೂರ ನಡೆದುಕೊಂಡು ಬಂದು ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಗೆ ಹಾರಲು ಮುಂದಾಗಿದ್ದರು. ಆದರೆ, ನಾಯಿಯಿಂದಾಗಿ ಅವರ ಜೀವ ಉಳಿದಿದೆ.

ನಾಲ್ಕು ಕಿಲೋಮೀಟರ್ ಹಿಂಬಾಲಿಸಿದ ನಾಯಿ

ಮಹಿಳೆ ಮತ್ತು ಆಕೆಯ ಪತಿಯ ನಡುವೆ ಗುರುವಾರ ರಾತ್ರಿ ತೀವ್ರ ಜಗಳವಾಗಿತ್ತು ಎನ್ನಲಾಗಿದೆ. ನಂತರ ಮಹಿಳೆ ಮನೆಯನ್ನು ತೊರೆದು ನೇತ್ರಾವತಿ ನದಿಯ ಕಡೆಗೆ ನಡೆದುಕೊಂಡು ಹೋಗಿದ್ದಾರೆ. ಈ ವೇಳೆ ಆಕೆಗೆ ತಿಳಿಯದಂತೆ ಮನೆಯ ಸಾಕು ನಾಯಿ ಅವಳನ್ನು ಹಿಂಬಾಲಿಸಿದೆ. ಮಹಿಳೆ ಇನ್ನೇನು ಸೇತುವೆಯ ಮೇಲಿನ ತಡೆ ಗೋಡೆಯನ್ನು ಹತ್ತಿ ನೇತ್ರಾವತಿ ನದಿಗೆ ಜಿಗಿಯಬೇಕು ಎನ್ನುವಷ್ಟರಲ್ಲಿ, ಶ್ವಾನವು ಆಕೆಯ ಚೂಡಿದಾರ್ ಅನ್ನು ಕಚ್ಚಿ ಎಳೆದಾಡಿದೆ. ಜತೆಗೆ ಜೋರಾಗಿ ಬೊಗಳಲು ಪ್ರಾರಂಭಿಸಿದೆ. ಇದು ಅಕ್ಕಪಕ್ಕದ ಜನರ ಗಮನ ಸೆಳೆಯಲು ಕಾರಣವಾಯಿತು.

ನಾಯಿಯ ನಿರಂತರ ಬೊಗಳುವಿಕೆ ಗಮನಿಸಿದ ದ್ವಿಚಕ್ರ ವಾಹನ ಸವಾರರಿಬ್ಬರು ಸ್ಥಳಕ್ಕೆ ಧಾವಿಸಿದರು. ಅವರು ಮಹಿಳೆಯನ್ನು ನದಿಗೆ ಹಾರುವುದರಿಂದ ತಪ್ಪಿಸುವಲ್ಲಿ ಯಶಸ್ವಿಯಾದರು. ಪರಿಣಾಮವಾಗಿ ದುರಂತವೊಂದು ತಪ್ಪಿಹೋಗಿದೆ. ಸದ್ಯ ಮಹಿಳೆ ಆಕೆಯ ಸ್ನೇಹಿತೆಯ ನಿವಾಸದಲ್ಲಿದ್ದಾರೆ.

ಇದನ್ನೂ ಓದಿ: ಪುತ್ತೂರಿನಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಹೊತ್ತಿ ಉರಿದ ಮನೆ, ಕಲ್ಲುರ್ಟಿ ದೈವದ ಪೀಠಕ್ಕೆ ತಗಲದ ಬೆಂಕಿ

ಮಹಿಳೆ ಬೆಂಗಳೂರು ಮೂಲದವರಾಗಿದ್ದು, ಕೆಲವು ವರ್ಷಗಳ ಹಿಂದೆ ಪಿಲಿಗೂಡಿನ ಯುವಕನ ಜತೆ ಮದುವೆಯಾಗಿದ್ದರು. ಆಕೆಯ ಪತಿ ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದು, ದಂಪತಿ ಮಧ್ಯೆ ಪದೇ ಪದೇ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಸಾಕು ನಾಯಿ ತನ್ನ ಯಜಮಾನಿಯನ್ನು ರಕ್ಷಿಸಿದ್ದಕ್ಕೆ ಇದೀಗ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:45 pm, Sat, 29 June 24